ಸಮಗ್ರ ಸುದ್ದಿ

ರಾಜಕಾರಣಿಗಳ ಜೊತೆ ಪತ್ರಕರ್ತರಿಗೂ ಸಾಮಾಜಿಕ ಜವಾಬ್ದಾರಿ ಇದೆ: ಬಸವರಾಜ ಬೊಮ್ಮಾಯಿ

Share

ಚಿಕ್ಕಬಳ್ಳಾಪುರ: ರಾಜಕಾರಣಿ ಹಾಗೂ ಅಧಿಕಾರದಲ್ಲಿರುವವರಿಗೆ ಸಾರ್ವಜನಿಕವಾಗಿರುವ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಪತ್ರಕರ್ತರಿಗೂ ಇದೆ. ನಾವು ತೆಗೆದುಕೊಳ್ಳುವ ತೀರ್ಮಾನ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ತಾವು ಬರೆಯುವ ವರದಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಬುದ್ದಿವಂತಿಕೆ ಸಮಾಜದ ಒಳಿತಿಗೆ ಬಳಕೆ ಆಗಬೇಕು. ಸಮಾಜದಲ್ಲಿನ ದೃಷ್ಕೃತ್ಯ ಮುಚ್ಚುವುದಕ್ಕೆ ಬಳಕೆ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ ಕರೆಯುವುದು ಬಹಳ ಸಹಜ.ಆದರೆ ಅಧಿಕಾರದಲ್ಲಿ ಇಲ್ಲದಿರುವಾಗ ನನ್ನನ್ನು ನೆನಪು ಮಾಡಿಕೊಂಡು ಕರೆದಿರುವುದು ನಿಮ್ಮದೊಡ್ಡ ಗುಣ. ಇದು ನಿಮ್ಮ ಕೃತಜ್ಞತಾ ಗುಣ. ಬೈಬಲ್‌ನಲ್ಲಿ ಹೇಳುತ್ತಾರೆ ಕೃತಜ್ಞತೆ ಇಲ್ಲದವರು ಮನುಷ್ಯರು ಅಲ್ಲವೇ ಅಲ್ಲ. ಜಾಗತೀಕರಣ, ಖಾಸಗೀಕರಣದ ನಡುವೆ ನಾವು ಅಂತಕರಣವನ್ನು ಮರೆಯುತ್ತಿದ್ದೇವೆ. ಅಂತಕರಣ ಇಲ್ಲದಿರುವ ಮನುಷ್ಯರ ಸಂಬಂಧವೇ ಇರುವುದಿಲ್ಲ. ಅಂತದರಲಿ ತಾವು ಅಂತಕರಣವನ್ನು ಪುನರ್ ಸ್ಥಾಪನೆ ಮಾಡಿದ್ದೀರಿ ಎಂದು ಹೇಳಿದರು.

ಪ್ರಶ್ನಿಸುವ ಅಧಿಕಾರ

ಯಾವುದಾದರೂ ಒಂದು ಶಕ್ತಿ ಬೆಳೆಯಬೇಕೆಂದರೆ ಅದನ್ನು ಪ್ರಶ್ನೆ ಮಾಡಲೇಬೇಕು. ನಂಬಿಕೆಗೆ ಯಾವುದೇ ಆಧಾರ ಇಲ್ಲ. ಆದರೆ, ವಿಜ್ಞಾನಕ್ಕೆ ಆಧಾರ ಬೇಕು. ವಿಜ್ಞಾನಕ್ಕೆ ತರ್ಕಬದ್ಧ ಚಿಂತನೆ ಬೇಕಾದರೆ ಹೊಸ ಚಿಂತನೆ ಹುಟ್ಟು ಹಾಕುತ್ತದೆ. ಪ್ರಜಾಪಭುತ್ತದಲ್ಲಿ ಪಶ್ನೆ ಕೇಳುವ ಅಧಿಕಾರ ಕೊಟ್ಟಿರುವುದು ಪತ್ರಕರ್ತರಿಗೆ ನೀವು ಎಷ್ಟು ಅರ್ಥಗರ್ಭಿತವಾದ ಪ್ರಶ್ನೆಗಳನ್ನು ಕೇಳುತ್ತಿರೋ ಅಷ್ಟು ಒಳ್ಳೆಯ ವಿಚಾರಗಳು ಸಮಾಜಕಷ್ಟೇ ಅಲ್ಲದೇ ರಾಜಕಾರಣಕ್ಕೂ ಬರುತ್ತದೆ.

