ಬೆಂಗಳೂರು:ಹಸಿರು ಬೆಂಗಳೂರಿನ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಸಸಿ ನೆಡುವ ಈ ಬೃಹತ್ ಅಭಿಯಾನದಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮನವಿ ಮಾಡಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳು, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ಸಂಘ–ಸಂಸ್ಥೆಗಳ ಸಹಭಾಗಿತ್ವದಲ್ಲಿ “ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026–30” ರ ಅಂಗವಾಗಿ, ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಪ್ರಯುಕ್ತ 2026 ಜುಲೈ 27ರಂದು ನಗರದ ವಿವಿಧ ಭಾಗಗಳಲ್ಲಿ 15 ಲಕ್ಷ ಸ್ಥಳೀಯ ತಳಿ ಸಸಿಗಳನ್ನು ನೆಡುವ ಬೃಹತ್ ಅಭಿಯಾನ ಆಯೋಜಿಸಲಾಗುತ್ತಿದ್ದು, ಈ ಸಂಬಂಧ ಜಿಬಿಎ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಗತ್ಯ ಸಿದ್ಧತೆಗಳ ಪೂರ್ಣಗೊಳಿಸಲು ಸೂಚನೆ:
ಕಾರ್ಯಕ್ರಮಕ್ಕೆ ಅಗತ್ಯವಿರುವ ಸಸಿಗಳು, ಉಪಕರಣಗಳು, ಮಾರ್ಗಸೂಚಿ ಫಲಕಗಳು ಹಾಗೂ ಇತರೆ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿ, ಪ್ರತಿಯೊಂದು ಹಂತದಲ್ಲೂ ಸಮರ್ಪಕ ಮೇಲ್ವಿಚಾರಣೆ ಹಾಗೂ ಪರಿಣಾಮಕಾರಿ ಸಮನ್ವಯ ಇರಬೇಕು ಎಂದು ಅವರು ತಿಳಿಸಿದರು.
ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವ ಕಾರ್ಯ:
ಈ ಅಭಿಯಾನವು ನಗರದ ಹಸಿರು ವಿಸ್ತರಣೆಗೆ ಮಹತ್ವದ ಕೊಡುಗೆ ನೀಡಲಿದ್ದು, ಡಾ. ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಕೆರೆ ದಂಡೆಗಳು, ರಾಜಕಾಲುವೆಗಳ ಇಕ್ಕೆಲಗಳು, ಉದ್ಯಾನವನಗಳು ಹಾಗೂ ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವ ಕಾರ್ಯ ನಡೆಯಲಿದೆ.
ಭಾಗವಹಿಸುವವರಿಗೆ ಪ್ರಮಾಣಪತ್ರ ಮತ್ತು ಗೌರವ:
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅಧಿಕೃತ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು. ಜೊತೆಗೆ “ಹಸಿರು ಬೆಂಗಳೂರು ರೂವಾರಿಗಳು” ಎಂಬ ಗೌರವ ಸಿಗಲಿದೆ. ವಿಶ್ವದಾಖಲೆ ಅಭಿಯಾನದ ಭಾಗವಾಗಿರುವ ಹೆಮ್ಮೆಯ ಅನುಭವವೂ ದೊರೆಯಲಿದೆ. ಅತ್ಯುತ್ತಮ ಕೊಡುಗೆ ನೀಡುವವರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳಿಂದ ಗೌರವಿಸಲಾಗುತ್ತದೆ.
49 ವಲಯಗಳು, 314 ಸ್ಥಳಗಳಲ್ಲಿ ಕಾರ್ಯಾಚರಣೆ:
ಬಿಡಿಎ ಆಯುಕ್ತರಾದ ಮೇಜರ್ ಮಣಿವಣ್ಣನ್ ಪಿ. ಅವರು ಒಟ್ಟು 243 ಎಕರೆ ಪ್ರದೇಶವನ್ನು 49 ವಲಯಗಳಾಗಿ ಹಾಗೂ 314 ಸಸಿ ನೆಡುವ ಸ್ಥಳಗಳಾಗಿ ವಿಭಾಗಿಸಲಾಗಿ, ಪ್ರತಿಯೊಂದು ವಲಯಕ್ಕೂ ಒಬ್ಬ ವಲಯ ಕಮಾಂಡರ್ ಉಪಸ್ಥಿತರಿರುವುದಾಗಿ ತಿಳಿಸಿದರು.
