ಸಮಗ್ರ ಸುದ್ದಿ

ಶಾಂಘೈ ಸಹಕಾರ ಸಂಸ್ಥೆ ಶೃಂಗದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ|ಕಿರ್ಗಿಸ್ತಾನ್ ಹಣಕಾಸು ಸಚಿವರೊಂದಿಗೆ ಉನ್ನತ ಮಟ್ಟದ ಚರ್ಚೆ

Share

ಬಿಷ್ಕೇಕ್ (ಕಿರ್ಗಿಸ್ತಾನ್ ಗಣರಾಜ್ಯ):ಕೈಗಾರಿಕೋತ್ಪಾದನೆ ವಲಯದಲ್ಲಿ ಪರಸ್ಪರ ಸಹಕಾರ ಹೊಂದುವ ನಿಟ್ಟಿನಲ್ಲಿ ಆ ರಾಷ್ಟ್ರದ ರಾಜಧಾನಿ ಬಿಷ್ಕೇಕ್‌ ನಲ್ಲಿ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಹಾಗೂ ಕಿರ್ಗಿಸ್ತಾನ್‌ ಗಣರಾಜ್ಯದ ಆರ್ಥಿಕ ಮತ್ತು ವಾಣಿಜ್ಯ ಸಚಿವ ಬಕಿತ್ ಸಿಡಿಕೋವ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಭಾರತ ಮತ್ತು ಕಿರ್ಗೊಸ್ತಾನ್‌ ನಡುವೆ ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ದೃಢಗೊಳಿಸುವ ನಿಟ್ಟಿನಲ್ಲಿ ಇಬ್ಬರೂ ಸಚಿವರ ನಡುವೆ ಚರ್ಚೆ ನಡೆಯಿತಲ್ಲದೆ; ಉಭಯ ದೇಶಗಳ ನಡುವೆ ಆರ್ಥಿಕ ತೊಡಗಿಸಿಕೊಳ್ಳುವಿಕೆ, ಕೈಗಾರಿಕಾ ಸಹಕಾರ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಗಾಢಗೊಳಿಸುವ ಮಾರ್ಗಗಳ ಬಗ್ಗೆ ಸಚಿವದ್ವಯರು ಚರ್ಚಿಸಿದರು.

ಶಾಂಘೈ ಸಹಕಾರ ಸಂಸ್ಥೆಯ (SCO) ಕೈಗಾರಿಕಾ ಸಚಿವರ 4ನೇ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಈ ಸಭೆಯು; ಭಾರತ-ಕಿರ್ಗಿಸ್ತಾನ್ ಸಂಬಂಧಗಳಲ್ಲಿ ಆಗುತ್ತಿರುವ ಮುನ್ನಡೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಮಧ್ಯ ಏಷ್ಯಾ ಭಾಗದಲ್ಲಿ ತನ್ನ ಆರ್ಥಿಕ ಹೆಜ್ಜೆಗುರುತನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಕಿರ್ಗೀಜ್‌ ಸಚಿವರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದರು.

ಉನ್ನತ ನಿಯೋಗವನ್ನು ಒಳಗೊಂಡ ಈ ಸಭೆಯಲ್ಲಿ ಸಚಿವ ಕುಮಾರಸ್ವಾಮಿ ಅವರೊಂದಿಗೆ ಕಿರ್ಗಿಸ್ತಾನ್ ಗಣರಾಜ್ಯದ ಭಾರತದ ರಾಯಭಾರಿ ಬೀರೇಂದರ್ ಸಿಂಗ್ ಯಾದವ್ ಅವರು ಕೂಡ ಭಾಗಿಯಾಗಿದ್ದರು.

ಈ ಚರ್ಚೆಯ ಸಮಯದಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವುದು, ಕೈಗಾರಿಕಾ ಸಹಕಾರವನ್ನು ವೃದ್ಧಿಸುವುದು, ಹೂಡಿಕೆ ಅವಕಾಶಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುವುದು ಮತ್ತು ಎರಡೂ ದೇಶಗಳ ವ್ಯವಹಾರಗಳು ಮತ್ತು ಉತ್ಪಾದನಾ ವಲಯಗಳ ನಡುವೆ ಹೆಚ್ಚಿನ ಸಹಯೋಗವನ್ನು ಉತ್ತೇಜಿಸುವ ಕುರಿತು ಸಚಿವರಿಬ್ಬರೂ ಮಾತುಕತೆ ನಡೆಸಿದರು.

ಅಲ್ಲದೆ, ಪರಸ್ಪರ ಪ್ರಯೋಜನಕಾರಿ ಆರ್ಥಿಕ ಪಾಲುದಾರಿಕೆಗಳನ್ನು ಸೃಷ್ಟಿಸಲು ಭಾರತ ಮತ್ತು ಕಿರ್ಗಿಸ್ತಾನ್‌ನ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಅವರು ಈ ಸಮಾಲೋಚನೆಯಲ್ಲಿ ಅನ್ವೇಷಿಸಿದರು.

