ಸಮಗ್ರ ಸುದ್ದಿ

ಜಲಮಂಡಳಿ ನೌಕರರ ವಿಶೇಷ ಸ್ಥಳೀಯ ಭತ್ಯೆ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ

Share

ಬೆಂಗಳೂರು : ಬೆಂಗಳೂರು ನಗರದ ಹೊರವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೆಂಗಳೂರು ಜಲಮಂಡಳಿ (BWSSB) ನೌಕರರ ವಿಶೇಷ ಸ್ಥಳೀಯ ಭತ್ಯೆ (Special Local Allowance) ಪರಿಷ್ಕರಣೆ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ ಭರವಸೆ ನೀಡಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಹಾಗೂ The Bangalore Water Supply and Sewerage Board Sanitary Workers Union ವತಿಯಿಂದ ಜಲಮಂಡಳಿ ಕಚೇರಿಯಲ್ಲಿ ಆಯೋಜಿಸಿದ್ದ ವೇತನ ಪರಿಷ್ಕರಣೆ ಒಪ್ಪಂದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2023ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಲಮಂಡಳಿ ನೌಕರರ ವೇತನ ಪರಿಷ್ಕರಣೆ ಜಾರಿಯಾಗಿರುವುದು ಸಂತಸದ ವಿಷಯವಾಗಿದೆ. ನೌಕರರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ಮಹತ್ವದ ನಿರ್ಧಾರಕ್ಕೆ ಸಹಕರಿಸಿದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಸಂಬಳ ಹೆಚ್ಚಳದೊಂದಿಗೆ ನೌಕರರ ಜವಾಬ್ದಾರಿಯೂ ಹೆಚ್ಚಾಗುತ್ತದೆ. ದೇಶದ ಅತ್ಯುತ್ತಮ ನೀರು ಸರಬರಾಜು ಸಂಸ್ಥೆಗಳಲ್ಲಿ ಒಂದಾದ ಜಲಮಂಡಳಿಯ ಪ್ರತಿಷ್ಠೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ನೌಕರರ ಮೇಲಿದೆ ಎಂದು ಅವರು ಹೇಳಿದರು.

ನೌಕರರ ಪರಿಶ್ರಮ ಮತ್ತು ಬದ್ಧತೆಯಿಂದ ಜಲಮಂಡಳಿ ಇಂದು ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸಿದೆ. ಇದೇ ಸಮರ್ಪಣಾ ಮನೋಭಾವದೊಂದಿಗೆ, ಸ್ವಂತ ಸಂಸ್ಥೆ ಎಂಬ ಭಾವನೆಯಿಂದ ಸಾರ್ವಜನಿಕ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ನೌಕರರ ಕಲ್ಯಾಣ, ಸೇವಾ ಹಿತಾಸಕ್ತಿ ಮತ್ತು ವೃತ್ತಿಪರ ಬೆಳವಣಿಗೆಗೆ ಜಲಮಂಡಳಿ ಆಡಳಿತ ಸದಾ ಬದ್ಧವಾಗಿದ್ದು, ಅವರ ನ್ಯಾಯಯುತ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಡಾ. ಮಂಜುಳಾ ಭರವಸೆ ನೀಡಿದರು.

ನೌಕರರ ಸಂಘದಿಂದ ಸನ್ಮಾನ

ವೇತನ ಪರಿಷ್ಕರಣೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜಲಮಂಡಳಿ ನೌಕರರ ಸಂಘ ಹಾಗೂ ಸ್ಯಾನಿಟರಿ ವರ್ಕರ್ಸ್ ಯೂನಿಯನ್ ವತಿಯಿಂದ ಅಧ್ಯಕ್ಷೆ ಡಾ. ಎನ್. ಮಂಜುಳ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಲಮಂಡಳಿಯ ನೂತನ ಮುಖ್ಯ ಆಡಳಿತಾಧಿಕಾರಿ ಪ್ರಸನ್ನಕುಮಾರ್, ಆರ್ಥಿಕ ಸಲಹೆಗಾರ ಸುಬ್ಬರಾಮಯ್ಯ, ಪ್ರಧಾನ ಮುಖ್ಯ ಅಭಿಯಂತರ ದಲಾಯತ್, ಸಿಬ್ಬಂದಿ ನಿರ್ವಹಣಾಧಿಕಾರಿ ಎಂ.ಆರ್. ಸಂತೋಷ್, ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.


Share

You cannot copy content of this page