ಸಮಗ್ರ ಸುದ್ದಿ

ಕಸ ಮುಕ್ತ ನಗರವನ್ನಾಗಿಸಲು ವಾರ್ಡ್ ಮಟ್ಟದ ಕ್ರಿಯಾ ಯೋಜನೆ ರೂಪಿಸಿ – ಡಿ.ಎಸ್. ರಮೇಶ್

Share

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯನ್ನು ಕಸ ಮುಕ್ತ ನಗರವನ್ನಾಗಿಸುವ ಧ್ಯೇಯದೊಂದಿಗೆ, ಪ್ರತಿ ವಾರ್ಡ್ ನ ಬ್ಲಾಕ್ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಆಯುಕ್ತರಾದ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಸಮಗ್ರ ಪರಿಶೀಲನಾ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ವ್ಯವಸ್ಥೆ ಕಾಪಾಡುವುದು, ಮನೆ-ಮನೆಯಿಂದ ಕಸ ಸಂಗ್ರಹಣೆ, ತ್ಯಾಜ್ಯ ವಿಂಗಡಣೆ ಮತ್ತು ಸಾಗಣೆ, ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, ಬಲ್ಕ್‌ ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಕುರಿತು ಸವಿಸ್ತಾರ ಚರ್ಚೆ ನಡೆಸಿ ವಲಯ ಜಂಟಿ ಆಯುಕ್ತರುಗಳು, ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳ ಮೇಲುಸ್ತುವಾರಿಯಲ್ಲಿ ದಕ್ಷ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆಗೆ ವಿಶೇಷ ಕಾರ್ಯಾಚರಣೆ

ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆ, ಆರ್ಟೀರಿಯಲ್, ಸಬ್ ಆರ್ಟೀರಿಯಲ್ ಹಾಗೂ ವಾರ್ಡ್ ಮಟ್ಟದ ರಸ್ತೆಗಳಲ್ಲಿ ಕಂಡುಬರುವ ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿ, ಪೌರಕಾರ್ಮಿಕರು ಮತ್ತು ಆಟೋ ಟಿಪ್ಪರ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿ ಒಂದು ತಿಂಗಳೊಳಗೆ ಸಂಪೂರ್ಣವಾಗಿ ಬ್ಲ್ಯಾಕ್‌ ಸ್ಪಾಟ್‌ ನಿರ್ಮೂಲನೆ ಮಾಡುವಂತೆ ಆಯುಕ್ತರು ಸೂಚಿಸಿದರು. ಆರೋಗ್ಯ ಮೇಲ್ವಿಚಾರಕರಿಗೆ ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆಯ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದ್ದು, ನಿರಂತರ ಮೇಲ್ವಿಚಾರಣೆ ನಡೆಸಿ ಬ್ಲ್ಯಾಕ್ ಸ್ಪಾಟ್‌ಗಳು ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಕಸ ಸಂಗ್ರಹ ವಾಹನಗಳ ಕಾರ್ಯದಕ್ಷತೆ ಹೆಚ್ಚಿಸಿ

ಮನೆ-ಮನೆಯಿಂದ ಕಸ ಸಂಗ್ರಹಿಸುವ ವಾಹನಗಳ ಕಾರ್ಯನಿರ್ವಹಣೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿ, ವಾಹನಗಳು ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಲಭ್ಯವಿರುವ ಕಸ ಸಂಗ್ರಹಣೆ ವಾಹನಗಳನ್ನು ಬಳಸಿಕೊಂಡು ಯೋಜಿತ ರೀತಿಯಲ್ಲಿ ಸಮರ್ಪಕವಾಗಿ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ಕಾರ್ಯಯೋಜನೆ ಸಿದ್ದಪಡಿಸುವಂತೆ ನಿರ್ದೇಶನ ನೀಡಿದರು. ವಾಹನಗಳ ಕಾರ್ಯ ನಿರ್ವಹಣೆ, ಕಸ ಸಂಗ್ರಹಣೆಯ ಪ್ರಮಾಣ ಹಾಗೂ ಸಾರ್ವಜನಿಕರಿಂದ ಬರುತ್ತಿರುವ ದೂರುಗಳ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಎಜಿಎಂಗಳಿಗೆ ಸೂಚಿಸಿದರು.

