ಬೆಂಗಳೂರು: ಎಂಥಹ ಕಠಿಣ ಸಂದರ್ಭಗಳಲ್ಲಿಯೂ ದೇಶದ ಅಖಂಡತೆ ಮತ್ತು ಐಕ್ಯತೆಗಳನ್ನು ಕಾಪಾಡಿಕೊಂಡಿರುವುದು ನಮ್ಮ ರಾಷ್ಟ್ರದ ಹೆಗ್ಗಳಿಕೆಯಾಗಿದ್ದು, ಇದು ಸಾಧ್ಯವಾಗುವಲ್ಲಿ ಸಂವಿಧಾನದ ಪಾತ್ರವೇ ಪ್ರಧಾನವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ನಾಡೋಜ ಶಿವರಾಜ ವಿ ಪಾಟೀಲ ಹೇಳಿದರು.
ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಅವರು ಸಂಪಾದಿಸಿರುವ ಸಂವಿಧಾನ ನುಡಿ ಸಂಹಿತೆ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಂವಿಧಾನ ರಚನೆಯ ಸಂದರ್ಭದಲ್ಲಿದ್ದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆ, ಅಂದಿನ ಸಾಮಾಜಿಕ ಪರಿಸ್ಥಿತಿ ಮತ್ತು ಜನರ ಆಶೋತ್ತರಗಳ ಸವಾಲುಗಳು ಇಂತಹ ಅನನ್ಯ ಕೃತಿ ರಚನೆಗೆ ಪ್ರೇರೇಪಣೆಯನ್ನು ನೀಡಿದ್ದು, ಇಂದಿಗೂ ನಮ್ಮ ದೇಶವನ್ನು ಸಂವಿಧಾನ ಕೃತಿಯು ಮುನ್ನಡೆಸುತ್ತಿರುವುದು ಅದರ ಸಾಫಲ್ಯವನ್ನು ಅರ್ಥ ಮಾಡಿಸುತ್ತದೆ ಎಂದರು.
ಜಗತ್ತಿನ ಸಂವಿಧಾನಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಸಂವಿಧಾನ ಭಾರತದ್ದಾಗಿದ್ದು, ಇದು ಎಲ್ಲಾ ಕಾಲಕ್ಕೂ, ಎಲ್ಲಾ ಭಾಷೆಗಳ, ಧರ್ಮಗಳ, ಸಂಸ್ಕೃತಿಗಳ ಜನರಿಗೆ ಎಲ್ಲ ರೀತಿಯ ಸಮಾನ ಅವಕಾಶಗಳನ್ನು ನೀಡಿದೆ. ಸಾಂವಿಧಾನಿಕ ಆಶಯಗಳು ಜನ ಸಾಮಾನ್ಯರ ಬದುಕಿನ ಭಾಗವಾಗಬೇಕಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ “ಸಂವಿಧಾನ ನುಡಿ ಸಂಹಿತೆ” ಕೃತಿ ಭಾಷಾ ದೃಷ್ಟಿಕೋನದ ನಿಟ್ಟಿನಲ್ಲಿ ಈ ರೀತಿಯ ಅರಿವು ಮೂಡಿಸುವ ಸಾಮರ್ಥ್ಯ ಹೊಂದಿದೆ ಎಂದ ನ್ಯಾಯಮೂರ್ತಿಗಳು, ಸಾರ್ವಜನಿಕ ಸಂಸ್ಥೆಗಳು ಸಂವಿಧಾನವನ್ನು ಜನರತ್ತ ಕೊಂಡೊಯ್ಯುವಲ್ಲಿ ಹೆಚ್ಚಿನ ಕೆಲಸ ಮಾಡಲು ಈ ಮಾದರಿಯ ವಿಫುಲ ಅವಕಾಶಗಳಿವೆ ಎಂದರು.
ವಿಶೇಷವಾಗಿ ಸಂವಿಧಾನದ ಅವಕಾಶಗಳಡಿಯಲ್ಲಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳ ಮೇಲೆ ಸಂವಿಧಾನವು ಆಧಾರಿತವಾಗಿದ್ದು, ತಮ್ಮ ಕುರ್ಚಿಯ ಮೇಲೆ ಕುಳಿತು ಸಮಾಜದಲ್ಲಿ ಮಹತ್ತರ ಬದಲಾವಣೆಯನ್ನು ಹೊರತರುವ ಸಾಮರ್ಥ್ಯ ಹೊಂದಿರುವ ಸರ್ಕಾರಿ ಅಧಿಕಾರಿಗಳ ನಿರಂತರ ಬದ್ಧತೆ ಮುಖ್ಯವಾಗುತ್ತದೆ. ಸರ್ಕಾರಿ ಅಧಿಕಾರಿಗಳು ಸಂವಿಧಾನವು ನೀಡಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಜನ ಸಾಮಾನ್ಯರ ನ್ಯಾಯದಾನದ ಹಕ್ಕುಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು.
