ಸಮಗ್ರ ಸುದ್ದಿ

ಇರುವ ವ್ಯವಸ್ಥೆಯಲ್ಲೇ ಪರಿಣಾಮಕಾರಿಯಾಗಿ ಕೆಲಸ ಮಾಡಿ ಕಸದ ಸಮಸ್ಯೆ ನಿವಾರಿಸಿ: ಕೃಷ್ಣ ಬೈರೇಗೌಡ

Share

ಬೆಂಗಳೂರು:ನಗರದಲ್ಲಿನ ಕಸದ ಸಮಸ್ಯೆ ನಿವಾರಣೆಗಾಗಿ ಈಗಿರುವ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡು ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಕೈಗೊಂಡಿರುವ ಕ್ರಮಗಳ ಕುರಿತು ಇಂದು ನಡೆದ ಸುದೀರ್ಘ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕಸದ ಸಮಸ್ಯೆ ಪ್ರತಿದಿನ ಚರ್ಚೆಯಾಗುತ್ತಿರುವ ಪ್ರಮುಖ ವಿಷಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಹೊಸ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. 33 ಪ್ಯಾಕೇಜ್‌ಗಳಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಅದರಲ್ಲಿ 6 ಪ್ಯಾಕೇಜ್‌ಗಳು ನ್ಯಾಯಾಲಯದಲ್ಲಿವೆ. ಉಳಿದ 27 ಪ್ಯಾಕೇಜ್‌ಗಳು ಅಂತಿಮ ಹಂತದಲ್ಲಿದ್ದು, ಹೊಸ ವ್ಯವಸ್ಥೆ ಜಾರಿಯಾಗುವವರೆಗೆ ಈಗಿರುವ ವ್ಯವಸ್ಥೆಯಲ್ಲಿಯೇ ಅಗತ್ಯ ಬದಲಾವಣೆಗಳನ್ನು ತಂದು ಕಸದ ಸಮಸ್ಯೆ ನಿಯಂತ್ರಣಕ್ಕೆ ತರಲು ಸೂಚಿಸಲಾಗಿದೆ ಎಂದರು.

ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಕೆಲವು ಕಡೆ ವಾಹನಗಳ ಕೊರತೆ ಇದ್ದರೆ, ಇನ್ನೂ ಕೆಲವು ಕಡೆ ಸಿಬ್ಬಂದಿ ಕೊರತೆಯಿದೆ. ಪ್ರಸ್ತುತ ತ್ಯಾಜ್ಯ ವಿಲೇವಾರಿಗಾಗಿ ಬಳಸುತ್ತಿರುವ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಇಲ್ಲ. ಕೆಲವು ಗುತ್ತಿಗೆದಾರರು ದುರ್ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಹಲವು ವರ್ಷಗಳಿಂದ ಹೊಸ ಟೆಂಡರ್ ಪ್ರಕ್ರಿಯೆಗೆ ಅಡ್ಡಿಯಾಗುವಂತೆ ನ್ಯಾಯಾಲಯಗಳಲ್ಲಿ ದಾವೆ ಹೂಡುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಸ್ತೆ ಬದಿ ಕಸ ಬಿಸಾಡುವುದಕ್ಕೆ ಕಡಿವಾಣ

ನಗರದಲ್ಲಿ ಹಿಂದೆ ಇಷ್ಟು ಪ್ರಮಾಣದಲ್ಲಿ ರಸ್ತೆ ಬದಿ ಕಸ ಬಿಸಾಡುವ ಪ್ರವೃತ್ತಿ ಇರಲಿಲ್ಲ. ಆಟೋ ಟಿಪ್ಪರ್‌ಗಳ ಮೂಲಕ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಅನೇಕ ನಾಗರಿಕರು ಮನೆ ಮುಂದೆ ಬರುವ ವಾಹನಗಳಿಗೆ ಕಸ ನೀಡದೆ ರಸ್ತೆ ಬದಿಯಲ್ಲೇ ಬಿಸಾಡುವ ಅಭ್ಯಾಸ ಮುಂದುವರಿಸಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಮರ್ಪಕವಾಗಿ ಕೆಲಸ ಮಾಡಲು ಎಚ್ಚರಿಕೆ:

