ಸಮಗ್ರ ಸುದ್ದಿ

ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಿರುದ್ದ ಕಾರ್ಯಾಚರಣೆ: ಒಟ್ಟು 1.25 ಲಕ್ಷ ರೂ. ದಂಡ ವಸೂಲಿ, 225 ಕೆಜಿ ಪ್ಲಾಸ್ಟಿಕ್ ಜಪ್ತಿ

Share

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ವಿವಿಧೆಡೆ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡುವ ಗೋದಾಮು ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಇಂದು ದಾಳಿ ನಡೆಸಿದರು.

BSWML ನ ಮುಖ್ಯ ಕಾರ್ಯಾಚರಣೆ ಅಧಿಕಾರಿಯವರ ನಿರ್ದೇಶನದ ಮೇರೆಗೆ ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ದಕ್ಷಿಣ, ಉತ್ತರ ಹಾಗೂ ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯ ಪ್ರದೇಶಗಳಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ನಡೆದ ಈ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘಿಸಿದವರಿಂದ ಒಟ್ಟು 1.26 ಲಕ್ಷ ರೂಪಾಯಿಗಳ ದಂಡವನ್ನು ವಸೂಲಿ ಮಾಡಿ, ಒಟ್ಟು 240 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ಅನ್ನು ಜಪ್ತಿ ಮಾಡಿದರು.

ಬಿ.ಟಿ.ಎಂ ಲೇಔಟ್ ವ್ಯಾಪ್ತಿಯಲ್ಲಿ ದಾಳಿ, 20 ಸಾವಿರ ರೂ. ದಂಡ

ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ ಬಿಟಿಎಂ ಲೇಔಟ್ ನಲ್ಲಿ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಏಕಬಳಕೆ ಪ್ಲಾಸ್ಟಿಕ್ ಸಂಗ್ರಹಿಸಿಟ್ಟಿದ್ದ ಸುರೇಶ್ ಪ್ಯಾಕೇಜಿಂಗ್ ಸಂಸ್ಥೆಗೆ 10,000 ರೂಪಾಯಿ ಹಾಗೂ ರಾಜಗುರು ಪ್ಯಾಕೇಜಿಂಗ್ ಸಂಸ್ಥೆಗೆ 10,000 ರೂಪಾಯಿಗಳ ದಂಡವನ್ನು ವಿಧಿಸಿ, 15 ಕೆಜಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದರು.

ಸರ್ವಜ್ಞನಗರದಲ್ಲಿನ ಕಾರ್ಯಾಚರಣೆಯಲ್ಲಿ 210 ಕೆಜಿ ಪ್ಲಾಸ್ಟಿಕ್ ವಶ

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ವಜ್ಞನಗರದ ಕಮ್ಮನಹಳ್ಳಿಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ 09 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 81,000 ರೂಪಾಯಿಗಳ ದಂಡವನ್ನು ಸ್ಥಳದಲ್ಲೇ ವಸೂಲಿ ಮಾಡಿ, 210 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.

ದೀಪಾಂಜಲಿನಗರದಲ್ಲಿ 25 ಸಾವಿರ ದಂಡ ವಸೂಲಿ, 15 ಕೆಜಿ ಪ್ಲಾಸ್ಟಿಕ್ ಜಪ್ತಿ

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ದೀಪಾಂಜಲಿ ನಗರದ ಮುತ್ತುಚಾರಿ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಕೈಗೊಂಡ ಕಾರ್ಯಾಚರಣೆಯಲ್ಲಿ ಒಟ್ಟು 03 ಪ್ರಕರಣಗಳನ್ನು ದಾಖಲಿಸಿಕೊಂಡ ಅಧಿಕಾರಿಗಳು, 25,000 ರೂಪಾಯಿ ದಂಡ ವಸೂಲಿ ಮಾಡಿ, 15 ಕೆಜಿ ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದರು.

ಈ ಕಾರ್ಯಾಚರಣೆ ವೇಳೆ ದಕ್ಷಿಣ ನಗರ ಪಾಲಿಕೆಯ ಘನತ್ಯಾಜ್ಯ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಗಳು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.


Share

You cannot copy content of this page