ಭಾರತ ಸಂವಿಧಾನವೆನ್ನುವ ಅನಾವರಣಗೊಳ್ಳದ ಕಥೆ:
ಜನ ಸಾಮಾನ್ಯರು ಮಾತನಾಡುವ ಭಾಷೆಯಲ್ಲಿಯೇ ಸಂವಿಧಾನದ ಬಗೆಗಿನ ಕೃತಿಗಳು ಬಂದರೂ ಅವು ಜನರನ್ನು ತಲುಪುವಲ್ಲಿ ವಿಫಲವಾಗಿವೆ. ಜನರ ಮನಮುಟ್ಟುವ ಭಾಷೆಯಲ್ಲಿ ಅವು ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಎ.ನಾರಾಯಣ ಹೇಳಿದರು.
ಸಂವಿಧಾನ ನುಡಿ ಸಂಹಿತೆ ಕೃತಿ ಕುರಿತು ಮಾತನಾಡಿದ ಅವರು, ಸಂವಿಧಾನವನ್ನು ಸರಳವಾಗಿ ಅರ್ಥೈಸುವ ನುಡಿಗಟ್ಟುಗಳನ್ನು ಹೊಂದಿರುವ ಇಂತಹ ಪ್ರಯತ್ನಗಳು ಭಾರತ ಸಂವಿಧಾನವೆನ್ನುವ ಅನಾವರಣಗೊಳ್ಳದ ಕಥೆಯನ್ನು ಜನಸಾಮಾನ್ಯರೆಡೆಗೆ ತಲುಪಿಸುವ ಮೂಲಕ ಅವರ ಮನಮುಟ್ಟುವಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದರು.
ಸಂವಿಧಾನವು ಕೂಡ ಕಥಾ ರೂಪದಲ್ಲಿ ಜನರನ್ನು ತಲುಪಬೇಕಾದ ಅವಶ್ಯಕತೆ ಇದ್ದು, ಈಗ ನಾವು ಮೌಲ್ಯಗಳಿಗಾಗಿ ಎದುರು ನೋಡಬೇಕಾಗಿರುವುದು ಪುರಾಣಗಳನ್ನಲ್ಲ ಎಂದ ಪ್ರೊ. ನಾರಾಯಣ, ನಮ್ಮ ಸ್ವಾತಂತ್ರ್ಯ ಸಂಗ್ರಾಮವನ್ನು ಮತ್ತು ನಮ್ಮ ಸಂವಿಧಾನವನ್ನು ನಾವು ಇನ್ನಷ್ಟು ಮೌಲ್ಯಾಧಾರಿತವಾಗಿ ಗ್ರಹಿಸಬೇಕಾದ ಅವಶ್ಯಕತೆ ಇದೆ ಎಂದರು. ಇದಕ್ಕೆ ನಮ್ಮ ಆಲೋಚನೆಗಳಲ್ಲಿ ಒಂದು ಬಗೆಯ ಅಮೂಲಾಗ್ರ ಪರಿವರ್ತನೆಯ ಅವಶ್ಯಕತೆ ಇದೆ ಎಂದ ಅವರು, ಸಮಾಜವು ಮುಕ್ತ ಮನಸ್ಸಿನಿಂದ ಈ ಬದಲಾವಣೆಯನ್ನು ಆಹ್ವಾನಿಸಬೇಕಿದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಅವರು ಸಂಪಾದಿಸಿರುವ ಸಂವಿಧಾನ ನುಡಿ ಸಂಹಿತೆ ಕೃತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಭಾಷಾ ಪರ ಆಶಯಗಳಿಗೆ ಮಹತ್ವದ ಸೇರ್ಪಡೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಜೆ.ಮಂಜುನಾಥ್, ಇಲಾಖೆಯ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ಡಾ. ರವಿಕುಮಾರ್ ನೀಹ ಹಾಗೂ ಟಿ. ತಿಮ್ಮೇಶ್ ಹಾಜರಿದ್ದರು.
