ಸಮಗ್ರ ಸುದ್ದಿ

ಸಮಗ್ರ ಯೋಜನೆ ರೂಪಿಸಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಕೃಷ್ಣ ಬೈರೇಗೌಡ|ಬೆಂಗಳೂರು ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರಕ್ಕೆ ಬಿ-ಸ್ಮೈಲ್ ನಿಂದ ಯೋಜನೆ

Share

ಬೆಂಗಳೂರು: ನಗರದಲ್ಲಿ ಬಿ-ಸ್ಮೈಲ್ ವತಿಯಿಂದ ಕೈಗೆತ್ತಿಕೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಮಗ್ರ ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ದೀರ್ಘಕಾಲದ ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ.

ಬಿ-ಸ್ಮೈಲ್ ವತಿಯಿಂದ ಸಂಚಾರ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರ ಒದಗಿಸಲು ಕೈಗೆತ್ತಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ನೀಲನಕ್ಷೆ ರೂಪಿಸಿದ್ದು, ಅನೇಕ ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ನಾನು ಯಾವುದೇ ಹೊಸ ಸಲಹೆ-ಸೂಚನೆಗಳನ್ನು ನೀಡಿಲ್ಲ. ಈಗಾಗಲೇ ರೂಪಿಸಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ವೈಟ್ ಟಾಪಿಂಗ್ ರಸ್ತೆ ಕಾಮಗಾರಿ:

ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳು ಹಾಳಾದರೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ 2016ರಿಂದ ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು, ಪದೇಪದೇ ಹಾಳಾಗುವುದನ್ನು ತಡೆಯಲು ಹಾಗೂ 20-30 ವರ್ಷಗಳ ಕಾಲ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸಲು ಈ ಕಾಮಗಾರಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಒಂದು ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿಗೆ ಸುಮಾರು 10 ಕೋಟಿ ರೂ. ವೆಚ್ಚವಾಗುತ್ತದೆ. ಅದೇ ಅವಧಿಯಲ್ಲಿ ಡಾಂಬರೀಕರಣವನ್ನು 5-6 ಬಾರಿ ಮಾಡಿದರೆ ಹೆಚ್ಚಿನ ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ದೀರ್ಘಕಾಲ ಬಾಳಿಕೆ ಬರುವ, ಗುಂಡಿ ಮುಕ್ತ ರಸ್ತೆಗಳನ್ನು ನಿರ್ಮಿಸುವ ಉದ್ದೇಶದಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

6 ತಿಂಗಳಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ:

ಈಗಾಗಲೇ 196 ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಹೊಸದಾಗಿ 126 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅದರಲ್ಲಿ 58 ಕಿ.ಮೀ. ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳಿಗೆ ವೇಗ ನೀಡಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳನ್ನು ನಿರ್ಮಿಸುವುದರ ಜೊತೆಗೆ ಗುಣಮಟ್ಟದ ಪಾದಚಾರಿ ಮಾರ್ಗಗಳನ್ನೂ ನಿರ್ಮಿಸಲಾಗುತ್ತಿದೆ. ವೈಟ್ ಟಾಪಿಂಗ್ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಸೂಕ್ತ ಒತ್ತಡ ಹೇರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದೇನೆ ಎಂದರು.

ಹೊಸದಾಗಿ 450 ಕಿ.ಮೀ. ರಸ್ತೆಗೆ ವೈಟ್ ಟಾಪಿಂಗ್:

ಕರ್ನಾಟಕ ಸರ್ಕಾರವು 2026-27ನೇ ಸಾಲಿನಲ್ಲಿ 3000 ಕೋಟಿ ರೂ. ವೆಚ್ಚದಲ್ಲಿ 450 ಕಿ.ಮೀ. ಉದ್ದದ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಿದೆ. ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ:

ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಕಾಮಗಾರಿ ನಡೆಯುವ ಪ್ರದೇಶಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ರಾಶಿ ಮಾಡುವುದು, ಜೆಲ್ಲಿ ಹಾಕಿ ಹಾಗೆಯೇ ಬಿಡುವುದು ಹಾಗೂ ರಸ್ತೆ ಅಗೆದು ನಿರ್ಲಕ್ಷ್ಯ ವಹಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ ಗುರಿ ನಿಗದಿಪಡಿಸಿ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ಸ್ಥಳ ಪರಿಶೀಲನೆ ವೇಳೆ ಸಮಸ್ಯೆಗಳು ಕಂಡುಬಂದರೆ ಅವುಗಳನ್ನು ತಕ್ಷಣ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದರು.