ನೀವು ಕೇಳುವ ಪಶ್ನೆ ಸರಳವಾಗಿದ್ದರೆ ಸರಿಯಾದ ಉತ್ತರ ಬರುವುದಿಲ್ಲ. ಪಶ್ನೆ ಕೇಳುವ ಹಕ್ಕು ಪತ್ರಕರ್ತರಿಗಿದೆ. ಇತ್ತೀಚಿನ ದಿನಗಳಲ್ಲಿ ಬಹಳ ಕಂಫರ್ಟ್ ಜೋನ್ ಇದೆ. ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ಒಳ್ಳೆಯ ಸಂಬಂಧ ಇದೆ. ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಒಳ್ಳೆಯ ಸಂಬಂಧ ಇದ್ದರೆ ಕಳ್ಳರು ಪೊಲೀಸರ ನಡುವಿನ ಸಂಬಂಧ ಇದ್ದಂಗೆ ಆಗಿದೆ. ಎಲ್ಲಿವರೆಗೂ ಕಠಿಣ ಪಶ್ನೆ ಕೇಳುವುದಿಲ್ಲವೋ ಅಲ್ಲಿಯವರೆಗೂ ರಾಜಕಾರಣಿಗಳಿಂದ ಒಳ್ಳೆಯ ಆಡಳಿತ ನಿರೀಕ್ಷೆ ಮಾಡಬೇಡಿ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಮದನ್ ಮೋಹನ್ ಹಿರಿಯ ಪತ್ರಕರ್ತರಿದ್ದರು. ಅವರು ಪತ್ರಿಕಾಗೋಷ್ಠಿಗೆ ಬಂದಾಗ ದೊಡ್ಡವರಿಗೂ ಭಯವಾಗುತ್ತಿತ್ತು. ಅವರು ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ, ಅವರು ಸುದ್ದಿಯನ್ನು ಸಕಾರಾತ್ಮಕವಾಗಿ ಬರೆಯುತ್ತಿದ್ದರು. ಅದು ಒಂದು ಕಲೆ, ಆಡಳಿತಗಾರರಿಗೆ ಒಳ್ಳೆಯ ಪಶ್ನೆ ಕೇಳಿದರೆ ಆಡಳಿತಗಾರರಿಗೂ ಉತ್ತಮ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಎಲ್ಲರ ಮನೆಯಲ್ಲಿಯೂ ಇಡ್ಲಿ ದೋಸೆ ಇದ್ದೇ ಇರುತ್ತದೆ. ಅದರ ಬಗ್ಗೆ ಎಷ್ಟು ದಿನ ಬರೆಯುತ್ತೀರಿ ಎಂದು ಪಶ್ನಿಸಿದರು.

ಗಂಡ ಹೆಂಡತಿ ಸಂಬಂಧ

ಈಗ ಡಿಜಿಟಲ್ ಪತ್ತಿಕೋದ್ಯಮ ಬಂದಿದೆ. ಅದರಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ಅನ್ನುವುದು ಗೊತ್ತಿಲ್ಲ. ರಾಜಕಾರಣಿಗಳಿಗೆ ಪತಕರ್ತರಿಗೆ ಅವಿನಾಭಾವ ಸಂಬಂಧ. ಗಂಡ ಹೆಂಡತಿ ಸಂಬಂಧ ಇದ್ದಹಾಗೆ ಪತ್ರಿಕೆ ಇಲ್ಲದಿದ್ದರೆ ರಾಜಕಾರಣಿಗಳ ಪರಿಸ್ಥಿತಿ ಏನಾಗುತ್ತಿತ್ತು. ಅವರು ಮಾಡಿರುವ ಕೆಲಸ, ಅವರ ಸರ್ಕಾರಕ್ಕೆ ಬೇಕಾಗಿರುವ ಪ್ರಚಾರ ಸಿಗದಿದ್ದರೆ ರಾಜಕಾರಣಿಗೆ ಯಾವುದೇ ಪ್ರಯೋಜನ ಇಲ್ಲ. ಪತ್ರಿಕೆಗಳಿಗೂ ರಾಜಕಾರಣಿಯ ಸುದ್ದಿ ಬರೆಯದಿದ್ದರೆ ಅವರ ಪತ್ರಿಕೆಯನ್ನೂ ಓದುವುದಿಲ್ಲ. ಇದೊಂದು ರೀತಿ ಗಂಡ ಹೆಂಡತಿ ಸಂಬಂಧ ಇದ್ದಹಾಗೆ ಎಂದರು.

