ಸಮಗ್ರ ಸುದ್ದಿ

ಭುವನೇಶ್ವರ–ಯಶವಂತಪುರ ವಿಶೇಷ ರೈಲು ಸಂಚಾರ ಅವಧಿ ವಿಸ್ತರಣೆ

Share

ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು, ಭುವನೇಶ್ವರ–ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ (ವಾರಕ್ಕೆ ಒಂದು ಬಾರಿ) ವಿಶೇಷ ರೈಲುಗಳ (ಸಂಖ್ಯೆ: 02811/02812) ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆಯು ಸೂಚಿಸಿದೆ.

ಪ್ರತಿ ಶನಿವಾರ ಭುವನೇಶ್ವರ ನಿಲ್ದಾಣದಿಂದ ಹೊರಡುವ ವಿಶೇಷ ರೈಲು ಸಂಖ್ಯೆ 02811 ಭುವನೇಶ್ವರ–ಯಶವಂತಪುರ ವಿಶೇಷ ರೈಲಿನ ಸೇವೆಯನ್ನು ಈ ಹಿಂದೆ ಜೂನ್ 27ರವರೆಗೆ ನಿಗದಿಪಡಿಸಲಾಗಿತ್ತು. ಇದನ್ನು ಈಗ ಜುಲೈ 4 ರಿಂದ ಆಗಸ್ಟ್ 29ರವರೆಗೆ ವಿಸ್ತರಿಸಲಾಗಿದೆ.

ಅದೇ ರೀತಿ, ಪ್ರತಿ ಸೋಮವಾರ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 02812 ಯಶವಂತಪುರ–ಭುವನೇಶ್ವರ ವಿಶೇಷ ರೈಲು ಈ ಮೊದಲು ಜೂನ್ 29ರವರೆಗೆ ಸಂಚರಿಸಲು ಸೂಚಿಸಲಾಗಿತ್ತು, ಇದನ್ನು ಈಗ ಜುಲೈ 6 ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.

ಈ ರೈಲುಗಳ ವೇಳಾಪಟ್ಟಿ, ನಿಲುಗಡೆ ಹಾಗೂ ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗಮನಿಸಿ:
ಕೆಎಸ್ಆರ್ ಬೆಂಗಳೂರು ನಿಲ್ದಾಣದ ಯಾರ್ಡ್ನಲ್ಲಿ ಕಾಮಗಾರಿ (ನಾನ್-ಇಂಟರ್ಲಾಕಿಂಗ್) ನಡೆಯುತ್ತಿರುವುದರಿಂದ ಈ ರೈಲುಗಳ ಸಂಚಾರದಲ್ಲಿ ಭಾಗಶಃ ಬದಲಾವಣೆ ಮಾಡಲಾಗಿದೆ. ಆಗಸ್ಟ್ 29ರಂದು ಭುವನೇಶ್ವರದಿಂದ ಹೊರಡುವ ರೈಲು ಸಂಖ್ಯೆ 02811 ಯಶವಂತಪುರ ಬದಲಿಗೆ ಯಲಹಂಕ ನಿಲ್ದಾಣದಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ. ಹಾಗೆಯೇ, ಆಗಸ್ಟ್ 31ರಂದು ಹೊರಡಬೇಕಿರುವ ರೈಲು ಸಂಖ್ಯೆ 02812 ಯಶವಂತಪುರ ಬದಲಿಗೆ ಯಲಹಂಕದಿಂದಲೇ ಪ್ರಯಾಣ ಆರಂಭಿಸಲಿದೆ. ಹೀಗಾಗಿ ಈ ಎರಡು ದಿನಗಳಂದು ಯಶವಂತಪುರ ಮತ್ತು ಯಲಹಂಕ ನಡುವೆ ರೈಲು ಸಂಚಾರ ಭಾಗಶಃ ರದ್ದಾಗಲಿದೆ.


Share

You cannot copy content of this page