ಕಸ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆ ಬಲಪಡಿಸಿ

ವಾರ್ಡ್‌ ಮಟ್ಟದಲ್ಲಿ ಮೈಕ್ರೋ ಪ್ಲಾನ್‌ ಸಿದ್ದಪಡಿಸಿಕೊಂಡು ತ್ಯಾಜ್ಯ ಉತ್ಪಾದನೆಯಾಗುವ ಪ್ರಮಾಣಕ್ಕನುಗುಣವಾಗಿ ಪೌರಕಾರ್ಮಿಕರು, ಆಟೋ ಟಿಪ್ಪರ್‌ ಚಾಲಕರು ಮತ್ತು ವಾಹನಗಳನ್ನು ಬಳಸಿಕೊಂಡು ನಗರ ಪಾಲಿಕೆಯಲ್ಲಿನ ತ್ಯಾಜ್ಯ ಸಂಗ್ರಹಣೆ, ಸಾಗಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ವಾರ್ಡ್‌ ಮಟ್ಟದಲ್ಲಿನ ತ್ಯಾಜ್ಯ ಸಂಗ್ರಹಣೆ, ವಿಂಗಡನೆ ಮತ್ತು ವಿಲೇವಾರಿಯ ಸಂಪೂರ್ಣ ಜವಾಬ್ದಾರಿ ವಹಿಸಿದ್ದು ಎಲ್ಲಾದರು ಬ್ಲ್ಯಾಕ್‌ ಸ್ಪಾಟ್‌ ಕಂಡುಬಂದಲ್ಲಿ ಜೆಹೆಚ್‌ಐಗಳ ಮೇಲೆ ಶಿಸ್ತು ಕ್ರಮ ವಹಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಬಲ್ಕ್ ತ್ಯಾಜ್ಯ ಉತ್ಪತ್ತಿ ಸಂಸ್ಥೆಗಳ ಸಮಗ್ರ ಮಾಹಿತಿ ಸಂಗ್ರಹಿಸಿ

ನಗರ ಪಾಲಿಕೆಯಲ್ಲಿನ ಕಲ್ಯಾಣ ಮಂಟಪಗಳು, ವಸತಿಯೇತರ ಸಮುಚ್ಚಯಗಳು ,ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಪೇಯಿಂಗ್ ಸೇರಿದಂತೆ ಬಲ್ಕ್‌ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುವ ಕಡೆಗಳಲ್ಲಿ ತ್ಯಾಜ್ಯದ ಸಂಗ್ರಹಣೆ, ವಿಂಗಡಣೆ ಮತ್ತು ವಿಲೇವಾರಿ ವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಪರಿಶೀಲಿಸುವಂತೆ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಲ್ಕ್‌ ತ್ಯಾಜ್ಯ ಉತ್ಪತ್ತಿ ಸ್ಥಳಗಳಲ್ಲಿ ಹಸಿ ಕಸವನ್ನು ಕಾಂಪೋಸ್ಟ್‌ಗೆ ಪರಿವರ್ತಿಸುವ ಅಗತ್ಯ ವ್ಯವಸ್ಥೆ ಮಾಡಿಕೊಂಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.

ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬಲ್ಕ್ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಪ್ರತ್ಯೇಕ ವ್ಯವಸ್ಥೆಯಿದ್ದು ಇದನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಗುತ್ತಿಗೆದಾರರು ದೈನಂದಿನ ಕಸ ಸಂಗ್ರಹಣೆ ವಾಹನಗಳನ್ನು ಬಲ್ಕ್‌ ತ್ಯಾಜ್ಯ ಸಂಗ್ರಹಣೆಗೆ ಕಾನೂನುಬಾಹಿರವಾಗಿ ಬಳಸದಂತೆ ನಿಗಾವಹಿಸಲು ಸೂಚನೆ ನೀಡಿದರು.

