ಬೆಂಗಳೂರು: ಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳಿಗಾಗಿ ನಿರ್ಮಾಣ ಮಾಡುತ್ತಿರುವ ವಸತಿ ಮತ್ತು ಕಚೇರಿ ಕಟ್ಟಡಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ, ಅತ್ಯುತ್ತಮ ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಗೃಹ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಂದು ನಡೆದ ಕರ್ನಾಟಕ ರಾಜ್ಯ ಪೊಲೀಸ್ ಗೃಹ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ (KSPH & IDCL) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಕಾರ್ಯಕ್ರಮಗಳ ಮೂಲಕ ಇಲಾಖೆಯ ಸಿಬ್ಬಂದಿಗಳ ಮಕ್ಕಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಮತ್ತು ಯಶಸ್ಸು ಸಾಧಿಸಲು ಅಗತ್ಯವಿರುವ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರು ನಿರ್ದೇಶನ ನೀಡಿದರು.
ಪ್ರಮುಖ ನಿರ್ಧಾರಗಳು ಮತ್ತು ಪ್ರಗತಿಯ ವಿವರಗಳು:
ಪೊಲೀಸ್ ಗೃಹ-2025 ಯೋಜನೆ: ಪೊಲೀಸ್ ಸಿಬ್ಬಂದಿಗಳ ವಸತಿ ಸೌಲಭ್ಯಕ್ಕಾಗಿ ಹಮ್ಮಿಕೊಳ್ಳಲಾಗಿರುವ ₹2,000 ಕೋಟಿ ಬಜೆಟ್‌ನ ‘ಪೊಲೀಸ್ ಗೃಹ-2025’ ಯೋಜನೆಯಡಿ ಒಟ್ಟು 10,034 ವಸತಿ ಗೃಹಗಳನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ ಈಗಾಗಲೇ 3,496 ವಸತಿ ಗೃಹಗಳ ನಿರ್ಮಾಣ ಪೂರ್ಣಗೊಂಡಿದೆ ಹಾಗೂ 2,030 ಗೃಹಗಳ ಕಾಮಗಾರಿ ಪ್ರಗತಿಯಲ್ಲಿದೆ.
ಮೂಲಸೌಕರ್ಯ ಅಭಿವೃದ್ಧಿ: ಬೆಂಗಳೂರಿನಲ್ಲಿ ಅತ್ಯಾಧುನಿಕ ‘ಕೇಂದ್ರ ಕಮಾಂಡ್ ಸೆಂಟರ್’ (Central Command Centre) ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ. ಇದರೊಂದಿಗೆ ವಿವಿಧ ಜಿಲ್ಲೆಗಳಲ್ಲಿ ಹೊಸ ಪೊಲೀಸ್ ಠಾಣೆಗಳು, ಡಿಪಿಒ ಕಚೇರಿಗಳು ಮತ್ತು ಎಫ್‌ಎಸ್‌ಎಲ್ (FSL) ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಇತರ ಇಲಾಖೆಗಳ ಕಾಮಗಾರಿಗಳು: ನಿಗಮದ ವತಿಯಿಂದ ಕಾರಾಗೃಹ ಇಲಾಖೆ (ಶಿವಮೊಗ್ಗದಲ್ಲಿ ಹೈ-ಸೆಕ್ಯುರಿಟಿ ಜೈಲು ಮತ್ತು ದೇವನಹಳ್ಳಿಯಲ್ಲಿ ಸೆಂಟ್ರಲ್ ಜೈಲು), ಅಗ್ನಿಶಾಮಕ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ನಿರ್ಮಾಣ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ.
ಐತಿಹಾಸಿಕ ಹಿನ್ನೆಲೆ:
ರಾಜ್ಯದ ಪೊಲೀಸ್ ಸಿಬ್ಬಂದಿಗೆ ವಸತಿ ಒದಗಿಸುವ ಈ ಬೃಹತ್ ಯೋಜನೆಗೆ ರಾಜ್ಯದ ಅಂದಿನ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ದೊಡ್ಡದು. ಪ್ರಸ್ತುತ ಇಲಾಖೆಯಲ್ಲಿರುವ ಒಟ್ಟು ವಸತಿ ಗೃಹಗಳ ಪೈಕಿ ಶೇ. 41.43 ರಷ್ಟು ಭಾಗ ಮಲ್ಲಿಕಾರ್ಜುನ ಖರ್ಗೆಅವರಿಂದ ಪ್ರೇರಿತಗೊಂಡ ಯೋಜನೆಗಳಿಂದ ನಿರ್ಮಾಣಗೊಂಡಿರುವುದಾಗಿದೆ.*
ಸಭೆಯಲ್ಲಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಎಂ.ಎ. ಸಲೀಂ, ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಚಕ್ರವರ್ತಿ (IPS) ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