ಸುರಂಗ ಮಾರ್ಗ ಯೋಜನೆ:

ಉತ್ತರ-ದಕ್ಷಿಣ ದಿಕ್ಕಿನಲ್ಲಿ 16.7 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಸಚಿವ ಸಂಪುಟದ ಅನುಮೋದನೆಯ ಬಳಿಕ ಯೋಜನೆ ಅನುಷ್ಠಾನಗೊಳ್ಳಲಿದೆ. ಇದು ಸಂಕೀರ್ಣ ಹಾಗೂ ಮಹತ್ವದ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಅದರ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು.

ಪೂರ್ವ-ಪಶ್ಚಿಮ ಸುರಂಗ ಮಾರ್ಗ ಯೋಜನೆಯಡಿ ಹಳೆ ಮದ್ರಾಸ್ ರಸ್ತೆಯಿಂದ ಮೈಸೂರು ರಸ್ತೆಯವರೆಗೆ 22 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಿನ ಹಂತದಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

150 ಕಿ.ಮೀ. ಎಲಿವೇಟೆಡ್ ಕಾರಿಡಾರ್:

ನಗರದ ಸಂಚಾರ ದಟ್ಟಣೆಗೆ ದೀರ್ಘಾವಧಿಯ ಪರಿಹಾರ ಕಲ್ಪಿಸುವ ಉದ್ದೇಶದಿಂದ 150 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 75 ಕಿ.ಮೀ. ಉದ್ದದ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸಮಗ್ರ ಯೋಜನೆ:

ನಗರದ ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸಲು ಸಮಗ್ರ ಪರಿಹಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವೈಟ್ ಟಾಪಿಂಗ್ ರಸ್ತೆಗಳು, ಸುರಂಗ ಮಾರ್ಗಗಳು ಹಾಗೂ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಎಲಿವೇಟೆಡ್ ಹಾಗೂ ಸುರಂಗ ಮಾರ್ಗಗಳು ನಿರ್ಮಾಣವಾದ ನಂತರ ಪ್ರವೇಶ ಮತ್ತು ನಿರ್ಗಮನ (ಎಂಟ್ರಿ-ಎಕ್ಸಿಟ್) ಪಾಯಿಂಟ್‌ಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಿ ಸೂಕ್ತ ಪರಿಹಾರ ಕ್ರಮಗಳನ್ನು ರೂಪಿಸಬೇಕು. ಈ ಸಂಬಂಧ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು 275 ಕಿ.ಮೀ. ಮೆಟ್ರೋ ಜಾಲ ನಿರ್ಮಿಸುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ಸಾರ್ವಜನಿಕ ಬಸ್ ಸಾರಿಗೆಗೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನಗರದಲ್ಲಿ ಕೋಟ್ಯಂತರ ವಾಹನಗಳು ಸಂಚರಿಸುತ್ತಿದ್ದು, ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಮುಖ ರಸ್ತೆಗಳು, ಹೊರ ವರ್ತುಲ ರಸ್ತೆ ಹಾಗೂ ಹೆಚ್ಚಿನ ಸಂಚಾರ ಸಾಂದ್ರತೆ ಹೊಂದಿರುವ ರಸ್ತೆಗಳನ್ನು ಗುರುತಿಸಿ ಸಮಗ್ರ ಪರಿಹಾರ ಕಲ್ಪಿಸಲು ಬಿ-ಸ್ಮೈಲ್ ಯೋಜನೆ ರೂಪಿಸಿದೆ ಎಂದು ಹೇಳಿದರು.

ಹೊರ ವರ್ತುಲ ರಸ್ತೆ ಮರುವಿನ್ಯಾಸ:

ಹೊರ ವರ್ತುಲ ರಸ್ತೆಯ ಮರುವಿನ್ಯಾಸಕ್ಕಾಗಿ 450 ಕೋಟಿ ರೂ. ವೆಚ್ಚದ ಸಮಗ್ರ ಯೋಜನೆ ರೂಪಿಸಲಾಗಿದೆ. ಮೆಟ್ರೋ ಕಾಮಗಾರಿಯೊಂದಿಗೆ ಈ ಯೋಜನೆಯನ್ನು ಏಕಕಾಲದಲ್ಲಿ ಆರಂಭಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ಸಭೆಯಲ್ಲಿ ಬಿ-ಸ್ಮೈಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಿರ್ದೇಶಕ (ತಾಂತ್ರಿಕ) ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಮಾಲತಿ, ಮಾದೇಶ್, ವಿಶ್ವನಾಥ್, ಕಾರ್ಯಪಾಲಕ ಅಭಿಯಂತರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page