ಸಮಗ್ರ ಸುದ್ದಿ

ಬಿಡದಿ ಟೌನ್‌ ಶಿಪ್‌ ವಿಚಾರದಲ್ಲಿ ಸಕಾರಾತ್ಮಕ ಸಲಹೆಯ ಬದಲಿಗೆ ಕೇಂದ್ರ ಸಚಿವ ಕುಮಾರಸ್ವಾಮಿಯಿಂದ ರಾಜಕೀಯ ಟೀಕೆ – ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ | ನಮ್ಮ ಸರ್ಕಾರಕ್ಕೆ ರೈತರ ಒಕ್ಕಲೆಬ್ಬಿಸುವ ಯೋಚನೆ ಇಲ್ಲ

Share

ಬೆಂಗಳೂರು: ಬಿಡದಿ ಟೌನ್‌ ಶಿಪ್‌ ವಿಚಾರದಲ್ಲಿ ಸಕಾರಾತ್ಮಕ ಸಲಹೆಯ ಬದಲಿಗೆ ಕೇಂದ್ರ ಸಚಿವ ಕುಮಾರಸ್ವಾಮಿಯಿಂದ ರಾಜಕೀಯ ಟೀಕೆ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರಕ್ಕೆ ರೈತರನ್ನು ಒಕ್ಕಲೆಬ್ಬಿಸುವ ಯೋಚನೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಮಾಜಿ ಸಚಿವರಾದ ಹೆಚ್.‌ಕೆ.ಪಾಟೀಲ್‌ ಅವರ ನಿವಾಸದ ಬಳಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್‌ ಅವರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ರೈತರ ಅಹವಾಲುಗಳನ್ನು ಆಲಿಸಿ, ಸಮಾಧಾನ ಪಡಿಸಲು, ಸಂಧಾನದ ಮೂಲಕ ಯೋಜನೆಯನ್ನು ಜಾರಿ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಹೆಚ್.‌ಕೆ.ಪಾಟೀಲರ ಮನೆಗೆ ಭೇಟಿ ನೀಡಿದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌ ಅವರು, 10 ದಿವಸಗಳಿಂದ ನನ್ನ ಆರೋಗ್ಯ ಸರಿಯಿರಲಿಲ್ಲ. ಅವರು ನನ್ನನ್ನು ನೋಡಲು ಬರುತ್ತೇನೆ ಎಂದು ಹೇಳಿದ್ದರು. ಇಂದು ನಾನೇ ಹೊರಗಡೆ ಬಂದಿದ್ದೆ. ಹೀಗಾಗಿ ನಾನೇ ನಿಮ್ಮನ್ನು ಭೇಟಿ ಮಾಡಲು ಬರುತ್ತೇನೆ ಎಂದು ತಿಳಿಸಿದ್ದೆ. ಸ್ವಾಭಾವಿಕವಾಗಿ, ಔಪಚಾರಿಕವಾಗಿ ಮಾತಾನಾಡಿದ್ದೇವೆ. ಮುಂದೆ ಭವಿಷ್ಯದಲ್ಲಿ ನಾವು ಯಾವ ರೀತಿಯಾಗಿ ಸಂಘಟನೆ ಮಾಡಬೇಕು ಮತ್ತು ಸರ್ಕಾರವನ್ನು ಜನಹಿತವಾಗಿ ನಡೆಸುವುದರಲ್ಲಿ ಏನೇನು ಮಾಡಬೇಕು ಎಂಬುದಾಗಿ ಚರ್ಚೆಯನ್ನು ಮಾಡಿದ್ದೇವೆ ಎಂದರು.