ಎಸ್.ಎಚ್.ಐ ಮತ್ತು ಎಚ್.ಎಸ್ ಗಳಿಗೆ ಪರಿಣಾಮಕಾರಿ ಮೇಲ್ವಿಚಾರಣೆ ಜವಾಬ್ದಾರಿ

ಹಿರಿಯ ಆರೋಗ್ಯ ನಿರೀಕ್ಷಕರು ಮತ್ತು ಆರೋಗ್ಯ ಮೇಲ್ವಿಚಾರಕರುಗಳು ಮನೆ-ಮನೆ ಕಸ ಸಂಗ್ರಹಣೆ ವ್ಯವಸ್ಥೆಯನ್ನು ಕಡ್ಡಾಯವಾಗಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದರು. ಹೋಟೆಲ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕಡ್ಡಾಯವಾಗಿ ಅಳವಡಿಸಿರುವುದನ್ನು ಪರಿಶೀಲಿಸಿಕೊಂಡು ಮಾತ್ರ ಉದ್ದಿಮೆ ಪರವಾನಗಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಿಯಮ ಪಾಲನೆ ಆಗದಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕ ಆರೋಗ್ಯ ಹಾಗೂ ನಗರ ಸ್ವಚ್ಛತೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಏಜೆನ್ಸಿ ಮತ್ತು ಟೆಂಡರ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ಘನತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಸಂಬಂಧಿಸಿದ ಏಜೆನ್ಸಿ ಮತ್ತು ಟೆಂಡರ್ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಪರಿಶೀಲಿಸಲಾಗಿ ಸಾರ್ವಜನಿಕ ಸೇವೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ಬಾಕಿ ಇರುವ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಆಯುಕ್ತರು ಸೂಚಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹವಾಗದಂತೆ ಕ್ರಮವಹಿಸಿ, ನಗರವನ್ನು ಸ್ವಚ್ಛ ಹಾಗೂ ಬ್ಲ್ಯಾಕ್ ಸ್ಪಾಟ್ ಮುಕ್ತವಾಗಿಸಲು ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ದಂಡಾತ್ಮಕ ಮತ್ತು ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದರು. ಸಾರ್ವಜನಿಕರಲ್ಲಿ ಸ್ವಚ್ಛತೆ, ತ್ಯಾಜ್ಯ ವಿಂಗಡಣೆ ಹಾಗೂ ಜವಾಬ್ದಾರಿಯುತ ತ್ಯಾಜ್ಯ ವಿಲೇವಾರಿ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ ಆಯುಕ್ತರು(ಅಭಿವೃದ್ದಿ) ಲೋಖಂಡೆ ಸ್ನೇಹಲ್‌ ಸುಧಾಕರ್‌, ಅಪರ ಆಯುಕ್ತರು (ಕಂದಾಯ) ಡಾ ಪ್ರಜ್ಞಾ ಅಮ್ಮೆಂಬಳ, ವಲಯ ಜಂಟಿ ಆಯುಕ್ತರಾದ ಡಾ ದಾಕ್ಷಾಯಿಣಿ.ಕೆ. ಡಾ.ಸುಧಾ, ಆರೋಗ್ಯಾಧಿಕಾರಿ, ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಆರೋಗ್ಯ ವೈದ್ಯಾಧಿಕಾರಿಗಳು, ಹೆಚ್‌.ಎಸ್., ಎಸ್.ಹೆಚ್.ಐ ಹಾಗೂ ಜೆ.ಹೆಚ್.ಐಗಳು ಹಾಜರಿದ್ದರು.


Share

You cannot copy content of this page