ಬೆಂಗಳೂರು:ಯಲಚೇನಹಳ್ಳಿ ಪ್ರದೇಶದಲ್ಲಿ ಕಸದ ಸಮಸ್ಯೆ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ, ಸಂಜೆ ವೇಳೆಯಲ್ಲೂ ಆಟೋ ಟಿಪ್ಪರ್‌ಗಳನ್ನು ಕಳುಹಿಸಿ ಕಸ ಸಂಗ್ರಹಣೆ ನಡೆಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಯಲಚೇನಹಳ್ಳಿ ಪ್ರದೇಶದಲ್ಲಿ ಈಗಾಗಲೇ ಸಂಜೆ ವೇಳೆಯಲ್ಲೂ ಕಸ ಸಂಗ್ರಹಣೆಗೆ ಆಟೋಗಳನ್ನು ನಿಯೋಜಿಸಲಾಗಿದೆ. ಆದಾಗ್ಯೂ, ಕಸದ ಸಮಸ್ಯೆ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ, ಅಗತ್ಯವಿರುವ ಕಡೆ ಹೆಚ್ಚುವರಿ ಆಟೋ ಟಿಪ್ಪರ್‌ಗಳನ್ನು ನಿಯೋಜಿಸುವಂತೆ ಸೂಚಿಸಿದರು.
ಯಲಚೇನಹಳ್ಳಿ ಕೆರೆ ಸಮೀಪದ ಕಸ ವರ್ಗಾವಣೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಪಾಡಬೇಕು. ರಸ್ತೆ ಬದಿಯಲ್ಲಿ ಕಸ ಬಿಸಾಡುವುದನ್ನು ಪರಿಣಾಮಕಾರಿಯಾಗಿ ತಡೆಯಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ನಾಗರಿಕರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ, ಕಸದ ಸಮಸ್ಯೆ ಉಂಟಾಗುವ ಪ್ರದೇಶಗಳು ಅಥವಾ ಆಟೋ ಟಿಪ್ಪರ್‌ಗಳು ಸಮಯಕ್ಕೆ ಬಾರದಿರುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಪಾಲಿಕೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ ಎಂದು ತಿಳಿಸಿದರು.
ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಪಾಲಿಕೆಯೊಂದಿಗೆ ಸ್ಥಳೀಯ ನಾಗರಿಕರು ಕೈಜೋಡಿಸಿದರೆ ಮಾತ್ರ ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಲು ಸಾಧ್ಯ ಎಂದು ಅವರು ಮನವಿ ಮಾಡಿದರು.
ನಾಗರಿಕರಲ್ಲಿ ಜಾಗೃತಿ ಮೂಡಿಸಿ:
ಕಸದ ಸಮಸ್ಯೆ ನಿವಾರಣೆಗಾಗಿ ನಿಯೋಜಿಸಲಾದ ಸ್ವಯಂಸೇವಕರು ರಸ್ತೆ ಬದಿಯಲ್ಲಿ ಕಸ ಬಿಸಾಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಯಾರಾದರೂ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವುದು ಕಂಡುಬಂದರೆ ತಕ್ಷಣ ಪಾಲಿಕೆ ಸಿಬ್ಬಂದಿಗೆ ಮಾಹಿತಿ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಿ:
ಯಲಚೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಕಸದ ಸಮಸ್ಯೆ ನಿವಾರಣೆಗೆ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣ ಅಗತ್ಯವಾಗಿದೆ. ಇದಕ್ಕಾಗಿ ಸೂಕ್ತ ಖಾಲಿ ಜಾಗವನ್ನು ಗುರುತಿಸಿ, ತ್ವರಿತಗತಿಯಲ್ಲಿ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಲಾಗಿದೆ:
ರಘುವನಹಳ್ಳಿಯ ಕೆ.ಎಸ್.ಐ.ಟಿ. ಕಾಲೇಜು ಸಮೀಪದ 80 ಅಡಿ ಅಗಲದ 4.5 ಕಿ.ಮೀ. ರಸ್ತೆಗೆ ಎಸ್.ಐ.ಪಿ(SIP) ಅನುದಾನದಡಿ ಡಾಂಬರೀಕರಣ ಹಾಗೂ ರಸ್ತೆ ಮಾರ್ಕಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಈ ರಸ್ತೆಯ ಪಾದಚಾರಿ ಮಾರ್ಗವನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ:
ಈಜೀಪುರ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಕಾಮಗಾರಿಯನ್ನು ವೇಗಗೊಳಿಸುವಂತೆ ಸೂಚಿಸಿದರು. ಪೋರ್ಟಲ್ ಫ್ರೇಮ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತಿದಿನ ಕನಿಷ್ಠ 40 ಸಿಬ್ಬಂದಿಯನ್ನು ನಿಯೋಜಿಸಿ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ, ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಸಿಒಒ ರಮಾಮಣಿ, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ರಾಜೇಶ್, ಡಾ. ರಾಘವೇಂದ್ರ ಪ್ರಸಾದ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
