ಸಮಗ್ರ ಸುದ್ದಿ

ಬೆಂಗಳೂರಿನಲ್ಲಿ 3ನೇ ವಲಯ ಕಾರ್ಯಾಗಾರ ಯಶಸ್ವಿ : “ತರಗತಿಯಿಂದ ನ್ಯಾಯಾಲಯದವರೆಗೆ : ಸಾಮಾಜಿಕ ನ್ಯಾಯದ ವೇಗವರ್ಧಕರಾಗಿ ಕಾನೂನು ವಿದ್ಯಾರ್ಥಿಗಳು”

Share

ಬೆಂಗಳೂರು:ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಎಂ.ಎಸ್. ರಾಮಯ್ಯ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು, ಎಂ.ಎಸ್. ರಾಮಯ್ಯ ಕಾನೂನು ಕಾಲೇಜಿನ ಸಹಯೋಗದೊಂದಿಗೆ “ತರಗತಿಯಿಂದ ನ್ಯಾಯಾಲಯದವರೆಗೆ: ಸಾಮಾಜಿಕ ನ್ಯಾಯದ ವೇಗವರ್ಧಕರಾಗಿ ಕಾನೂನು ವಿದ್ಯಾರ್ಥಿಗಳು” ಎಂಬ ವಿಷಯದ ಕುರಿತು 3ನೇ ವಲಯ ಕಾರ್ಯಾಗಾರವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ಭಾರತದ ಸುಪ್ರೀಂ ಕೋರ್ಟ್‍ನ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜಸ್ಟಿಸ್ ವಿಕ್ರಮ್ ನಾಥ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು.

ಕಾನೂನು ನೆರವು ಉಪಕ್ರಮಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಹಾಗೂ ಕಾನೂನು ಅರಿವನ್ನು ಉತ್ತೇಜಿಸುವಲ್ಲಿ ಕಾನೂನು ವಿದ್ಯಾರ್ಥಿಗಳು ಮತ್ತು ಕಾನೂನು ಶಿಕ್ಷಣ ಸಂಸ್ಥೆಗಳ ಪಾತ್ರದ ಕುರಿತು ಈ ಕಾರ್ಯಾಗಾರದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿಕ್ರಮ್‍ನಾಥ್ ಅವರು ಮಾತನಾಡಿ, ಕಾನೂನು ಶಿಕ್ಷಣವು ಕೇವಲ ತರಗತಿಗಳಿಗೆ ಸೀಮಿತವಾಗದೆ ಸಾಮಾಜಿಕ ಬದಲಾವಣೆ ಮತ್ತು ಸಮಾನತೆಯ ಸಾಧನವಾಗಬೇಕು. ವಿದ್ಯಾರ್ಥಿಗಳು ಕೇವಲ ವಕೀಲರು ಅಥವಾ ನ್ಯಾಯಾಧೀಶರಾಗುವ ಗುರಿ ಹೊಂದದೆ, ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸಂವಿಧಾನದ ವಿಧಿ 39ಂ ಮತ್ತು ಉಚಿತ ಕಾನೂನು ನೆರವಿನ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಮಾತನಾಡಿ, ನ್ಯಾಯ ಎಂಬುದು ಕೇವಲ ನ್ಯಾಯಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ತಮ್ಮ ಹಕ್ಕುಗಳು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕಾನೂನು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಕಾನೂನು ಕಾಲೇಜುಗಳಲ್ಲಿ ಕಾನೂನು ಸೇವಾ ಕ್ಲಿನಿಕ್ ಗಳನ್ನು ಬಲಪಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
 
