ಸಮಗ್ರ ಸುದ್ದಿ

ರಿಯಲ್ ಎಸ್ಟೇಟ್, ಗಣಿಗಾರಿಕೆ ರಾಜಕಾರಣದ ಭಾಗವಲ್ಲ: ಛಲವಾದಿ ನಾರಾಯಣಸ್ವಾಮಿ

Share

ಬೆಂಗಳೂರು: ದುರಂತ ನಡೆದ ಕ್ರಷರ್ ಕ್ವಾರಿ ಯಾರದೇ ಆದರೂ ಕ್ರಮ ಜರುಗಿಸಬೇಕು ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದ ಕ್ರಷರ್ ಕ್ವಾರಿ ದುರಂತದಲ್ಲಿ ಗಾಯಗೊಂಡು ಕೆಂಗೇರಿಯ ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರನ್ನು ಇಂದು ಭೇಟಿ ಮಾಡಿದ ಅವರು ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ರಾಜಕಾರಣ ಮಾಡುವುದು ಗಣಿಗಾರಿಕೆಗಾಗಿ ಅಲ್ಲ; ರಿಯಲ್ ಎಸ್ಟೇಟ್, ಗಣಿಗಾರಿಕೆ ರಾಜಕಾರಣದ ಭಾಗವಲ್ಲ ಎಂದು ಅವರು ನುಡಿದರು. ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವುದು ರಾಜಕಾರಣದ ಭಾಗ ಎಂದು ತಿಳಿಸಿದರು.

ವಿವಿಧ ಗಲಭೆ ಪ್ರಕರಣದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯುವ ಸರಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. ಅವತ್ತಿನ ದಿನ ಏನೇನು ಘಟನೆಗಳು ನಡೆದಿವೆ ಎಂಬುದು ಪೊಲೀಸರ ವರದಿಯಲ್ಲಿದೆ ಎಂದು ನುಡಿದರು.

ಪೊಲೀಸರ ಮೇಲೆ ಹಲ್ಲೆ ಆಗಿದೆ. ಪೊಲೀಸರ ವಾಹನಗಳು ಜಖಂ ಆಗಿದೆ. ಅಲ್ಲಿ ತಳವಾರು, ಕತ್ತಿ ಜಳಪಿಸಿದ್ದನ್ನು ನೋಡಿದ್ದೇವೆ. ಇವೆಲ್ಲವೂ ವರದಿಯಲ್ಲಿದ್ದರೂ ಈ ಸರಕಾರ ಓಟ್ ಬ್ಯಾಂಕಿನ ಓಲೈಕೆಗಾಗಿ ಮಾಡುವ ತಪ್ಪುಗಳು ಸಮಾಜಘಾತುಕ ಶಕ್ತಿಗಳಿಗೆ ಪ್ರೇರೇಪಣೆ ಆಗುತ್ತಿವೆ ಎಂದು ಟೀಕಿಸಿದರು. ಇಂಥವುಗಳನ್ನು ವಾಪಸ್ ತೆಗೆಯಬಾರದೆಂದು ನಮ್ಮ ಹೋರಾಟ ನಡೆದಿತ್ತು. ಅದಕ್ಕೆ ಸರಿಯಾಗಿ ಇವತ್ತು ಕೋರ್ಟಿನಲ್ಲೂ ಅವರಿಗೆ ಮೋಕ್ಷ ಆಗಿದೆ ಎಂದರು.

ಹೇಳೋದು ಸಂವಿಧಾನ- ತಿನ್ನೋದು ಬದನೆಕಾಯಿ ಅಲ್ಲವೇ ಎಂದು ಟೀಕಿಸಿದರು. ಆನೆ ಹೋಗಿದ್ದೇ ದಾರಿ ಎಂಬಂತೆ ನಡೆದುಕೊಂಡರೆ ನಿಮಗೆ ಬುದ್ಧಿ ಹೇಳಲು ಕೋರ್ಟ್ ಇದೆ. ಜನರೂ ಇದ್ದಾರೆ ಎಂದು ತಿಳಿಸಿದರು.


Share

You cannot copy content of this page