ಸಮಗ್ರ ಸುದ್ದಿ

ವರ್ತೂರು ಎಸ್‌ಟಿಪಿ (𝗦𝗧𝗣) ಘಟಕದಲ್ಲಿ ಕಾರ್ಯಾಚರಣೆ ಚುರುಕು – ಕಾರ್ಮಿಕರ ದೇಹ ಪತ್ತೆಗಾಗಿ ಎನ್‌ಡಿಆರ್‌ಎಫ್ (𝗡𝗗𝗥𝗙) ನಿಯೋಜನೆ | ಘಟನೆಯ ಸಮಗ್ರ ತನಿಖೆಗೆ ಆದೇಶ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ- ಡಾ. ಎನ್. ಮಂಜುಳಾ

Share

ಬೆಂಗಳೂರು: ಗುರುವಾರ ಸಂಜೆ ಸುಮಾರು 6 ಗಂಟೆಗೆ ವರ್ತೂರಿನ ಬೆಳಗೆರೆಯಲ್ಲಿರುವ ಜಲಮಂಡಳಿಯ 40 ಅಡಿ ಆಳದ ತ್ಯಾಜ್ಯ ನೀರು ಸಂಸ್ಕರಣಾ (STP) ಟ್ಯಾಂಕ್‌ಗೆ ಮೂವರು ಕಾರ್ಮಿಕರು ಆಯತಪ್ಪಿ ಬಿದ್ದ ದುರದೃಷ್ಟಕರ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೇ ಭೇಟಿ ನೀಡಿದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ಮಂಜುಳಾ ಅವರು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಓರ್ವ ಕಾರ್ಮಿಕನನ್ನು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟಿರುವ ಇಬ್ಬರು ಕಾರ್ಮಿಕರಾದ ಬ್ರಿಜೇಶ್ ಮತ್ತು ಅಖಿಲೇಶ್ ಅವರ ದೇಹಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಮೃತದೇಹಗಳನ್ನು ತ್ವರಿತವಾಗಿ ಹೊರತೆಗೆಯಲು ಮತ್ತು ಪರಿಸ್ಥಿತಿಯನ್ನು ಸುಧಾರಿಸಲು *ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ತನ್ನಿಂದ ಸಾಧ್ಯವಿರುವ ಎಲ್ಲಾ ರೀತಿಯ ಕಠಿಣ ಪ್ರಯತ್ನಗಳು ಹಾಗೂ ಸಕಲ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ.

ಡ್ರೈನೇಜ್ ಟ್ಯಾಂಕ್‌ನೊಳಗೆ ವಿಷಾನಿಲ ತುಂಬಿರುವುದರಿಂದ ಮತ್ತು ನೀರಿನ ರಭಸ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟಾಗಿದೆ. ತ್ವರಿತವಾಗಿ ಕಾರ್ಯಾಚರಣೆ ಮುಗಿಸಲು ಮತ್ತು ಕಾರ್ಮಿಕರನ್ನು ಹೊರತೆಗೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಟ್ಯಾಂಕ್‌ನೊಳಗಿನ ವಿಷಾನಿಲದ ಅಪಾಯವನ್ನು ಎದುರಿಸಲು ಅಗ್ನಿಶಾಮಕ ದಳದ ಜೊತೆಗೆ ಇದೀಗ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (𝗡𝗗𝗥𝗙) ತಜ್ಞರನ್ನು ಸ್ಥಳಕ್ಕೆ ಕರೆಯಿಸಲಾಗಿದೆ.
ರಕ್ಷಣಾ ಸಿಬ್ಬಂದಿ ಟ್ಯಾಂಕ್‌ನೊಳಗೆ ಇಳಿಯುವ ಮುನ್ನ, ಒಳಗಿರುವ ವಿಷಾನಿಲವನ್ನು ಹೋಗಲಾಡಿಸಲು ಟ್ಯಾಂಕ್‌ಗೆ ಆಮ್ಲಜನಕವನ್ನು (Oxygen) ತುಂಬುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಆಮ್ಲಜನಕ ತುಂಬಿದ ತಕ್ಷಣವೇ ಎನ್‌ಡಿಆರ್‌ಎಫ್ (𝗡𝗗𝗥𝗙) ಸಿಬ್ಬಂದಿ ಟ್ಯಾಂಕ್‌ನೊಳಗೆ ಇಳಿದು ಶೋಧ ಕಾರ್ಯವನ್ನು ಮುಂದುವರಿಸಲಿದ್ದಾರೆ.

ಜಲಮಂಡಳಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಬಿಡು ಬಿಟ್ಟಿದ್ದು, ಜಲಮಂಡಳಿಯು ಸ್ಥಳದಲ್ಲಿ ಎಲ್ಲಾ ಅಗತ್ಯ ನೆರವು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ದುರದೃಷ್ಟಕರ ಘಟನೆಯ ಸಮಗ್ರ ತನಿಖೆಗೆ ಆದೇಶ ನೀಡಲಾಗಿದ್ದು, ನಿರ್ಲಕ್ಷ್ಯ ತೋರಿದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.


Share

You cannot copy content of this page