ತುಮಕೂರು:ಪವಿತ್ರವಾದ ಮಲ್ಲಘಟ್ಟ ಪ್ರದೇಶದ ಅಭಿವೃದ್ಧಿಗೆ ಈಗಾಗಲೇ 35 ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದು, ಇನ್ನಷ್ಟು ಅಭಿವೃದ್ಧಿಗೆ ಏನು ಮಾಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾಡುಸಿದ್ದೇಶ್ವರ ಮಠದವರೊಂದಿಗೆ ಚರ್ಚೆ ನಡೆಸಿದ್ದು, ಎಲ್ಲರ ಸಲಹೆ ಪಡೆದು ಅಗತ್ಯ ನೆರವು ನೀಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.
ತುಮಕೂರಿನ ನೊಣವಿನಕೆರೆಯ ಬುರುಡೆಘಟ್ಟದ ಮಲ್ಲಘಟ್ಟ ಕೆರೆಯ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ನಾನು ಈ ಹಿಂದೆ ಮೂರ್ನಾಲ್ಕು ಬಾರಿ ಈ ಐತಿಹಾಸಿಕ ಮಲ್ಲಘಟ್ಟದ ಗಂಗಾಧರೇಶ್ವರ ದೇವಾಲಯಕ್ಕೆ ಬಂದಿದ್ದೇನೆ. ಎಲ್ಲಾ ಊರಿನ ದೇವತೆಗಳನ್ನು ಇಲ್ಲಿಗೆ ಕರೆತಂದು ಸ್ನಾನ ಮಾಡಿಸುತ್ತಾರೆ. ನನ್ನ ಮನೆ ಗೃಹಪ್ರವೇಶ ಸಂದರ್ಭದಲ್ಲಿ ಐದು ಕಡೆಗಳಿಂದ ನೀರನ್ನು ತರಿಸಲಾಗಿತ್ತು, ಆ ಪೈಕಿ ಈ ಕೆರೆಯೂ ಒಂದಾಗಿದೆ. ಈ ಕೆರೆಯಲ್ಲಿ ಸದಾ ನೀರು ತುಂಬಿ ತುಳುಕುತ್ತಿರುತ್ತದೆ. ಕಳೆದ 25 ವರ್ಷಗಳಿಂದ ನಾನು ಈ ಪ್ರದೇಶವನ್ನು ಗಮನಿಸುತ್ತಿದ್ದು, ಇಲ್ಲಿಗೆ ಬಂದಾಗ ನನ್ನ ಮನಸ್ಸಿಗೆ ನೆಮ್ಮದಿ ಸಂತೋಷ ಸಿಗುತ್ತದೆ. ರೈತರು, ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸಮುದಾಯಭವನ, ಅತಿಥಿ ಗೃಹ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ” ಎಂದು ತಿಳಿಸಿದರು.
ನಾನು ನಮ್ಮ ಧರ್ಮ ಬಿಡುವುದಿಲ್ಲ, ಎಲ್ಲಾ ಧರ್ಮ ಗೌರವಿಸುವೆ
ಪ್ರಮಾಣವಚನ ಸಂದರ್ಭದಲ್ಲಿ ಹಿಂದೂ ಶಾಸ್ತ್ರಗಳನ್ನು ಪಾಲಿಸಿ ನೀವು ಯಾವ ಸಂದೇಶ ರವಾನಿಸಿದ್ದೀರಿ ಎದು ಕೇಳಿದಾಗ, “ನನಗೆ ರಾಜಕಾರಣ ಮುಖ್ಯವಲ್ಲ. ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ. ನಾನು ಎಲ್ಲಾ ಧರ್ಮವನ್ನು ಗೌರವಿಸುತ್ತೇನೆ. ಹೀಗಾಗಿ ಎಲ್ಲಾ ಧರ್ಮ ಪೀಠಗಳನ್ನು ಆಹ್ವಾನಿಸಿದ್ದೆ. ನಾವು ನಮ್ಮ ಧರ್ಮ ಬಿಡಲು ಆಗುವುದೇ? ನಮ್ಮ ಹೆಸರು ಬದಲಿಸಲು ಸಾಧ್ಯವೇ? ಯಾವುದೇ ಧರ್ಮವಾಗಲಿ, ನಾವು ಧರ್ಮ ಬಿಟ್ಟು ಇರಲಾಗುವುದಿಲ್ಲ. ಪ್ರತಿ ಮನೆಯಲ್ಲಿ ನಾಮಕರಣ, ಕಿವಿ ಚುಚ್ಚುವ ಶಾಸ್ತ್ರ, ಉಪನಯನ ಮಾಡಿದರೂ ಧರ್ಮದ ಮೇಲೆ ಮಾಡಲಾಗುವುದು. ರಾಜ್ಯದ ಹಿತ ಕಾಪಾಡುವ ಜವಾಬ್ದಾರಿ ತಮ್ಮ ಮೇಲಿದ್ದು, ಎಲ್ಲರ ಆಶೀರ್ವಾದ ಪಡೆದು ನಾನು ಕೆಲಸ ಪ್ರಾರಂಭಿಸಿದ್ದೇನೆ” ಎಂದು ತಿಳಿಸಿದರು.
