ಬೆಂಗಳೂರು: ಬನ್ನೇರುಘಟ್ಟ ಮೃಗಾಲಯದಲ್ಲಿ ನಿನ್ನೆ ರಾತ್ರಿ ಜನಿಸಿರುವ ನೀರಾನೆ ಮರಿಯ ಆರೋಗ್ಯದ ಬಗ್ಗೆ ತೀವ್ರ ಗಮನ ಹರಿಸಿ, ಈ ನವಜಾತ ನೀರಾನೆ ಮರಿ ಹೆಣ್ಣಾಗಿದ್ದಲ್ಲಿ ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯರಾಗಿದ್ದ ದಿವಂಗತ ಡಾ. ಸಮೀಕ್ಷಾ ರೆಡ್ಡಿ ಗೌರವಾರ್ಥ ‘ಸಮೀಕ್ಷಾ’ ಎಂದು ಹೆಸರಿಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಬನ್ನೇರುಘಟ್ಟದಲ್ಲಿ 17 ವರ್ಷದ ದಶ್ಯ ನೀರಾನೆಯು ಮರಿಗೆ ಜನ್ಮ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಕಳೆದ ಬಾರಿ ಇದೇ ನೀರಾನೆ ಜನ್ಮ ನೀಡಿದ್ದ ಮರಿ ಸೋಂಕಿನಿಂದ ಮೃತಪಟ್ಟಿತ್ತು. ಈ ನಿಟ್ಟಿನಲ್ಲಿ ಮರಿಯ ಆರೋಗ್ಯದ ಬಗ್ಗೆ ಸತತ ನಿಗಾ ಇಟ್ಟು, ಯಾವುದೇ ಸೋಂಕು ತಗುಲದಂತೆ ಕಟ್ಟು ನಿಟ್ಟಾಗಿ ಪ್ರಮಾಣಿತ ಕಾರ್ಯಾಚರಣೆ ಮಾನದಂಡಗಳನ್ನು ಅನುಸರಿಸಲು ಸಚಿವರು ನಿರ್ದೇಶಿಸಿದ್ದಾರೆ.
ಈ ನವಜಾತ ಮರಿಯ ಆರೋಗ್ಯದ ಖಾತ್ರಿ ಪಡಿಸಿಕೊಂಡು ಜೂನ್ 4ರಂದು ದಕ್ಷಿಣ ಆಫ್ರಿಕಾದಿಂದ ತರಲಾಗಿರುವ ಚೀತಾಗಳನ್ನು ಸಾರ್ವಜನಿಕ ವೀಕ್ಷಣಾ ಆವರಣಕ್ಕೆ ಬಿಡುವ ಸಂದರ್ಭದಲ್ಲಿ ಈ ಮರಿಗೆ ಸಮೀಕ್ಷಾ ಎಂದು ನಾಮಕರಣ ಮಾಡಲೂ ಸೂಚಿಸಿದ್ದಾರೆ.
ಶಿವಮೊಗ್ಗ ಬಳಿಯ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಗರ್ಭಿಣಿಯಾಗಿದ್ದ ಹಂಸಿಣಿ ನೀರಾನೆ ಚಿಕಿತ್ಸೆಗೆ ತೆರಳಿದ್ದ ಯುವ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ನೀರಾನೆ ದಾಳಿ ಮಾಡಿತ್ತು. ಚಿಕಿತ್ಸೆ ಫಲ ಕಾಣದೆ ಅವರು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಮೃತ ವೈದ್ಯೆಯ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳಿದ್ದ ಈಶ್ವರ ಖಂಡ್ರೆ ಅವರು ಒಂದು ನವಜಾತ ವನ್ಯಜೀವಿಗೆ ಸಮೀಕ್ಷಾ ಹೆಸರಿಡುವ ಪ್ರಸ್ತಾಪ ಮಾಡಿದ್ದರು. ಅದರಂತೆ ಇಂದು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಆದೇಶ ನೀಡಿದ್ದಾರೆ.