ಕಸ ವಿಲೇವಾರಿಗೆ ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳು, ಮಾರ್ಷಲ್‌ಗಳು, ಲಿಂಕ್ ವರ್ಕರ್‌ಗಳು, ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವ ಸಿಬ್ಬಂದಿ ಹಾಗೂ ಆಟೋ ಟಿಪ್ಪರ್‌ಗಳ ವ್ಯವಸ್ಥೆ ಇದೆ. ಈಗಿರುವ ವ್ಯವಸ್ಥೆಯನ್ನೇ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

ವಿಂಗಡಿಸಿದ ಕಸ ಸಂಗ್ರಹ ಕಡ್ಡಾಯ:

ನಗರದ ಕೆಲವು ಪ್ರದೇಶಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ ಶೇ. 65, 70 ಹಾಗೂ 80 ರಷ್ಟು ತಲುಪಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಅದು ಶೇ. 45ರಷ್ಟೇ ಇದೆ. ಇನ್ನು ಮುಂದೆ ವಿಂಗಡಿಸದ ಕಸವನ್ನು ಸಂಗ್ರಹಿಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಜನರ ಸಹಕಾರ ಮುಖ್ಯ:

ಕಸದ ಸಮಸ್ಯೆ ನಿವಾರಣೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದು, ತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಣೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಸ ಸಮಸ್ಯೆ ಬಗೆಹರಿಸಲು ಶೇ. 50 ರಷ್ಟು ನಾಗರಿಕರ ಸಹಕಾರ ಅಗತ್ಯವಾಗಿದೆ. ಸರ್ಕಾರ, ನಗರ ಪಾಲಿಕೆ ಹಾಗೂ ನಾಗರಿಕರು ಕೈಜೋಡಿಸಿದಾಗ ಮಾತ್ರ ಶಾಶ್ವತ ಸುಧಾರಣೆ ಸಾಧ್ಯ.

ನಿಮ್ಮ ಮನೆ ಹತ್ತಿರ ಕಸ ಸಂಗ್ರಹಿಸಲು ವಾಹನ ಬರದಿದ್ದರೆ ನಮಗೆ ತಿಳಿಸಿ. ವಾಹನಗಳು ಬರುವಂತೆ ಮಾಡುವುದು ಪಾಲಿಕೆಯ ಜವಾಬ್ದಾರಿ. ಆದರೆ ವಾಹನ ಬಂದರೂ ರಸ್ತೆ ಬದಿಯಲ್ಲಿ ಕಸ ಬಿಸಾಡುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಸ ಸಂಗ್ರಹಣೆ ಹಾಗೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ನಾವು ಬದ್ಧರಾಗಿದ್ದೇವೆ. ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ನಗರದ ಸೌಂದರ್ಯ ಹಾಳಾಗುತ್ತದೆ:

ರಸ್ತೆ ಬದಿಯಲ್ಲಿ ಕಸ ಬಿಸಾಡುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುವುದಲ್ಲದೆ ನಗರದ ಸೌಂದರ್ಯವೂ ಹಾಳಾಗುತ್ತದೆ. ಯಾರೂ ರಸ್ತೆ ಬದಿಯಲ್ಲಿ ಕಸ ಬಿಸಾಡಬಾರದು. ಮನೆಗಳ ಹತ್ತಿರ ಬರುವ ವಾಹನಗಳಿಗೆ ಕಸ ನೀಡಬೇಕು. ಈಗಿರುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಶೇ. 50 ರಷ್ಟು ಸುಧಾರಣೆ ಸಾಧ್ಯ. ವಾಹನಗಳು ಸಮಯಕ್ಕೆ ಸರಿಯಾಗಿ ಹೋಗದ ಅಥವಾ ತಲುಪದ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಕಸ ಬಿಸಾಡುವ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಮೂಲದಲ್ಲಿಯೇ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.

