ಸಮಗ್ರ ಸುದ್ದಿ

ಅಡ್ಡ ಮತದಾನ ಹೈಕಮಾಂಡ್‌ನ ಶಿಫಾರಸಿನ ಆಧಾರದ ಮೇಲೆ ಕ್ರಮ: ಬಸವರಾಜ ಬೊಮ್ಮಾಯಿ

Share

​ಕೊಪ್ಪಳ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಬಗ್ಗೆ ಬಿಜೆಪಿಯ ಸಮಿತಿ ವರದಿ ನೀಡಿದ ನಂತರ ಅದನ್ನು ಹೈಕಮಾಂಡ್ ಮುಂದೆ ಇಟ್ಟು ಹೈಕಮಾಂಡ್‌ನ ಶಿಫಾರಸಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಹೇಳಿದರು.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ಕ್ರಾಸ್ ವೋಟಿಂಗ್ ಬಗ್ಗೆ ಮಾತನಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಸದಾನಂದ ಗೌಡರು ಏನು ಹೇಳಿದ್ದಾರೆ ಎಂಬ ವಿವರಗಳು ನನಗೆ ಗೊತ್ತಿಲ್ಲ. ನಾನು ನಾಳೆ ಬೆಂಗಳೂರಿಗೆ ಹೋಗುತ್ತಿದ್ದೇನೆ, ಅಲ್ಲಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ನೀಟ್ ಪರೀಕ್ಷೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ನೀಟ್ ವಿದ್ಯಾರ್ಥಿಗಳಿಗೆ ನಿನ್ನೆ ಒಂದು ಅಣಕು ಪರೀಕ್ಷೆ ಕೂಡ ನಡೆದಿತ್ತು ಮತ್ತು ಅದು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಡಿಜಿಟಲ್ ಭದ್ರತೆಯನ್ನು ಸಹ ಒದಗಿಸಲಾಗಿದೆ. ಇದನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಇದ್ದರು, ಆದರೆ ಈಗ ಸೋರಿಕೆಯಾಗದ ಪರೀಕ್ಷಾ ವ್ಯವಸ್ಥೆ ಬರಲಿದೆ. ಮತ್ತು ಶೀಘ್ರದಲ್ಲೇ ಮರು-ನೀಟ್ ಪರೀಕ್ಷೆಯನ್ನು ನಡೆಸಲಾಗುವುದು.

ಈ ಮರು-ನೀಟ್ ಪರೀಕ್ಷೆ ತುಂಬಾ ಯಶಸ್ವಿಯಾಗಲಿದೆ ಮತ್ತು ತಮ್ಮ ವೃತ್ತಿಜೀವನದಲ್ಲಿ ಮುಂದೆ ಬರಲು ನಿಜವಾಗಿಯೂ ಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಸಹಾಯ ಮಾಡುತ್ತದೆ ಎಂಬ ಭರವಸೆ ನನಗಿದೆ ಎಂದು ಹೇಳಿದರು.

​ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಅಸಂಬದ್ಧ ನಡವಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಕಾರ್ಯಕರ್ತರ ನಡುವಿನ ವಿಷಯ. ಅವರ ನಡುವೆ ಎಂತಹ ಗೌರವವಿದೆ ಎಂಬುದನ್ನು ಇದು ತೋರಿಸುತ್ತದೆ ಎಂದರು.


Share

You cannot copy content of this page