ಬೆಂಗಳೂರು: ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಮಳೆಗಾಲದ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರವಾಹ ಪೀಡಿತ ಪ್ರದೇಶಗಳು, ರಾಜಕಾಲುವೆಗಳು, ಸೈಡ್ ಡ್ರೈನ್, ರಸ್ತೆ ಕಾಮಗಾರಿಗಳು ಹಾಗೂ ಬ್ಲಾಕ್ ಸ್ಪಾಟ್‌ಗಳ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಪರಿಶೀಲನೆ ವೇಳೆ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ, ಪ್ರವಾಹ ತಡೆ ಕ್ರಮಗಳು, ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಶೀಘ್ರ ಪರಿಹಾರಕ್ಕೆ ಸೂಚಿಸಿದರು.
ಪರಿಶೀಲಿಸಲಾದ ಪ್ರಮುಖ ಸ್ಥಳಗಳು
ಸ್ಪೈಸ್ ಗಾರ್ಡನ್ ಪ್ರದೇಶದಲ್ಲಿ ರಾಜಕಾಲುವೆ ಮತ್ತು ಕಲ್ವರ್ಟ್ ಪರಿಶೀಲನೆ
ಮಾರತಹಳ್ಳಿಯ ಸ್ಪೈಸ್ ಗಾರ್ಡನ್ ಪ್ರದೇಶದಲ್ಲಿ ವಿಶ್ವಬ್ಯಾಂಕ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಲಾಯಿತು. ರಸ್ತೆ ಅಡ್ಡಲಾಗಿ ನಿರ್ಮಿಸಲಾದ ಕಲ್ವರ್ಟ್‌ನ ಮೂರು ವೆಂಟ್‌ಗಳಲ್ಲಿ ಕೇವಲ ಒಂದು ವೆಂಟ್ ಮೂಲಕ ಮಾತ್ರ ಮಳೆ ನೀರು ಹರಿಯುತ್ತಿದ್ದು, ಉಳಿದ ಎರಡು ವೆಂಟ್‌ಗಳು ಹೂಳು ಹಾಗೂ ತ್ಯಾಜ್ಯದಿಂದ ಮುಚ್ಚಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಮಧ್ಯಭಾಗದಲ್ಲಿ ಕಲ್ವರ್ಟ್ ತೆರೆಯುವ ಮೂಲಕ ಹೂಳು ತೆರವುಗೊಳಿಸಿ ನೀರಿನ ಹರಿವನ್ನು ಸುಗಮಗೊಳಿಸಲು ಹಾಗೂ ನೀರಿನ ಹರಿವಿಗೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇದೇ ವೇಳೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕಾಲುವೆ ಒತ್ತುವರಿ ಪ್ರಕರಣಗಳನ್ನು ಕಾನೂನು ಕ್ರಮದ ಮೂಲಕ ತೆರವುಗೊಳಿಸಿ ಕಾಮಗಾರಿಯನ್ನು ಮುಂದುವರಿಸಲು ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೂಬರಹಳ್ಳಿ ಪ್ರವಾಹ ಪೀಡಿತ ಪ್ರದೇಶ ಪರಿಶೀಲನೆ
ತೂಬರಹಳ್ಳಿ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ನಿಲ್ಲುವ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದ ಅಪರ ಆಯುಕ್ತರು ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ರಸ್ತೆ-ಕಮ್-ಬಾಕ್ಸ್ ಡ್ರೈನ್ ನಿರ್ಮಾಣ ಕಾಮಗಾರಿ ಪ್ರಸ್ತಾವನೆ ಸರ್ಕಾರದ ಅನುಮೋದನೆ ಹಂತದಲ್ಲಿದ್ದು, ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಣತ್ತೂರು ಅಂಡರ್‌ಪಾಸ್‌ನಲ್ಲಿ ಶಾಶ್ವತ ಪರಿಹಾರ ಕಲ್ಪಿಸಿ
