ಸಮಗ್ರ ಸುದ್ದಿ

ದೇಶದ ಪಡಿತರ ವ್ಯವಸ್ಥೆಗೆ ‘ಸಾರ್ಥಕ್ ಪಿಡಿಎಸ್ ‘ ಯೋಜನೆ ಹೊಸ ಸ್ಪರ್ಶ | ₹25,530 ಕೋಟಿ ಅನುದಾನ ವೆಚ್ಚಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

Share

ನವದೆಹಲಿ: ಕೇಂದ್ರ ಸರ್ಕಾರ ದೇಶದ ಪ್ರತಿ ನಾಗರಿಕರಿಗೂ ಆಹಾರ ಭದ್ರತೆ ಮತ್ತು ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಅತ್ಯಂತ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮತ್ತೊಂದು ಹೊಸ ಹೆಜ್ಜೆ ಇರಿಸಿದ್ದು, ಇದೀಗ “ಸಾರ್ಥಕ್ ಪಿಡಿಎಸ್” ಯೋಜನೆಗೆ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಈ ಹೊಸ ಯೋಜನೆ ಜಾರಿಗೆ ಸಮ್ಮತಿ ಸೂಚಿಸಿತೆಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರ, ದೇಶದ ಜನರಿಗೆ ಸಾಮಾಜಿಕ ಮತ್ತು ಕಾನೂನು ಬದ್ಧತೆ ಜತೆಗೆ ಅಗತ್ಯ, ಗುಣಮಟ್ಟದ ಆಹಾರ ಧಾನ್ಯಗಳ ಲಭ್ಯತೆಯನ್ನೂ ಖಚಿತಪಡಿಸಿದೆ. ಅದರಂತೆ NFSA ಅಡಿಯಲ್ಲಿ 81.35 ಕೋಟಿ ಜನರಿಗೆ ಆಹಾರ ಧಾನ್ಯ ಪೂರೈಸುವ ನಿಟ್ಟಿನಲ್ಲಿ “ಸಾರ್ಥಕ್ ಪಿಡಿಎಸ್” ಯೋಜನೆ ಪರಿಣಾಮಕಾರಿಯಾಗಲಿದೆ ಎಂದಿದ್ದಾರೆ.

₹ 25,530 ಕೋಟಿ ಅನುದಾನ: 16ನೇ ಹಣಕಾಸು ಆಯೋಗದ ಅವಧಿಯಲ್ಲಿ “ಸಾರ್ಥಕ್ ಪಿಡಿಎಸ್” ಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ₹ 25,530 ಕೋಟಿ ಅನುದಾನ ಒದಗಿಸಿ ಅನುಮೋದನೆ ನೀಡಿದೆ. ದೇಶದ ಪಡಿತರ ವ್ಯವಸ್ಥೆಯಲ್ಲಿ ಇದೊಂದು ಸುಧಾರಿತ ತಂತ್ರಜ್ಞಾನದ ಯೋಜನೆಯಾಗಿ 31.03.2031ರವರೆಗೆ 5 ವರ್ಷಗಳ ಕಾಲ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಪಡಿತರ ಸಾಗಣೆ, ಆಹಾರ ಧಾನ್ಯಗಳ ನಿರ್ವಹಣೆ, FPS ವಿತರಕರ ಮಾರ್ಜಿನ್‌ಗಾಗಿ ಮಾಡುವ ವೆಚ್ಚವನ್ನು ಪೂರೈಸಲು ‘ಸಾರ್ಥಕ್ ಪಿಡಿಎಸ್ ‘ ಒಂದು ಸಾರ್ಥಕ್ಯದ ಯೋಜನೆಯಾಗಿದ್ದು, ಇದರ ಮೂಲಕ ಕೇಂದ್ರ ನೆರವಿನ ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

‘ಸಾರ್ಥಕ್ ಪಿಡಿಎಸ್’ ಅನ್ನು ಎರೆಡು ಯೋಜನೆಗಳನ್ನು ಸಂಯೋಜಿಸಿ ಒಂದು ಛತ್ರಿ ಯೋಜನೆಯಾಗಿ ರೂಪಿಸಿದ್ದು, ಇದು ಆಯಾ ರಾಜ್ಯದೊಳಗೆ ಆಹಾರ ಧಾನ್ಯ ಸಾಗಣೆ, ರಾಜ್ಯ ಸಂಸ್ಥೆಗಳಿಗೆ ಸಹಾಯ ಮತ್ತು NFSA ಅಡಿಯಲ್ಲಿ FPS ವಿತರಕರ ಲಾಭಾಂಶ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ, SMART PDS, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 (NFSA) ಅನುಷ್ಠಾನವನ್ನು ಬಲಪಡಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.


Share

You cannot copy content of this page