ಯುರೇಷಿಯಾ (ಏಷ್ಯಾ-ಯುರೋಪ್)‌ ಭಾಗದಲ್ಲಿ ಬಲವಾದ ಪ್ರಾದೇಶಿಕ ಸಹಕಾರ, ಆರ್ಥಿಕ ಒಗ್ಗೂಡುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ನಿರಂತರವಾಗಿ ಪ್ರತಿಪಾದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಶಾಂಘೈ ಸಹಕಾರ ಸಂಸ್ಥೆ (SCO) ಸದಸ್ಯ ರಾಷ್ಟ್ರಗಳೊಂದಿಗೆ ತನ್ನ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುತ್ತಿರುವುದರಿಂದ ಈ ಸಭೆ ಮಹತ್ವದ್ದಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ಎಸ್‌ʼಸಿಒ ಸಚಿವರ ಸಭೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ಸದಸ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಸಹಕಾರ ಮತ್ತು ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವ ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಪ್ರದೇಶದಾದ್ಯಂತ ಶಾಂತಿ, ಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳನ್ನು ಮುನ್ನಡೆಸಲು ಶಾಂಘೈ ಸಹಕಾರ ಸಂಸ್ಥೆಯನ್ನು ಪ್ರಮುಖ ವೇದಿಕೆಯಾಗಿ ಭಾರತ ಪರಿಗಣಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಶಾಂಘೈ ಸಹಕಾರ ಸಂಸ್ಥೆ ಚೌಕಟ್ಟಿನೊಳಗೆ ಭಾರತದ ಆದ್ಯತೆಗಳನ್ನು ಪ್ರಬಲವಾಗಿ ಪ್ರತಿಪಾದಿಸಿದ ಕೇಂದ್ರ ಸಚಿವರು; ಭದ್ರತೆ, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಪರಿಸರ ಸಂರಕ್ಷಣೆಯನ್ನು ಒಳಗೊಂಡ ʼಸುರಕ್ಷಿತ ಶಾಂಘೈ ಸಹಕಾರ ಸಂಸ್ಥೆ (SCO)ʼ ಅಗತ್ಯತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವಾಗಿದೆ ಎಂಬ ಅಂಶವನ್ನು ಸಚಿವ ಕುಮಾರಸ್ವಾಮಿ ಅವರು ಪ್ರಮುಖವಾಗಿ ಪ್ರತಿಪಾದಿಸಿದರು.

ಕಳೆದ ಒಂದು ದಶಕದ ಅವಧಿಯಲ್ಲಿ ಭಾರತದ ಗಮನಾರ್ಹ ಕೈಗಾರಿಕಾ ಬೆಳವಣಿಗೆಯನ್ನು ಕೇಂದ್ರ ಸಚಿವರು ಸಭೆಗಳಲ್ಲಿ ಒತ್ತಿ ಹೇಳಿದರು. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಭಾರತ ಹೊರಹೊಮ್ಮಿರುವುದನ್ನು ಪ್ರತೀ ಚರ್ಚೆಯಲ್ಲಿಯೂ ಸಚಿವರು ಉಲ್ಲೇಖಿಸಿದರು.

ಭಾರತದ ಉತ್ಪಾದನಾ ವಲಯದ ಪೂರಕ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸಿದೆ, ಸುಧಾರಿತ ಮೂಲಸೌಕರ್ಯ ಮತ್ತು ವ್ಯಾವಹಾರಿಕ ಸುಲಭತೆಯನ್ನು ಹೆಚ್ಚಿಸಿದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ, ಪಿಎಂ ಗತಿಶಕ್ತಿ ಮತ್ತು ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗಳಂತಹ ಪ್ರಮುಖ ಉಪಕ್ರಮಗಳ ಬಗ್ಗೆ ಶಾಂಘೈ ಸಹಕಾರ ಸಂಸ್ಥೆ ವೇದಿಕೆಗಳಲ್ಲಿ ಸಚಿವ ಕುಮಾರಸ್ವಾಮಿ ಮುಖ್ಯವಾಗಿ ಪ್ರಸ್ತಾಪಿಸಿದರು.

ಈ ಪರಿವರ್ತನಾತ್ಮಕ ಸುಧಾರಣೆಗಳು ಭಾರತವನ್ನು ಆದ್ಯತೆಯ ಜಾಗತಿಕ ಉತ್ಪಾದನಾ ತಾಣವಾಗಿಸಿವೆ. ಈ ನಿಟ್ಟಿನಲ್ಲಿ ಅಗಾಧವಾಗಿ ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಭಾರತ ಆಕರ್ಷಿಸುತ್ತಿದೆ. ಹೂಡಿಕೆಗೆ ಸುರಕ್ಷಿತ ತಾಣವಾಗಿ ಭಾರತ ಗುರುತಿಸಲ್ಪಟ್ಟಿದೆ ಎಂದು ಕುಮಾರಸ್ವಾಮಿ ಹೇಳಿದರು.