ಇದು ಸಮಾನ ಮನಸ್ಕರ ಭೇಟಿಯೇ ಎಂಬ ಪ್ರಶ್ನೆಗೆ, ನಾವು ಯಾವತ್ತೂ ಅಸಮಾನ ಮನಸ್ಕರಾಗಿಲ್ಲ. ನಾನು ಹೆಚ್.ಕೆ ಪಾಟೀಲ್ ಒಟ್ಟಿಗೆ ಮೊಯ್ಲಿಯವರ ಮಂತ್ರಿ ಮಂಡಲದಲ್ಲಿ ಒಟ್ಟಿಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದೆವು. ಅಂದಿನಿಂದ ಇಂದಿನವರೆಗೂ ನಮ್ಮಿಬ್ಬರ ಸ್ನೇಹ ಅಪಾರವಾದದ್ದು. ಅದಕ್ಕೂ ಮೊದಲು ಕೆ. ಎಚ್. ಪಾಟೀಲ್ ಇದ್ದರು. ನಾನು ಮೊದಲ ಬಾರಿ ಎಂಎಲ್‌ಎ ಆದಾಗ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೆಲ್ಲಾ ಸಚಿವ ಸಂಪುಟದಲ್ಲಿದ್ದರು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆಗ ನಾವೆಲ್ಲ ಚಿಕ್ಕವರು. ನಮ್ಮನ್ನು ಏಕವಚನದಲ್ಲೇ ಮಾತನಾಡಿಸುತ್ತಿದ್ದರು. ನಮಗೆ ಅಲ್ಲಿಂದ ಸಂಬಂಧ ಬಂದಿದೆ. ಹಾಗಾಗಿ ಈ ಸಂಬಂಧ ಕೊನೆಯವರೆಗೂ ಉಳಿದುಕೊಂಡು ಹೋಗುತ್ತೆ ಎನ್ನುವ ವಿಶ್ವಾಸ ಇದೆ ಎಂದರು.

ಸಚಿವ ಸ್ಥಾನದ ಬಗ್ಗೆ ಈ ಹಿಂದೆ ಹೆಚ್.‌ಕೆ.ಪಾಟೀಲರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸುತ್ತಾ, ಪಾಟೀಲ್ ಅವರು ಯಾವತ್ತೂ ನನಗೆ ಮಂತ್ರಿಮಂಡಲದಲ್ಲಿ ನನ್ನನ್ನು ಮಂತ್ರಿ ಮಾಡಿ ಎಂದು ಕೇಳಿದವರಲ್ಲ. ಅವರು ತಮ್ಮ ತಂದೆಯವರನ್ನು ನೋಡಿ ಹಾಗೂ ಆ ಭಾಗದ ಜನರನ್ನು ನೋಡಿ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದಾರೆ. ರಾಜಕೀಯವಾಗಿ ನಮ್ಮ ಸರ್ಕಾರಕ್ಕೆ ಬಹಳ ಸಂದರ್ಭದಲ್ಲಿ ಇದರಿಂದ ಸಹಾಯವಾಗಿದೆ.

ಬಿಡಿದಿ ಟೌನ್‌ ಶಿಪ್‌ ವಿಚಾರದಲ್ಲಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬರೆದಿರುವ ಪತ್ರದ ಸಂಬಂಧ ಉತ್ತರಿಸಿದ ಅವರು, ಸಿಎಂ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ, 26ರಂದು ಬೆಳಿಗ್ಗೆ 11 ಗಂಟೆಗೆ ನಮ್ಮ ಸಚಿವರು ಮತ್ತು ಅಧಿಕಾರಿಗಳೆಲ್ಲ ವಿಧಾನಸೌಧದಲ್ಲಿ ಇರುತ್ತೇವೆ, ನಿಮಗೆ ಯಾರೆಲ್ಲ ಅಧಿಕಾರಿಗಳೆಲ್ಲರ ಸಹಕಾರಬೇಕು ಅವರ ಜೊತೆ ಬನ್ನಿ, ಸಾಧಕ – ಬಾಧಕಗಳನ್ನು ಚರ್ಚೆ ಮಾಡೋಣ ಎಂದು ಕರೆದಿದ್ದಾರೆ. ಆ ಪತ್ರವನ್ನು ನಾನು ಸಹ ನೋಡಿದ್ದೀನಿ. ಅದಕ್ಕೆ ಅವರು ಪ್ರತಿಯಾಗಿ ಉತ್ತರ ಕೊಟ್ಟಿದ್ದಾರೆ. ನೀವು ಬಿಡದಿಗೆ ಬನ್ನಿ, ಅಲ್ಲಿನ ರೈತರನ್ನು, ಸಂಬಂಧಪಟ್ಟವನ್ನು ಕರೀತೀವಿ, ಅಲ್ಲೇ ಚರ್ಚೆ ಮಾಡೋಣ ಎಂದು ಕರೆದಿದ್ದಾರೆ. ಆದರೆ 26ಕ್ಕೆ ಬೇಡ, ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ, 27ಕ್ಕೆ ಬನ್ನಿ ಎಂದು ಕುಮಾರಸ್ವಾಮಿ ಅವರು ಕರೆದಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಏನು ತೀರ್ಮಾನ ತಗೋತಾರೆ ಎಂಬುದನ್ನು ನೋಡಬೇಕು.

