ಬೆಂಗಳೂರು: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು ನಾಳೆಗೆ ಒಂದು ತಿಂಗಳು ತುಂಬಲಿದೆ. ಈ ಕೇವಲ 30 ದಿನಗಳ ಅಲ್ಪಾವಧಿಯಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ಸಿಎಂ, ರಾಜ್ಯದ ಜನತೆ, ವಿದ್ಯಾರ್ಥಿಗಳು, ರೈತರು ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹತ್ತಾರು ಜನಪರ ಮತ್ತು ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ.
ಆಡಳಿತದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಮುಖ್ಯಮಂತ್ರಿಗಳ ಮೊದಲ 30 ದಿನಗಳ ಪ್ರಮುಖ ಸಾಧನೆಗಳು ಮತ್ತು ನಿರ್ಧಾರಗಳ ಸಂಪೂರ್ಣ ವಿವರ ಇಲ್ಲಿದೆ.
ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಬಂಪರ್ ಕೊಡುಗೆ
ಉಚಿತ ಬಸ್ ಪಾಸ್: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ದೊಡ್ಡ ನೆರವು ನೀಡಿದ್ದಾರೆ.
ಭಾರತ ಜೋಡೋ ಯುವಕರ ಸಂಘ: ರಾಜ್ಯದ ಎಲ್ಲಾ ಪಂಚಾಯಿತಿ ಮತ್ತು ವಾರ್ಡ್‌ಗಳಲ್ಲಿ ಸಂಘ ಸ್ಥಾಪಿಸಿ, ತಲಾ 10 ಲಕ್ಷ ರೂ. ನೀಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕಾಲೇಜು ಚುನಾವಣೆ ಆರಂಭ: ಯುವ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದಿಂದಲೇ ಕಾಲೇಜು ಚುನಾವಣೆಗಳನ್ನು ಪುನರಾರಂಭಿಸಲು ಚಿಂತನೆ ನಡೆಸಿದ್ದಾರೆ.
ಮೂಲಸೌಕರ್ಯ ಮತ್ತು ಬೆಂಗಳೂರು ಅಭಿವೃದ್ಧಿಗೆ ಹೊಸ ರೂಪ
‘ಬಿ’ ಯಿಂದ ‘ಎ’ ಖಾತಾ ಪರಿವರ್ತನೆ: ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಆಸ್ತಿ ಮಾಲೀಕರ ಸಮಸ್ಯೆಗೆ ಮುಕ್ತಿ ನೀಡಲು ರಾಜ್ಯಾದ್ಯಂತ ‘ಬಿ’ ಖಾತೆಯನ್ನು ‘ಎ’ ಖಾತೆಯಾಗಿ ಪರಿವರ್ತಿಸಲು ಹಸಿರು ನಿಶಾನೆ ನೀಡಿದ್ದಾರೆ.
ಗುಂಡಿಮುಕ್ತ ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಬರೋಬ್ಬರಿ 2,000 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಹೆಬ್ಬಾಳ ಬಳಿ ಸಣ್ಣ ಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ವಿದ್ಯುತ್ ಸಂಪರ್ಕಕ್ಕೆ ಒಸಿ ವಿನಾಯಿತಿ: 2500 ಅಡಿವರೆಗಿನ ನೂತನ ವಸತಿ ಕಟ್ಟಡಗಳ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಇದ್ದ ಒಸಿ (Occupancy Certificate) ನಿಯಮ ಸಡಿಲಗೊಳಿಸಲಾಗಿದೆ.
ರೈತರು ಮತ್ತು ಪರಿಸರ ಸಂರಕ್ಷಣೆ
ತುಂಗಭದ್ರಾ ಸ್ಪಿಲ್ ಗೇಟ್ ಮತ್ತು ಒಮ್ಮತದ ತೀರ್ಮಾನ: ನೂತನವಾಗಿ ಅಳವಡಿಸಲಾದ ಸ್ಪಿಲ್ ಗೇಟ್‌ಗಳನ್ನು ಉದ್ಘಾಟಿಸಿದ್ದಲ್ಲದೆ, ಆಂಧ್ರ, ತೆಲಂಗಾಣ ಸಿಎಂಗಳೊಂದಿಗೆ ಒಮ್ಮತದ ಚರ್ಚೆ ನಡೆಸಿ ಜಲ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಂಡಿದ್ದಾರೆ. ಮೇಕೆದಾಟು ಯೋಜನೆಗೂ ವೇಗ ನೀಡಲಾಗಿದೆ.