ಪಣತ್ತೂರು ಅಂಡರ್‌ಪಾಸ್ ಸಮೀಪ ಮಳೆ ನೀರಿನ ಹರಿವಿಗಾಗಿ ತಾತ್ಕಾಲಿಕವಾಗಿ ಅಳವಡಿಸಿರುವ ಪೈಪ್ ಅನ್ನು ತೆರವುಗೊಳಿಸಿ ಶಾಶ್ವತ ಕಾಂಕ್ರೀಟ್ ಡ್ರೈನ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಂಡರ್‌ಪಾಸ್ ಪ್ರವೇಶ ರಸ್ತೆಯ ಡಾಂಬರೀಕರಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ದೇವರಬೀಸನಹಳ್ಳಿ ಪ್ರದೇಶದಲ್ಲಿ ರಾಜಕಾಲುವೆ ನಿರ್ವಹಣೆಗೆ ಆದ್ಯತೆ
ದೇವರಬೀಸನಹಳ್ಳಿ ಪ್ರದೇಶದಲ್ಲಿ ಮೆಟ್ರೋ ಪಿಲ್ಲರ್‌ಗಳ ಸಮೀಪದ ರಾಜಕಾಲುವೆಗಳನ್ನು ಪರಿಶೀಲಿಸಿದ ಅಪರ ಆಯುಕ್ತರು ಹೂಳು ಹಾಗೂ ತ್ಯಾಜ್ಯ ತೆರವುಗೊಳಿಸುವ ಮೂಲಕ ಮಳೆ ನೀರಿನ ಹರಿವನ್ನು ಸುಗಮಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಕ್ರಾ ಆಸ್ಪತ್ರೆ ರಸ್ತೆ ಬಳಿ ವಿಶ್ವಬ್ಯಾಂಕ್ ಕಾಮಗಾರಿ ತ್ವರಿತಗೊಳಿಸಲು ಸೂಚನೆ
ಸಕ್ರಾ ಆಸ್ಪತ್ರೆ ಸಮೀಪ ವಿಶ್ವಬ್ಯಾಂಕ್ ಯೋಜನೆಯಡಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ತಕ್ಷಣ ಆರಂಭಿಸಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ರಾಜಕಾಲುವೆಯ ತಿರುವು ಪ್ರದೇಶದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗುತ್ತಿರುವ ಸಮಸ್ಯೆ ಪರಿಹರಿಸಲು ರಸ್ತೆ ಅಡ್ಡಲಾಗಿ ಹೊಸ ಕಲ್ವರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಔಟರ್ ರಿಂಗ್ ರಸ್ತೆ ಫ್ಲೈಓವರ್ ಪ್ರದೇಶದಲ್ಲಿ ಪ್ರವಾಹ ತಡೆಗೆ ಕ್ರಮ
ಔಟರ್ ರಿಂಗ್ ರಸ್ತೆ ಫ್ಲೈಓವರ್ ಸಮೀಪ ಮಳೆ ನೀರು ನಿಲ್ಲುವ ಸಮಸ್ಯೆ ಕುರಿತು ಪರಿಶೀಲನೆ ನಡೆಸಿ, ರಾಜಕಾಲುವೆ ಹಾಗೂ ಚರಂಡಿಗಳಲ್ಲಿನ ಹೂಳು ತೆರವುಗೊಳಿಸಿ ರಸ್ತೆ ಬದಿಯ ಚರಂಡಿಯನ್ನು ವಿಸ್ತರಿಸಿ ಕಾಲುವೆಗೆ ಸಂಪರ್ಕ ಕಲ್ಪಿಸುವ ಮೂಲಕ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೆ.ಆರ್. ಪುರಂ ಜಿಆರ್‌ಟಿ ಜಂಕ್ಷನ್‌ನಲ್ಲಿ ಹೂಳು ತೆರವು ಕಾರ್ಯಕ್ಕೆ ಸೂಚನೆ
ಕೆ.ಆರ್. ಪುರಂನ ಜಿಆರ್‌ಟಿ ಜಂಕ್ಷನ್ ಪ್ರದೇಶದಲ್ಲಿ ರಸ್ತೆ ಬದಿಯ ಚರಂಡಿಗಳಲ್ಲಿ ಹೂಳು ಮತ್ತು ತ್ಯಾಜ್ಯ ಸಂಗ್ರಹವಾಗಿರುವುದನ್ನು ಪರಿಶೀಲಿಸಿ, ಮಳೆಗಾಲವಿರುವುದರಿಂದ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಂಡು ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಮಮೂರ್ತಿನಗರದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ರಾಮಮೂರ್ತಿನಗರ ಚರ್ಚ್ ಸಮೀಪ ನಗರೋತ್ಥಾನ ಪ್ಯಾಕೇಜ್-4 ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ ಕೌದೇನಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗಿರುವ ಅತಿಕ್ರಮಣಗಳನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕಲ್ಕೆರೆ ಪ್ರದೇಶದಲ್ಲಿ ಕಾಲುವೆ ಅಭಿವೃದ್ಧಿ ವೇಗ ನೀಡಿ
