ನವದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ಭದ್ರತೆ ಹಿತದೃಷ್ಟಿಯಿಂದ ಡಿಜಿಟಲ್ ಮತ್ತು ಆನ್ ಲೈನ್ ಮಾರುಕಟ್ಟೆಗಳಲ್ಲಿ ಅಪಾಯಕಾರಿ ರಾಸಾಯನಿಕ, ಸ್ಪೋಟಕ ವಸ್ತುಗಳ ಮಾರಾಟ ನಿಷೇಧಿಸಿದೆ.
ಅಮೋನಿಯಂ ನೈಟ್ರೇಟ್, ಪಿಇಟಿಎನ್, ಗನ್ ಪೌಡರ್ ಮತ್ತು ಪಿಕ್ರಿಕ್ ಆಸಿಡ್ ಸೇರಿದಂತೆ ಅಪಾಯಕಾರಿ ವಸ್ತುಗಳ ಜಾಹೀರಾತು ಮತ್ತು ಮತ್ತು ಮಾರಾಟ ಮಾಡದಂತೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಈ ಸಂಬಂಧ CCPA, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಜತೆ ಅಗತ್ಯ ಮಾಹಿತಿ ಸಹ ಹಂಚಿಕೊಂಡಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ನಿಬಂಧನೆಗಳ ಅಡಿಯಲ್ಲಿ CCPA ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಮತ್ತು ಸ್ಫೋಟಕ ವಸ್ತುಗಳ ಮಾರಾಟ ನಿಷೇಧಿಸಿದೆ. ಅಲ್ಲದೆ, ಅನಧಿಕೃತ ಆನ್‌ಲೈನ್ ಮಾರಾಟ ಮತ್ತು ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ದೃಢಪಡಿಸಿದೆ.
ನೋಟಿಸ್ ಜಾರಿ: ರಾಸಾಯನಿಕ, ಸ್ಪೋಟಕ ವಸ್ತುಗಳ ಮಾರಾಟ ಮತ್ತು ಜಾಹೀರಾತು ವಿರುದ್ಧ ಪ್ರಮುಖ ಡಿಜಿಟಲ್, ಇ-ಕಾಮರ್ಸ್ ವೇದಿಕೆಗಳಿಗೆ CCPA ನೋಟಿಸ್ ಸಹ ಜಾರಿ ಮಾಡಿದೆ. ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳಾದ ಇಂಡಿಯಾ ಮಾರ್ಟ್ , ಜಸ್ಟ್ ಡಯಲ್ , ಸಿಗ್ಮಾ-ಆಲ್ಡ್ರಿಚ್ ಇಂಡಿಯಾ, ಡಯಲ್4ಟ್ರೇಡ್ ಸಂಸ್ಥೆಗಳಿಗೆ ಆಗಲೇ ನೋಟಿಸ್ ನೀಡಲಾಗಿದೆ.
ಅಮೋನಿಯಂ ನೈಟ್ರೇಟ್, ಗನ್ ಪೌಡರ್, ಪಿಕ್ರಿಕ್ ಆಮ್ಲ, ಪೆಂಟಾಎರಿಥ್ರಿಟಾಲ್, ಟೆಟ್ರಾನೈಟ್ರೇಟ್ (PETN) ಅಂತಹ ಅಪಾಯಕಾರಿ ವಸ್ತುಗಳನ್ನು ಅಥವಾ ಇವನ್ನು ಹೇಳಬಹುದಾದ ವಸ್ತುಗಳ ಜಾಹೀರಾತು, ಮಾರಾಟ ಸಂಬಂಧ ಒಟ್ಟು 8 ನೋಟಿಸ್‌ಗಳನ್ನು ನೀಡಿದೆ.
ಈ ಕಾಮರ್ಸ್ ಸಂಸ್ಥೆಗಳಲ್ಲಿ ಅಸುರಕ್ಷತೆ ಮತ್ತು ಅಪಾಯಕಾರಿ ಎಂದು ಗುರುತಿಸಿದ ರಾಸಾಯನಿಕಗಳು, ಸ್ಫೋಟಕಗಳು, ಪೆಟ್ರೋಲಿಯಂ ವಸ್ತುಗಳ ಮಾರಾಟ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯವನ್ನುಂಟು ಮಾಡಬಹುದು. ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದವಾಗಬಹುದು. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು CCPA ತಿಳಿಸಿದೆ.
ಆನ್‌ಲೈನ್ ವೇದಿಕೆಗಳಿಗೆ ಸೂಚನೆ: ಇ-ಕಾಮರ್ಸ್ ಸಂಸ್ಥೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ CCPA ಮಹತ್ತರ ಸೂಚನೆಗಳನ್ನು ನೀಡಿದೆ. ಅಪಾಯಕಾರಿ ವಸ್ತುಗಳ ಮಾರಾಟಗಾರರ ಮಾಹಿತಿ, ಪರವಾನಗಿ ಅನುಸರಣೆ,
ಖರೀದಿದಾರ ಪರಿಶೀಲನಾ ಕಾರ್ಯ ವಿಧಾನ, ಮಾರಾಟದ ಪ್ರಮಾಣ, ಆಮದು ಸಂಪೂರ್ಣ ಮಾಹಿತಿ ಒದಗಿಸಬೇಕೆಂದು ಸೂಚಿಸಿದೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮಧ್ಯವರ್ತಿಗಳು ಅಪಾಯಕಾರಿ ವಸ್ತುಗಳ ಜಾಹೀರಾತು, ಮಾರಾಟ ಅನುಮತಿಸುವ ಮೊದಲು ಕಾನೂನು ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು CCPA ಸೂಚಿಸಿದೆ.
PESO ಜತೆ CCPA ಸಭೆ: ಈ ಕಾಮರ್ಸ್ ಸಂಸ್ಥೆಗಳಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿ ತಡೆಗಟ್ಟಲು, ಅಪಾಯಕಾರಿ ವಸ್ತುಗಳ ಮಾರಾಟ ತಡೆಯುವ ಸಂಬಂಧ ಚರ್ಚಿಸಲು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಅಧಿಕಾರಿಗಳೊಂದಿಗೆ CCPA ಸಭೆ ಸಹ ಕರೆದಿದೆ.