2017ರಲ್ಲಿ ಪೂರ್ಣ ಸದಸ್ಯತ್ವ ಪಡೆದ ನಂತರ SCO ಚೌಕಟ್ಟಿನೊಳಗೆ ಭಾರತದ ಪೂರ್ವಭಾವಿ ಪಾತ್ರವನ್ನು ಸಚಿವರು ಮತ್ತಷ್ಟು ಒತ್ತಿ ಹೇಳಿದರಲ್ಲದೆ; ಸದಸ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಸಹಕಾರವನ್ನು ಬಲಪಡಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಸಹಯೋಗದ ಆರ್ಥಿಕ ಉಪಕ್ರಮಗಳನ್ನು ಮುನ್ನಡೆಸಲು ಭಾರತ ನಿರಂತರವಾಗಿ ಕೊಡುಗೆ ನೀಡುತ್ತಲೇ ಇದೆ ಎಂದು ಅವರು ವಿವರಿಸಿದರು.

ಶಾಂಘೈ ಸಹಕಾರ ಸಂಸ್ಥೆ ವ್ಯಾಪ್ತಿಯ ಅಗಾಧವಾದ ಆರ್ಥಿಕ ಸಾಮರ್ಥ್ಯದ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಸದಸ್ಯ ರಾಷ್ಟ್ರಗಳು ಒಟ್ಟಾಗಿ ವಿಶಾಲವಾದ ಕೈಗಾರಿಕಾ, ತಾಂತ್ರಿಕ ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೊಂದಿವೆ. ಸದಸ್ಯ ರಾಷ್ಟ್ರಗಳ ನಡುವಿನ ಬಲವಾದ ಸಹಕಾರವು ಶಾಶ್ವತ ಪೂರೈಕೆ ಸರಪಳಿಗಳನ್ನು ನಿರ್ಮಿಸಲು, ಹೂಡಿಕೆಗಳನ್ನು ಆಕರ್ಷಿಸಲು, ತಂತ್ರಜ್ಞಾನ ವರ್ಗಾವಣೆಯನ್ನು ಸುಗಮಗೊಳಿಸಲು ಮತ್ತು ಈ ಭಾಗದಾದ್ಯಂತ ಲಕ್ಷಾಂತರ ಜನರಿಗೆ ಹೊಸ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ಸೃಷ್ಟಿ, ನವೋದ್ಯಮ ಪೂರಕ ವ್ಯವಸ್ಥೆಗಳು ಮತ್ತು ತಾಂತ್ರಿಕ ನಾವೀನ್ಯತೆಯಲ್ಲಿ ತನ್ನ ಅನುಭವಗಳನ್ನು ಎಸ್‌ ಸಿಒ ಕಾರ್ಯವಿಧಾನಗಳ ಮೂಲಕ ಪಾಲುದಾರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಭಾರತದ ಇಚ್ಛೆಯ ಬಗ್ಗೆ ಸಚಿವರು ಚರ್ಚಿಸಿದರು.

ಬಿಷ್ಕೇಕ್‌ನಲ್ಲಿ ನಡೆದ ಚರ್ಚೆಗಳು ಭಾರತ ಮತ್ತು ಕಿರ್ಗಿಜ್ ಗಣರಾಜ್ಯದ ಪರಸ್ಪರ ಸಹಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಶಾಂಘೈ ಸಹಕಾರ ಸಂಸ್ಥೆಯ ಚೌಕಟ್ಟಿನಡಿಯಲ್ಲಿ ವರ್ಧಿತ ಸಹಕಾರದ ಮೂಲಕ ವಿಶಾಲ ಪ್ರಾದೇಶಿಕ ಸಮೃದ್ಧಿಗೆ ಕೊಡುಗೆ ನೀಡುತ್ತವೆ ಎಂದು ಈ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು ನುಡಿದರು.

ಭಾರತದ ಆರ್ಥಿಕ ರಾಜತಾಂತ್ರಿಕತೆಯನ್ನು ಮುನ್ನಡೆಸುವಲ್ಲಿ, ಕೈಗಾರಿಕಾ ಪಾಲುದಾರಿಕೆಗಳನ್ನು ಉತ್ತೇಜಿಸುವಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಲವಾದ ಸ್ವಾವಲಂಬಿ ನೀತಿಗಳು ಮತ್ತು ಜಾಗತಿಕವಾಗಿ ತೊಡಗಿಸಿಕೊಂಡಿರುವ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವಲ್ಲಿ ಬೃಹತ್ ಕೈಗಾರಿಕಾ ಸಚಿವಾಲಯದ ಹೆಚ್ಚುತ್ತಿರುವ ಪಾತ್ರವನ್ನು ಸಚಿವರ ಭೇಟಿ ಎತ್ತಿ ತೋರಿಸಿತು.


Share

You cannot copy content of this page