ಕಲ್ಕೆರೆ ಪ್ರದೇಶದಲ್ಲಿ ವಿಶ್ವಬ್ಯಾಂಕ್ ಯೋಜನೆಯಡಿ ಕೈಗೊಳ್ಳಬೇಕಿರುವ ರಾಜಕಾಲುವೆ ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸಲು ಹಾಗೂ ಎನ್‌ಪಿಎಸ್ ಶಾಲೆ ಸಮೀಪ ರಾಜಕಾಲುವೆ ಅಭಿವೃದ್ಧಿಗೆ ಅಗತ್ಯ ಅಂದಾಜು ವೆಚ್ಚ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಕಲ್ಕೆರೆ ಮುಖ್ಯರಸ್ತೆಯ ಪ್ರವೇಶ ಭಾಗದಲ್ಲಿ ತ್ಯಾಜ್ಯ ವಿಂಗಡಣೆಯಿಂದ ಉಂಟಾಗಿರುವ ಬ್ಲಾಕ್ ಸ್ಪಾಟ್ ಪರಿಶೀಲಿಸಿ, ತಕ್ಷಣ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಎನ್‌ಆರ್‌ಐ ಲೇಔಟ್‌ನಲ್ಲಿ ರಸ್ತೆ ಮರುಸ್ಥಾಪನೆಗೆ ಸೂಚನೆ
ಎನ್‌ಆರ್‌ಐ ಲೇಔಟ್ ಪ್ರದೇಶದಲ್ಲಿ ಜಲಮಂಡಳಿ ವತಿಯಿಂದ ಪೈಪ್ಲೈನ್ ಅಳವಡಿಸಲು ರಸ್ತೆ ಅಗೆದು ರಸ್ತೆ ಮರುಸ್ಥಾಪಿಸದಿರುವುದು ಕಂಡುಬಂದಿದ್ದು ಕೂಡಲೇ ಜಲಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ರಸ್ತೆಗಳನ್ನು ಮರುಸ್ಥಾಪಿಸಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಇದೇ ವೇಳೆ ವಿಶ್ವಬ್ಯಾಂಕ್ ಯೋಜನೆಯಡಿ ಕೈಗೊಳ್ಳಬೇಕಿರುವ ರಾಜಕಾಲುವೆ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಳೆಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಹಿಸಿ
ಪರಿಶೀಲನೆ ವೇಳೆ ಮಾತನಾಡಿದ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು, ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ರಾಜಕಾಲುವೆಗಳು, ಚರಂಡಿಗಳು, ರಸ್ತೆ ಬದಿಯ ನೀರು ಹರಿವಿನ ವ್ಯವಸ್ಥೆಗಳು ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರಂತರ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹ ಸಮಸ್ಯೆ ಉಂಟಾಗುವ ಸ್ಥಳಗಳನ್ನು ಆದ್ಯತೆಯ ಮೇರೆಗೆ ಗುರುತಿಸಿ, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರಿಶೀಲನೆ ವೇಳೆ ಮುಖ್ಯ ಅಭಿಯಂತರರಾದ ಲೋಕೇಶ್, ಕೃಷ್ಣಮೂರ್ತಿ, ಕಾರ್ಯಪಾಲಕ ಅಭಿಯಂತರರು(SWD), ಕಾರ್ಯಪಾಲಕ ಅಭಿಯಂತರರು(PIU), ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಪ್ರಧಾನ ವ್ಯವಸ್ಥಾಪಕರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