ಜನರಿಗೆ ನೆಮ್ಮದಿ ಶಾಂತಿ ಸಿಗಲಿ, ರಾಜ್ಯದ ಕೆರೆಗಳು ತುಂಬಲಿ ಎಂದು ಪ್ರಾರ್ಥನೆ
ಮಲ್ಲಘಟ್ಟದ ಗಂಗಾಧರೇಶ್ವರನಿಗೆ ಹರಕೆ ಹೊತ್ತಿದ್ದೀರಾ ಎಂದು ಕೇಳಿದಾಗ, “ಯಾವ ಹರಕೆಯೂ ಇಲ್ಲ. ನನ್ನ ಭಾವನೆ, ಭಕ್ತಿ ಹಾಗೂ ಜನರಿಗೆ ಒಳ್ಳೆಯದಾಗಲಿ, ನನಗೆ ಸಿಕ್ಕಿರುವ ಅಧಿಕಾರ ಜನರಿಗೆ ಸಮರ್ಪಣೆಯಾಗಲಿ, ರಾಜ್ಯದ ಜನರಿಗೆ ನೆಮ್ಮದಿ ಶಾಂತಿ ಸಿಗಲಿ, ರಾಜ್ಯದ ಕೆರೆಗಳು ತುಂಬಿ ತುಳುಕಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ತಿಳಿಸಿದರು.
ಕಾಡಸಿದ್ದೇಶ್ವರ ಮಠಕ್ಕೆ ಸಿಎಂ ಆಗಿಯಲ್ಲ, ಭಕ್ತನಾಗಿ ಬಂದಿರುವೆ
ನೊಣವಿನಕೆರೆ ಶ್ರೀ ಕಾಡು ಸಿದ್ದೇಶ್ವರ ಮಠದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, “ನೋಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ನಾನು ಹೊಸಬನಲ್ಲ. ಕಳೆದ 25 ವರ್ಷಗಳಿಂದ ನಾನು ಈ ಮಠಕ್ಕೆ ಬರುತ್ತಿದ್ದೇನೆ. ಇದುವರೆಗೂ ಎಷ್ಟು ಬಾರಿ ಈ ಮಠಕ್ಕೆ ಬಂದಿದ್ದೇನೊ ಲೆಕ್ಕವಿಲ್ಲ. ನನ್ನ ಜೀವನದ ಪ್ರತಿ ಹಂತದಲ್ಲೂ ನಾನು ಇಲ್ಲಿಗೆ ಬಂದು ಸೇವೆ ಮಾಡಿ, ಪ್ರಾರ್ಥಿಸಿ ಮಾರ್ಗದರ್ಶನ ಪಡೆದಿದ್ದೇನೆ. ಚುನಾವಣೆಗೂ ಮುನ್ನ, ಚುನಾವಣೆ ನಂತರ, ಅಧಿಕಾರ ಸ್ವೀಕಾರದ ನಂತರ ಎಲ್ಲ ಸಂದರ್ಭದಲ್ಲಿ ಬಂದಿದ್ದೇನೆ. ನಾನು ಇಲ್ಲಿಗೆ ಸಿಎಂ ಆಗಿಯಲ್ಲ, ಒಬ್ಬ ಭಕ್ತನಾಗಿ ಬಂದಿರುವೆ. ಇಲ್ಲಿ ಭಕ್ತ ಹಾಗೂ ಭಗವಂತನ ಸಂಬಂಧವಿದೆ. ಪ್ರಾರ್ಥನೆ ಮಾಡಲು ಇಲ್ಲಿಗೆ ಬಂದಿರುವೆ” ಎಂದು ತಿಳಿಸಿದರು.
