ಸಮಗ್ರ ಸುದ್ದಿ

ಬನ್ನೇರಘಟ್ಟ ರಸ್ತೆಯಲ್ಲಿ ಜಲಾವೃತವಾಗದಂತೆ ಯೋಜನೆ ರೂಪಿಸಿ: ಮಹೇಶ್ವರ್ ರಾವ್

Share

ಬೆಂಗಳೂರು:ಬನ್ನೇರಘಟ್ಟ ರಸ್ತೆಯಲ್ಲಿ ಜಲಾವೃತವಾಗದಂತೆ ಯೋಜನೆ ರೂಪಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ಇತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಬನ್ನೇರಘಟ್ಟ ರಸ್ತೆಯ ರೈನ್‌ಬೋ ಮಕ್ಕಳ ಆಸ್ಪತ್ರೆ ಬಳಿ ಮಳೆಯಾದಾಗಲೆಲ್ಲಾ ಜಲಾವೃತವಾಗುತ್ತಿದ್ದು, ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಸಂಬಂಧ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಬನ್ನೇರಘಟ್ಟ ರಸ್ತೆಯ ರೈನ್‌ಬೋ ಮಕ್ಕಳ ಆಸ್ಪತ್ರೆ ಬಳಿಯ ರಸ್ತೆಯು ರಾಜಕಾಲುವೆಯ ಮಟ್ಟಕ್ಕಿಂತ ತಗ್ಗಿರುವ ಪರಿಣಾಮ, ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾದಾಗ ಸೈಡ್ ಡ್ರೈನ್‌ಗಳಿಂದ ನೀರು ಹಿಮ್ಮುಖವಾಗಿ ಹರಿದು ರಸ್ತೆಯಲ್ಲಿ ಜಲಾವೃತ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮಳೆನೀರುಗಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಯೋಜನೆ ರೂಪಿಸಬೇಕು. ಜೊತೆಗೆ ರಾಜಕಾಲುವೆಯಲ್ಲಿ ಸಂಪೂರ್ಣವಾಗಿ ಹೂಳೆತ್ತುವಂತೆ ಸೂಚನೆ ನೀಡಿದರು.

ಕೊಳಚೆ ನೀರು ಬರುವುದನ್ನು ತಡೆಯಿರಿ:

ಬನ್ನೇರಘಟ್ಟ ರಸ್ತೆಯ ಹುಳಿಮಾವು ಮೆಟ್ರೋ ನಿಲ್ದಾಣದ ಬಳಿಯಿರುವ ಮಳೆನೀರುಗಾಲುವೆಯಲ್ಲಿ ಕೊಳಚೆ ನೀರು ಹರಿದು ಬರುತ್ತಿರುವುದನ್ನು ಗಮನಿಸಿ, ಜಲಮಂಡಳಿ ಅಧಿಕಾರಿಗಳು ಮೂಲವನ್ನು ಪತ್ತೆಹಚ್ಚಿ ಕೊಳಚೆ ನೀರು ಮಳೆನೀರುಗಾಲುವೆಗೆ ಸೇರದಂತೆ ಕ್ರಮವಹಿಸಲು ನಿರ್ದೇಶನ ನೀಡಿದರು.

ಇದೇ ಸ್ಥಳದಲ್ಲಿ ಮಳೆನೀರುಗಾಲುವೆಗೆ ಅಡ್ಡಲಾಗಿ ಉಪಯುಕ್ತತೆಗಳು (Utilities) ಇರುವುದರಿಂದ ನೀರಿನ ಹರಿವಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ, ಸ್ಲ್ಯಾಬ್ ಅಳವಡಿಸಿ ಅದರ ಮೇಲ್ಭಾಗದಲ್ಲಿ ಉಪಯುಕ್ತತೆಗಳು ಬರುವಂತೆ ಕ್ರಮವಹಿಸಬೇಕು. ಅಲ್ಲದೆ ಮಳೆನೀರುಗಾಲುವೆಯಲ್ಲಿ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಜಲಮಂಡಳಿ ಕಾಮಗಾರಿ 2 ದಿನಗಳಲ್ಲಿ ಪೂರ್ಣಗೊಳಿಸಿ:

ಬನ್ನೇರಘಟ್ಟ ರಸ್ತೆಯಲ್ಲಿ ಮೊದಲ ಹಂತವಾಗಿ ವೆಗಾಸಿಟಿ ಮಾಲ್‌ನಿಂದ ಅರಕೆರೆ ಸಿಗ್ನಲ್‌ವರೆಗೆ 1.5 ಕಿ.ಮೀ. ಉದ್ದದ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ 900 ಡಯಾ ಪೈಪ್ ಅಳವಡಿಕೆ ಹಾಗೂ ಮುಖ್ಯ ಚರಂಡಿ ಪೈಪ್‌ಗೆ ಮನೆಗಳಿಂದ ಬರುವ ಉಪ-ಪೈಪ್ ಸಂಪರ್ಕ ಜೋಡಣೆಯ ಕಾಮಗಾರಿಯನ್ನು 2 ದಿನಗಳಲ್ಲಿ ಪೂರ್ಣಗೊಳಿಸಬೇಕು. ನಂತರ ಪಾಲಿಕೆ ವತಿಯಿಂದ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.

ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕ, ಎರಡನೇ ಹಂತದಲ್ಲಿ ಅರಕೆರೆ ಸಿಗ್ನಲ್‌ನಿಂದ ಹುಳಿಮಾವು ಮೆಟ್ರೋ ನಿಲ್ದಾಣದವರೆಗೆ 1 ಕಿ.ಮೀ. ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.

ಸಿಲ್ಕ್ ಬೋರ್ಡ್ ಜಂಕ್ಷನ್ ಪರಿಶೀಲನೆ:

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಉಂಟಾಗುವ ಜಲಾವೃತ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ರಸ್ತೆ ಭಾಗದಲ್ಲಿ ಹಾದು ಹೋಗುವ ರಾಜಕಾಲುವೆಯ ಸಾಮರ್ಥ್ಯವನ್ನು 1.5 ಮೀ.ನಿಂದ 3.5 ಮೀ.ಗೆ ಹೆಚ್ಚಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಮೇಲ್ಭಾಗದಲ್ಲಿ ಸ್ಟೀಲ್ ಗ್ರೇಟಿಂಗ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಸಂಬಂಧ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ನಂತರ ಉಳಿದ ಎರಡು ಭಾಗಗಳ ಕಲ್ವರ್ಟ್ ಕಾಮಗಾರಿಯನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಂಡು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.

ಕಾಲುವೆ ನಿರ್ಮಾಣಕ್ಕೆ ಸರ್ವೇ ಮಾಡಿ ವರದಿ ನೀಡಿ:

ಹೆಚ್.ಎಸ್.ಆರ್ ಲೇಔಟ್‌ನಲ್ಲಿ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹೊಸದಾಗಿ ಕಾಲುವೆ ನಿರ್ಮಿಸಲು ಸರ್ವೇ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಫ್ರೀ ಲೆಫ್ಟ್ ನಿರ್ಮಾಣಕ್ಕೆ ಕ್ರಮವಹಿಸಿ:

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬೊಮ್ಮನಹಳ್ಳಿ ಕಡೆಯಿಂದ ಬಿಟಿಎಂ ಲೇಔಟ್ ಮಾರ್ಗವಾಗಿ ತೆರಳುವ ಕಾರ್ನರ್ ಜಾಗವನ್ನು ಮೆಟ್ರೋ ಇಲಾಖೆ ವಶಪಡಿಸಿಕೊಂಡಿದೆ. ಆದರೆ, ಸದರಿ ಜಾಗದಲ್ಲಿರುವ ಬಾಲಾಜಿ ಕಾಂಪ್ಲೆಕ್ಸ್ ಇನ್ನೂ ತೆರವುಗೊಳಿಸದಿರುವುದನ್ನು ಗಮನಿಸಿ, ದೂರವಾಣಿ ಮೂಲಕ ಮೆಟ್ರೋ ಅಧಿಕಾರಿಗಳೊಂದಿಗೆ ಮಾತನಾಡಿ ಕಾಂಪ್ಲೆಕ್ಸ್ ತೆರವುಗೊಳಿಸಿ ಫ್ರೀ ಲೆಫ್ಟ್ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸೂಚಿಸಿದರು.

ಜಂಕ್ಷನ್ ಅಭಿವೃದ್ಧಿ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ:

ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯ ಕೆಳಭಾಗದಲ್ಲಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ ಸುಂದರೀಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.

ಮಡಿವಾಳ ಕೆರೆ ಅಭಿವೃದ್ಧಿಗೆ ಕ್ರಮವಹಿಸಿ:

ಮಡಿವಾಳ ಕೆರೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೆರೆ ಬಂಡ್ ಅಭಿವೃದ್ಧಿ, ಇನ್‌ಲೆಟ್ ಬಳಿ ಸಿಲ್ಟ್ ಟ್ರ್ಯಾಪ್, ಔಟ್‌ಲೆಟ್ ಬಳಿ ಕಲ್ವರ್ಟ್ ನಿರ್ಮಾಣ, ವಾಕ್‌ವೇ ಅಭಿವೃದ್ಧಿ, ಗೇಟ್, ಸೂಚನಾ ನಾಮಫಲಕ, ಭದ್ರತಾ ಸಿಬ್ಬಂದಿ ಕೊಠಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದೇ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ:

ಸೆಂಟ್ ಜಾನ್ಸ್ ಬಳಿಯ ಪೋರ್ಟಲ್ ಫ್ರೇಮ್ ಕಾಮಗಾರಿಯನ್ನು ಪರಿಶೀಲಿಸಿದ ವೇಳೆ, ದೊಮ್ಮಲೂರು ಕಡೆಯ ರ‍್ಯಾಂಪ್ ಅನ್ನು ವಾರದೊಳಗೆ ಹಾಗೂ ಮಡಿವಾಳ ಕಡೆಯ ರ‍್ಯಾಂಪ್ ಅನ್ನು 60 ದಿನಗಳಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ಹೆಚ್ಚುವರಿಯಾಗಿ ಎರಡು ಗ್ಯಾಂಗ್‌ಗಳನ್ನು ನಿಯೋಜಿಸಿಕೊಂಡು, ಬೇರಿಂಗ್ ಹಾಗೂ ಎಕ್ಸ್‌ಪ್ಯಾಂಶನ್ ಜೋಡಣೆ ಕಾಮಗಾರಿಗೆ ವೇಗ ನೀಡುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಈ ವೇಳೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ, ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್., ಮುಖ್ಯ ಅಭಿಯಂತರರಾದ ರವಿ ಹಾಗೂ ರಾಜೇಶ್, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page