ಬಿಡದಿ ಟೌನ್‌ ಶಿಪ್‌ ಯೋಜನೆ ಬಗ್ಗೆ ಕ್ಯಾಬಿನೆಟ್‌ ನಲ್ಲಿ ಚರ್ಚೆ ಮಾಡುವ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಈಗಾಗಲೇ ಸಂಪುಟದಲ್ಲಿ ಚರ್ಚೆ ಆಗಿದೆ, ಬಿಡಿಎ, ಹಡ್ಕೊ ಇವುಗಳಿಂದ ಯಾವ ರೀತಿ ಅನುದಾನ ಒದಗಿಸಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚೆ ಆಗಿದೆ. ಆದರೆ ಈ ಯೋಜನೆ ಈಗ ರಾಜಿಕೀಯ ತಿರುವು ಪಡೆಯುತ್ತಿರುವುದರಿಂದ ಇದನ್ನು ರಾಜಕೀಯದಿಂದ ದೂರ ಇಟ್ಟು ಯಾವ ರೀತಿ ಯೋಜನೆಯನ್ನು ಜಾರಿ ಮಾಡಬೇಕು ಎನ್ನುವ ಬಗ್ಗೆ ಸರ್ಕಾರ, ಮುಖ್ಯಮಂತ್ರಿಗಳು ಎಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ.

ಕುಮಾರಸ್ವಾಮಿ ಅವರು ಕಾಂಗ್ರೆಸ್‌ ನಾಯಕರ ಹಳೆಯ ಹೇಳಿಕೆಗಳನ್ನು ತೋರಿಸಿ, ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ಬಿಟ್ಟು ಬಂದು ಅವರು ಸಲಹೆ ನೀಡಲಿ. ಆಗ ನಾವು ಸಹ ಅವರ ಅನುಮಾನಗಳಿಗೆ, ಆರೋಪಗಳಿಗೆ ಸೂಕ್ತ ಉತ್ತರ ನೀಡುತ್ತೇವೆ. ಈ ತೀರ್ಮಾನ ಕೈಗೊಳ್ಳಲು ಕಾರಣವೇನು ಎಂಬುದನ್ನು ಸರ್ಕಾರ ಕೊಡಲು ಸಿದ್ಧವಿದೆ. ಆದರೆ ಕುಮಾರಸ್ವಾಮಿ ಅವರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರೆ ರಾಜಕೀಯ ಕಾರಣಕ್ಕಾಗಿ ಮಾಡುತ್ತೀರಿ ಎಂಬುದನ್ನು ತೋರಿಸುತ್ತದೆ.