ರಾಜಕಾರಣಿಗೆ ನಿವೃತ್ತಿ ಇಲ್ಲ. ರಾಜಕಾರಣಕ್ಕೆ ಬರಲು ಅರ್ಹತೆಯೂ ಇಲ್ಲ. ಹಾಗೇ ಪತ್ರಕರ್ತರಿಗೆ ಎಲ್ಲಿಯವರೆಗೂ ಬರೆಯುವ ಶಕ್ತಿ ಇರುತ್ತದೆಯೋ ಅವರು ಪತ್ರಕರ್ತರೇ, ಸಿದ್ದರಾಮಯ್ಯನವರು ಇವತ್ತು ತಮ್ಮ ಪದವಿಗೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಅವರು ಬಹಳ ಪ್ರಾಮಾಣಿಕವಾಗಿ ಹೇಳಿದ್ದಾರೆ. ರಾಜಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಅದು ಅವರ ಶಕ್ತಿ, ಯಾರು ತಾವು ಮಾಡಿರುವ ಸೇವೆಯನ್ನು ಮುಂದುವರೆಸುತ್ತೇನೆ ಎನ್ನುವ ಸೇವಕರೆ ಜನಪರ ಇರುವ ರಾಜಕಾರಣಿ.

ಪತ್ರಕರ್ತರೂ ಅಷ್ಟೇ ಎಲ್ಲಿಯವರೆಗೂ ಬರೆಯುವ ಇಚ್ಚಾಶಕ್ತಿ ಇದೆಯೋ ಅಲ್ಲಿವರೆಗೂ ನಿಮ್ಮ ವೃತ್ತಿ ಮುಂದುವರೆಸಬಹುದು. ಮೂರನೇಯದ್ದು ಎಷ್ಟು ಸಾರ್ವಜನಿಕವಾಗಿರುವ ಜವಾಬ್ದಾರಿ ರಾಜಕಾರಣಿಗೆ ಅಧಿಕಾರದಲ್ಲಿರುವವರಿಗೆದೆಯೋ ಅಷ್ಟೇ ಪತ್ರಕರ್ತರಿಗೂ ಇದೆ.

ನಾವು ತೆಗೆದುಕೊಳ್ಳುವ ತೀರ್ಮಾನ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ತಾವು ಬರೆಯುವ ವರದಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ರೀತಿಯಲ್ಲಿ ನೀವೂ ಕೂಡ ರಾಜಕಾರಣಿಗಳು, ನಾವು ಪತ್ರಕರ್ತರು. ನಿಮಗೆ ಏನು ಉತ್ತರ ಬೇಕೊ ಅದನ್ನು ಪಶ್ನೆ ಕೇಳುತ್ತೀರಿ. ನಾವೂ ಬುದ್ದಿವಂತರಿದ್ದೇವೆ. ಪತ್ರಿಕೆಯಲ್ಲಿ ಏನು ಬರಬೇಕೊ ಅದನ್ನು ಹೇಳುತ್ತೇವೆ. ಈ ಬುದ್ಧಿವಂತಿಕೆ ಸಮಾಜದ ಒಳಿತಿಗೆ ಬಳಕೆ ಆಗಬೇಕು. ಸಮಾಜದ ದುಷ್ಕೃತ್ಯ ಮುಚ್ಚುವುದಕ್ಕೆ ಬಳಕೆ ಆಗಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಡಾ. ಕೆ. ಸುಧಾಕರ್, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ಬಿ.ಕೆ. ರವಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ರವಿಕುಮಾರ್ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.


Share

You cannot copy content of this page