ಕಠಿಣ ಕ್ರಮ ಕೈಗೊಳ್ಳಲಾಗುವುದು:

ಕೆಲವು ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು. ಆದರೆ ಕಠಿಣ ಕ್ರಮವು ನಿಯಮ ಉಲ್ಲಂಘಿಸುವವರ ವಿರುದ್ಧ ಮಾತ್ರ ಕೈಗೊಳ್ಳಲಾಗುವುದು. ಬೆಳಿಗ್ಗೆ ಕಸ ಸಂಗ್ರಹಿಸಿದ ಬಳಿಕ ಮಧ್ಯಾಹ್ನ ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದಾದರೆ ನಗರವನ್ನು ಸ್ವಚ್ಛವಾಗಿಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು.

ತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಣೆ:

ತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿದಿನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಶಾಶ್ವತ ಸುಧಾರಣೆ ಸಾಧ್ಯ. ಈ ದಿಸೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದರೆ ಮುಂದಿನ ಮೂರುರಿಂದ ನಾಲ್ಕು ತಿಂಗಳಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು. ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಇನ್ನಷ್ಟು ಸುಧಾರಣೆ ತರಲು ಪ್ರಯತ್ನಿಸಲಾಗುವುದು.

ಎಲ್ಲರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದರೆ ನಾಗರಿಕರೂ ಉತ್ತಮ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಅಧಿಕಾರಿಗಳು ಕೂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗಮನಾರ್ಹ ಸುಧಾರಣೆ ಕಾಣಬಹುದೆಂಬ ನಿರೀಕ್ಷೆಯಿದೆ ಎಂದರು.

ಕಸ ಸಂಗ್ರಹಣಾ ವಾಹನಗಳ ಮೇಲ್ವಿಚಾರಣೆ:

ಕಸ ಸಂಗ್ರಹಣಾ ವಾಹನಗಳು ಹಾಗೂ ಸಿಬ್ಬಂದಿಯ ಹಾಜರಾತಿ ಮತ್ತು ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ನಗರ ಪಾಲಿಕೆ ಆಯುಕ್ತರು, ಇಂಜಿನಿಯರ್‌ಗಳು, ಡಿಜಿಎಂ ಹಾಗೂ ಎಜಿಎಂ ಮಟ್ಟದ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಎಲ್ಲ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಉತ್ತಮ ಫಲಿತಾಂಶ ತರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಜಿಪಿಎಸ್ ಕಡ್ಡಾಯ:

ತ್ಯಾಜ್ಯ ನಿರ್ವಹಣೆಯ 33 ಪ್ಯಾಕೇಜ್‌ಗಳ ಹೊಸ ಟೆಂಡರ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿದೆ. ಜಿಪಿಎಸ್ ಇಲ್ಲದ ವಾಹನಗಳಿಗೆ ಯಾವುದೇ ಪಾವತಿ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

ವಿಶೇಷ ಅಭಿಯಾನದ ಮೂಲಕ ಸ್ವಚ್ಛತೆ:

ನಗರದಲ್ಲಿ ರಸ್ತೆ ಬದಿಯಲ್ಲಿ ಬಿಸಾಡಲಾಗಿರುವ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು ಹಾಗೂ ಬೆಳೆದಿರುವ ಕಳೆ (ಗಿಡ-ಗಂಟಿಗಳು)ಗಳನ್ನು ವಿಶೇಷ ಅಭಿಯಾನದ ಮೂಲಕ ಸಂಪೂರ್ಣ ತೆರವುಗೊಳಿಸಲು ಸೂಚಿಸಲಾಗಿದೆ. ಈ ಸಂಬಂಧ ಪಾಲಿಕೆ, ರೈಲ್ವೆ, ಮೆಟ್ರೋ ಹಾಗೂ ಬಿಡಿಎ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಸಿಒಒ ರಮಾಮಣಿ, ಸಿಎಫ್‌ಒ ರಾಜು, ಸಿಜಿಎಂ ರಾಜೇಶ್, ಡಿಜಿಎಂಗಳು, ಎಜಿಎಂಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page