ಸಮಗ್ರ ಸುದ್ದಿ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣ ಮಹತ್ವದ್ದು: ಈಶ್ವರಖಂಡ್ರೆ

Share

ನೆಲಮಂಗಲ: ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣ ಅತ್ಯಂತ ಮಹತ್ವದ್ದಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಗೋರಿನಬೆಲೆಯ ಗೋಲ್ಡನ್ ರೇ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಕ್ಷರಾಭ್ಯಾಸ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬುನಾದಿ ಗಟ್ಟಿಯಾಗಿದ್ದರೆ ಭವ್ಯ ಸೌಧ ನಿರ್ಮಿಸಲು ಸಾಧ್ಯ. ಅದೇ ರೀತಿ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಕಲಿಕೆಯ ಆಸಕ್ತಿ ಮೂಡಿಸಿದರೆ ಅವರು ಸಾಧಕರಾಗುತ್ತಾರೆ ಎಂದರು.

ವಿದ್ಯಾವಂತರಾದರಷ್ಟೇ ಸಾಲದು ಬುದ್ಧವಂತರಾಗಬೇಕು:
ಮಕ್ಕಳು ಕೇವಲ ವಿದ್ಯಾವಂತರಾದರಷ್ಟೇ ಸಾಲದು, ಬುದ್ಧಿವಂತರಾಗಬೇಕು, ಜ್ಞಾನವಂತರಾಗಬೇಕು. ಜ್ಞಾನಕ್ಕೆ ಮಿಗಿಲಾದ್ದು ಯಾವುದೂ ಇಲ್ಲ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾವಂತರು ಮಾತ್ರ ಯಶಸ್ಸು ಸಾಧಿಸುತ್ತಾರೆ. ಹೀಗಾಗಿ ಮಕ್ಕಳು ಬಾಹ್ಯ ಪ್ರಭಾವಕ್ಕೆ ಒಳಗಾಗದೆ ಕಲಿಕೆಗೆ ಒತ್ತು ನೀಡಬೇಕು ಎಂದರು.

ನೈತಿಕ ಶಿಕ್ಷಣವೂ ಅಷ್ಟೇ ಮುಖ್ಯ:

ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನೂ ಕಲಿಸಬೇಕು. ರಾಷ್ಟ್ರಕವಿ ಕುವೆಂಪು ಅವರು ಎಲ್ಲ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ, ಬೆಳೆಯುವಾಗ ಅಲ್ಪ ಮಾನವರಾಗುತ್ತಾರೆ ಎಂದು ಹೇಳಿದ್ದಾರೆ. ನಾವು ಮೇಲು, ಕೀಳು ಭಾವನೆ ಬಿಟ್ಟು ವಿಶ್ವ ಮಾನವರಾಗಿಯೇ ಉಳಿಯಬೇಕು, ಈ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.

ಸಂಪತ್ತು ಹೋದರೆ ಏನೂ ಹೋಗಲ್ಲ ಮತ್ತೆ ಗಳಿಸಬಹುದು, ಆರೋಗ್ಯ ಹೋದರೆ ಸ್ವಲ್ಪ ನಷ್ಟ ಆಗುತ್ತದೆ. ಆದರೆ ಚಾರಿತ್ರ್ಯ ಹೋದರೆ ಸರ್ವಸ್ವವೂ ಹೋದಂತೆ ಎಂದ ಈಶ್ವರ ಖಂಡ್ರೆ, ಮಕ್ಕಳನ್ನು ಚಾರಿತ್ರ್ಯವಂತರನ್ನಾಗಿ ಬೆಳೆಸುವ ಹೊಣೆ ಪಾಲಕರು ಮತ್ತು ಶಿಕ್ಷಕರ ಮೇಲಿದೆ ಎಂದು ಪ್ರತಿಪಾದಿಸಿದರು.

ಇಂದು ವಿದ್ಯಾರ್ಥಿಗಳು ಮೊಬೈಲ್ ಫೋನ್ ಗಳಲ್ಲಿ ಕಳೆದು ಹೋಗುತ್ತಿದ್ದಾರೆ, ದುಶ್ಚಟ ದುರ್ಗುಣಗಳ ದಾಸರಾಗುತ್ತಿದ್ದಾರೆ. ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಮತ್ತು ಸದ್ಗುಣಿಗಳನ್ನಾಗಿ ಮಾಡುವ ಕಾರ್ಯವನ್ನು ತಂದೆ ತಾಯಿ ಹಾಗೂ ಶಿಕ್ಷಕರು ಮಾಡಬೇಕು ಎಂದರು.

ಪ್ರಕೃತಿ, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ:

ಇಂದು ನಾವು ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿದ್ದು, ನಮ್ಮ ಸುತ್ತಲ ಪರಿಸರ ಪ್ರಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅದು ನಮ್ಮ ಹೊಣೆ ಎಂದು ಈಶ್ವರ ಖಂಡ್ರೆ ಹೇಳಿದರು.

ಭಾರತದಲ್ಲಿ ಅದ್ಭುತ ಮಾನವ ಸಂಪನ್ಮೂಲವಿದೆ. ಭಾರತೀಯರ ಬುದ್ಧಿಗೆ ಬಂಗಾರದ ಬೆಲೆ ಇದೆ. ಇಂದು ಮೆಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದು, ಇಂದಿನ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಹೊಸ ಕಲಿಕೆಯ ಕಡೆಗೆ ಗಮನ ಕೊಡಬೇಕು. ಮಕ್ಕಳ ಆರೋಗ್ಯದ ಕಡೆಗೂ ಪಾಲಕರು ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮೀಜಿ, ಡಾ.ಎಸ್. ಪರಮೇಶ್, ಎಂ.ಎಸ್. ಮೃತ್ಯುಂಜಯ, ನಟರಾಜ್ ಸಗರನಹಳ್ಳಿ, ಸಚ್ಚಿದಾನಂದ ಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.


Share

You cannot copy content of this page