ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳನ್ನು ಮೀರಿಸುವಂತಹ ಅತ್ಯುತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕ ಕೆ. ಗೋಪಾಲಯ್ಯ ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ, ಮಾತನಾಡಿದ ಅವರು, ಇಂದು ನಮ್ಮ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಿದ್ದಾರೆ. ಶಾಲೆಗೆ ಅಗತ್ಯವಿರುವ ಸುಸಜ್ಜಿತ ಲ್ಯಾಬ್‌ಗಳು, ಪುಸ್ತಕ ಲೈಬ್ರರಿ, ರೋಬೋಟಿಕ್ ಲ್ಯಾಬ್ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇಂತಹ ಉನ್ನತ ಸೌಕರ್ಯವಿರುವ ಸರ್ಕಾರಿ ಶಾಲೆ ನಮ್ಮ ಕ್ಷೇತ್ರದಲ್ಲಿ ಬೇರೆಲ್ಲೂ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ, 30 x 40 ಸೈಟ್‌ನಲ್ಲಿ ನಿರ್ಮಿಸಲಾಗಿರುವ ಶಾಲೆಯಲ್ಲಿಯೂ ಸಹ 530 ಮಕ್ಕಳು ದಾಖಲಾಗಿ ಓದುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಉಲ್ಲೇಖಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಶ್ಲಾಘನೆ
ಶಾಲೆಯ ಶೈಕ್ಷಣಿಕ ಸಾಧನೆಯನ್ನು ಪ್ರಶಂಸಿಸಿದ ಗೋಪಾಲಯ್ಯನವರು, “ಈ ಬಾರಿ ನಮ್ಮ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ. 99 ರಷ್ಟು ಬಂದಿದ್ದು, ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಅನುತ್ತೀರ್ಣನಾಗಿದ್ದಾನೆ. ಇದು ನಮ್ಮ ಶಿಕ್ಷಕರ ಮತ್ತು ಮಕ್ಕಳ ಪರಿಶ್ರಮಕ್ಕೆ ಸಾಕ್ಷಿ,” ಎಂದು ಹರ್ಷ ವ್ಯಕ್ತಪಡಿಸಿದರು.
ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಸರ್ಕಾರದಿಂದ ಪಠ್ಯಪುಸ್ತಕಗಳು ಸಿಗದ ಕಾರಣ, ನಮ್ಮ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ವತಿಯಿಂದಲೇ ಲಕ್ಷಾಂತರ ರೂಪಾಯಿ ವೆಚ್ಚದ ಅತ್ಯುತ್ತಮ ಗುಣಮಟ್ಟದ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಶ್ರೀ ಸಿದ್ದಗಂಗಾ ಮಠ ಹಾಗೂ ಶ್ರೀ ಆದಿಚುಂಚನಗಿರಿ ಮಠದ ಮಹಾಸ್ವಾಮೀಜಿಯವರನ್ನು ಆಹ್ವಾನಿಸಿ, ಶಾಲೆಯಲ್ಲೇ ಅದ್ದೂರಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು.
ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕೇವಲ ಶಾಲೆಗೆ ಕಳುಹಿಸುವುದಷ್ಟೇ ತಮ್ಮ ಜವಾಬ್ದಾರಿ ಎಂದು ತಿಳಿಯಬಾರದು, ಅವರ ಭವಿಷ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ಕರೆ ನೀಡಿದರು. ಹಾಗೆಯೇ, ಶಾಲೆಗೆ ವಿದ್ಯಾರ್ಥಿಗಳು ಗೈರುಹಾಜರಾದರೆ ತಕ್ಷಣ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಉಚಿತ ನೆರವು:
ನಮ್ಮ ಕ್ಷೇತ್ರದ ಯಾವುದೇ ವಿದ್ಯಾರ್ಥಿ ಐಎಎಸ್, ಐಪಿಎಸ್ ಅಥವಾ ಐಆರ್‌ಎಸ್ ನಂತಹ ಯುಪಿಎಸ್ಸಿ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಿದ್ದರೆ, ಅಂತಹ ಬಡ ವಿದ್ಯಾರ್ಥಿಗಳ ಸಂಪೂರ್ಣ ತರಬೇತಿ ವೆಚ್ಚ ಹಾಗೂ ಶುಲ್ಕವನ್ನು ನಮ್ಮ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು ಎಂದು ಗೋಪಾಲಯ್ಯನವರು ಇದೇ ವೇಳೆ ಮಹತ್ವದ ಘೋಷಣೆ ಮಾಡಿದರು.
ರಾಷ್ಟ್ರ ಮಟ್ಟದಲ್ಲಿ ಶ್ಲಾಘನೆ
ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡ ಶಾಸಕರು, ನಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಗಳು ದೇಶಕ್ಕೇ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಅವರು ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೆಮ್ಮೆಯಿಂದ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬಿಇಒ ತಾರಾನಾಥ್, ಪ್ರಾಂಶುಪಾಲರಾದ ಪ್ರದೀಪ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮಹದೇವಣ್ಣ, ಪುಟ್ಟಸ್ವಾಮಿ, ಉಮಾಪತಿ, ಸತೀಶ್ ಸೇರಿದಂತೆ ಹಲವು ಮುಖಂಡರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