ರೈತರನ್ನು ಒಕ್ಕಲೆಬ್ಬಿಸುವುದು ಬೇಡ ಎನ್ನುವುದು ನಮ್ಮ ಉದ್ದೇಶವೂ ಆಗಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಪೂರ್ಣ ಒಪ್ಪಿಗೆಯ ಮೇಲೆ ಯೋಜನೆಯನ್ನು ಮಾಡಬೇಕು ಎಂದು ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ರೈತರು ನಮ್ಮದು ಒಣ ಭೂಮಿ ಇದೆ, ಇದರಿಂದ ನಮಗೆ ಅನುಕೂಲ ಇಲ್ಲ, ಈ ಭೂಮಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ನಮಗೆ ಹೆಚ್ಚು ಹಣ ಕೊಡಿ ಎಂದು ಕೇಳುತ್ತಾರೆ, ನಾವು ಅಂಥವರಿಗೆ ಅವರ ಬೇಡಿಕೆಯನ್ನು ನೋಡಿ ಸಮಾಧಾನಕರ ಪರಿಹಾರದ ಹಣ ನೀಡಿದರೆ ಅವರು ಬೇರೆ ಕಡೆ ಜಮೀನು ತೆಗೆದುಕೊಳ್ಳುತ್ತಾರೆ. ಅವರು ಕೃಷಿಯಲ್ಲಿ ಮುಂದುವರೆಯುತ್ತಾರೆ. ನಾವು ಈ ದೃಷ್ಟಿಕೋನದಲ್ಲಿ ಮುಂದುವರೆಯುತ್ತಿದ್ದೇವೆ ಆದರೆ ಅವರು ರಾಜಕೀಯ ಮಾಡಲು ಹೊರಟರೆ ಕಷ್ಟ.

ಬಿಜೆಪಿ ಶಾಸಕರ ಅಡ್ಡ ಮತದಾನ ಸಂಬಂಧ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡುವ ಬಗ್ಗೆ ಬಿಜೆಪಿ ಅಧ್ಯಕ್ಷರ ಮಾತಿಗೆ ಸಂಬಂಧಿಸಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಈ ವಿಚಾರವನ್ನು ಮಂಜುನಾಥ ಸ್ವಾಮಿಗೆ ಬಿಟ್ಟುಬಿಡೋಣ ಎಂದರು.

ತಹಶೀಲ್ದಾರರ ಬಡ್ತಿಯ ಜೊತೆಗೆ ಇನ್ನು ಯಾವೆಲ್ಲಾ ಕೆಲಸ ಕಾರ್ಯಗಳು ಬಾಕಿ ಇವೆ ಎಂಬ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮುಂದಿನ ಎರಡು ದಿನಗಳ ಒಳಗೆ ಒಂದು ಪತ್ರಿಕಾಗೋಷ್ಠಿಯನ್ನು ಮಾಡಲಿದ್ದೇನೆ. ಸುಮಾರು ವಿಷಯಗಳನ್ನು ನಾನು ರಾಜ್ಯದ ಜನರಿಗೆ ತಿಳಿಸಬೇಕಿದೆ. ಹಿಂದಿನ ಸಚಿವರಾದ ಕೃಷ್ಣ ಬೈರೇಗೌಡರು ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ಹೊಸ ಆವಿಷ್ಕಾರಗಳನ್ನು ಸಹ ಮಾಡುವ ಕಡೆ ಯೋಚನೆ ಮಾಡಬೇಕು. ಅದನ್ನು ಸಹ ಮಾಡಲಾಗುವುದು.

ತಮ್ಮ ಆರೋಗ್ಯದ ಬಗ್ಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು, ಈಗ ಆರೋಗ್ಯ ಶೇ.90 ರಷ್ಟು ಸುಧಾರಣೆಯಾಗಿದೆ. ನಿಮ್ಮ ಸಹಕಾರ – ಪ್ರೀತಿಯಿಂದ ಇನ್ನು ಸ್ವಲ್ಪ ಸಮಯದಲ್ಲಿ ಪೂರ್ಣ ಗುಣಮುಖನಾಗುತ್ತೇನೆ ಎಂದರು.


Share

You cannot copy content of this page