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅನುಶಿವರಾಮನ್ ಅವರು ಮಾತನಾಡಿ, ತರಗತಿಯಿಂದ ನ್ಯಾಯಾಲಯದವರೆಗಿನ ಪಯಣ ಎಂದರೆ ಕಾನೂನು ಕಲಿಯುವುದರಿಂದ ಹಿಡಿದು ಸಮಾಜ ಸೇವೆ ಮಾಡುವವರೆಗಿನ ಪರಿವರ್ತನೆಯಾಗಿದೆ. ಕಾನೂನು ಶಿಕ್ಷಣವು ಕೇವಲ ಜ್ಞಾನವನ್ನು ಮಾತ್ರವಲ್ಲದೆ ನೈತಿಕತೆ, ಸಹಾನುಭೂತಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕೆ.ಎಸ್.ಎಲ್.ಎಸ್.ಎ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಅವರು ಮಾತನಾಡಿ, ಗ್ರಾಮೀಣ ಮತ್ತು ವಂಚಿತ ಸಮುದಾಯಗಳಿಗೆ ಕಾನೂನು ಅರಿವು ಮತ್ತು ಸಮಾನ ನ್ಯಾಯದ ಪ್ರವೇಶ ಸಿಗುವಂತೆ ಮಾಡುವಲ್ಲಿ ಕಾನೂನು ಸೇವಾ ಕ್ಲಿನಿಕ್‍ಗಳ ಮೂಲಕ ವಿದ್ಯಾರ್ಥಿಗಳು ಗ್ರಾಮ ಸಂಪರ್ಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಬೆಂಗಳೂರು ವಲಯದ ಒಟ್ಟು 97 ಕಾನೂನು ಕಾಲೇಜುಗಳಿಂದ ಸುಮಾರು 1,300 ಕಾನೂನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಮಾಜದ ಬಡ ಮತ್ತು ಹಿಂದುಳಿದ ವರ್ಗದವರಿಗೆ ಕಾನೂನು ನೆರವು ನೀಡುವಲ್ಲಿ ವಿದ್ಯಾರ್ಥಿ ಸಮುದಾಯದ ಕೊಡುಗೆಯನ್ನು ಕಾರ್ಯಾಗಾರದಲ್ಲಿ ಶ್ಲಾಘಿಸಲಾಯಿತು.

ಉದ್ಘಾಟನಾ ಸಮಾರಂಭದ ನಂತರ ಮೂರು ಪ್ರಮುಖ ತಾಂತ್ರಿಕ ಅವಧಿಗಳು ನಡೆದವು.

ಮೊದಲ ಅವಧಿಯಲ್ಲಿ ಹೈಕೋರ್ಟ್ ವಕೀಲರಾದ ಶ್ರೀಧರ್ ಪ್ರಭು ಅವರಿಂದ “ಕಾನೂನು ಸೇವಾ ಶಿಬಿರಗಳು ಮತ್ತು ತಲುಪುವ ಕಾರ್ಯಕ್ರಮಗಳ ಆಯೋಜನೆ: ಕಾನೂನು ಶಿಕ್ಷಣ ಸಂಸ್ಥೆಗಳ ಪಾತ್ರ”,  ಎರಡನೇ ಅವಧಿಯಲ್ಲಿ ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಪಿ. ಮಹೇಶ ಅವರಿಂದ “ಕಾನೂನು ಕಾಲೇಜುಗಳಲ್ಲಿ ಕಾನೂನು ಸೇವಾ ಕ್ಲಿನಿಕ್ ಗಳು”, ಹಾಗೂ ಮೂರನೇ ಅವಧಿಯಲ್ಲಿ  ಕೆ.ಎಸ್.ಎಲ್.ಎಸ್.ಎ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಎಚ್. ಶಶಿಧರ ಶೆಟ್ಟಿ ಅವರಿಂದ. “ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ, 1987 ಮತ್ತು ಅದರ ಉದ್ದೇಶಗಳು” ಕುರಿತ ತಾಂತ್ರಿಕ ಅವಧಿಗಳು ನಡೆದವು. ಕೊನೆಯಲ್ಲಿ ನಡೆದ ಮುಕ್ತ ಸಂವಾದದಲ್ಲಿ ವಿದ್ಯಾರ್ಥಿಗಳು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.


Share

You cannot copy content of this page