ಸೂಕ್ತ ಸಾರಿಗೆ ವ್ಯವಸ್ಥೆ:
ಕಾರ್ಯಕ್ರಮದ ದಿನ ಸುಗಮ ಸಂಚಾರಕ್ಕಾಗಿ ಮೆಟ್ರೋ ರೈಲುಗಳ ಸಂಚಾರ ಆವೃತ್ತಿಯನ್ನು (frequency) ಹೆಚ್ಚಿಸಲಾಗುವುದು. ಜೊತೆಗೆ ಮೆಟ್ರೋ ನಿಲ್ದಾಣಗಳಿಂದ ಸಸಿ ನೆಡುವ ಸ್ಥಳಗಳವರೆಗೆ ಉಚಿತ ಬಸ್ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ, ಇದರಿಂದ ಭಾಗವಹಿಸುವವರಿಗೆ ಸ್ಥಳಗಳಿಗೆ ತಲುಪುವುದು ಸುಲಭವಾಗಲಿದೆ.
ಸಮಗ್ರ ಸೌಲಭ್ಯಗಳ ವ್ಯವಸ್ಥೆ:
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಆಹಾರ, ಪೋರ್ಟಬಲ್ ಶೌಚಾಲಯಗಳು ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಆರೋಗ್ಯ ತುರ್ತು ಪರಿಸ್ಥಿತಿಗಳಿಗಾಗಿ ವೈದ್ಯರು ಹಾಗೂ ನರ್ಸ್ಗಳು ಉಪಸ್ಥಿತರಿರಲಿದ್ದು, ಸಮರ್ಪಕ ಬೆಳಕು, ವಾಹನ ನಿಲುಗಡೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಮ್ಯಾರಥಾನ್ ಕಾರ್ಯಕ್ರಮಕ್ಕೆ ಆಹ್ವಾನ:
ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಅಂಗವಾಗಿ ಅದೇ ದಿನ (ಜೂನ್ 27) ಬೆಳಿಗ್ಗೆ 6 ಗಂಟೆಗೆ 10K ಹಾಗೂ 5K ಮ್ಯಾರಥಾನ್ ಆಯೋಜಿಸಲಾಗಿದೆ. ಇದು ಎಂಎಆರ್‌ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ನಡೆಯಲಿದೆ.
ಮ್ಯಾರಥಾನ್ ನೋಂದಣಿ:
ಮ್ಯಾರಾಥಾನ್ ನೋಂದಣಿಗಾಗಿ ಲಿಂಕ್ ಬಳಸಿ
Registration link: https://mysamay.in/e/kempegowdarun
ನೋಂದಣಿಗಾಗಿ ವೆಬ್ ಸೈಟ್ ಗೆ ಭೇಟಿ ನೀಡಿ:
ಸಸಿ ನೆಡುವ ಕುರಿತ ಮಾಹಿತಿ ಹಾಗೂ ಸಸಿ ನೆಡಲು ನೋಂದಣಿ ಮಾಡಿಕೊಳ್ಳಲು ವೆಬ್ ಸೈಟ್ ಗೆ ಭೇಟಿ ನೀಡಿ
https://greenbengalurubybda.in/ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.
24×7 ಸಹಾಯವಾಣಿ:
ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಹಾಯಕ್ಕಾಗಿ 24×7 ಸಹಾಯವಾಣಿ ಸಂಖ್ಯೆ 94831 66622 ಕಾರ್ಯನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ರಾಜೇಂದ್ರ ಕೆ.ವಿ., ಬೆಂ.ಘ.ನಿ.ನಿ.ದ ಸಿಇಒ ಕರೀಗೌಡ, ವಿಶೇಷ ಆಯುಕ್ತರಾದ ವೆಂಕಟಾಚಲಪತಿ, ನಗರ ಪಾಲಿಕೆಗಳ ಜಂಟಿ ಆಯುಕ್ತರು, ಬಿಡಿಎ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