ರೈತರಿಗೆ ಸಕಾಲದಲ್ಲಿ ನೆರವು: ಮಾವು ಬೆಳೆಗಾರರಿಗೆ ಪ್ರೋತ್ಸಾಹ ಧನ ಮುಂದುವರಿಕೆ, ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಗಿನ್ನೀಸ್ ದಾಖಲೆ: ಕೆಂಪೇಗೌಡ ಜಯಂತಿ ಅಂಗವಾಗಿ ಬಿಡಿಎ ವತಿಯಿಂದ ಬೆಂಗಳೂರಿನಲ್ಲಿ 15 ಲಕ್ಷ ಸಸಿಗಳನ್ನು ನೆಟ್ಟು ಗಿನ್ನೀಸ್ ದಾಖಲೆ ಬರೆಯಲಾಗಿದೆ.
ಕಟ್ಟುನಿಟ್ಟಿನ ಆಡಳಿತ ಮತ್ತು ಭ್ರಷ್ಟಾಚಾರ ನಿಗ್ರಹ
ಜಿಪಿಎಸ್ ಹಾಜರಾತಿ: ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಗೆ ಜಿಪಿಎಸ್ ತಂತ್ರಾಂಶದ ಮೂಲಕ ಸಿಬ್ಬಂದಿ ಹಾಜರಾತಿ ಕಡ್ಡಾಯಗೊಳಿಸಲಾಗಿದೆ.
ನಿಷ್ಠುರ ಆಡಳಿತ: ಶಾಸಕರು, ಮಂತ್ರಿಗಳ ಒತ್ತಡಕ್ಕೆ ಮಣಿಯದೇ ಕೇವಲ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಭ್ರಷ್ಟಾಚಾರ ಮತ್ತು ಮೀಟರ್ ಬಡ್ಡಿ ದಂಧೆಗೆ ಬ್ರೇಕ್: ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಪ್ರತ್ಯೇಕ ಸಹಾಯವಾಣಿ ಹಾಗೂ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ಉದ್ಯೋಗ ಮತ್ತು ಸಾರ್ವಜನಿಕ ಸೇವೆ
72 ಸಾವಿರ ಹುದ್ದೆಗಳ ಭರ್ತಿ: ರಾಜ್ಯದ ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಿ 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ 6 ತಿಂಗಳ ಗಡುವು ವಿಧಿಸಿದ್ದಾರೆ. ಖಾಸಗಿ ವಲಯದಲ್ಲೂ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಗೆ ನಿರ್ಧರಿಸಲಾಗಿದೆ.
’ಪ್ರಜಾಸೇವೆ’ ಸಚಿವಾಲಯ: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಮುಂದಾಗಿದ್ದಾರೆ. ಬಡವರಿಗೆ ನಿವೇಶನ ನೀಡುವ ಬದಲು ನೇರವಾಗಿ ಮನೆ ಕಟ್ಟಿಕೊಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
“2028ರ ವೇಳೆಗೆ ರಾಜ್ಯವನ್ನು ಸಂಪೂರ್ಣವಾಗಿ ‘ನಶೆ ಮುಕ್ತ ಕರ್ನಾಟಕ’ ಮಾಡಲು ಗುರಿ ಹೊಂದಲಾಗಿದ್ದು, ಡ್ರಗ್ಸ್ ಜಾಲದ ಸುಳಿವು ನೀಡಿದವರಿಗೆ ಬಹುಮಾನ ಹಾಗೂ ಅಮಲು ತರಿಸುವ ಪಾನ್ ಮಸಾಲ, ಗುಟ್ಕಾಗಳನ್ನು ನಿಷೇಧಿಸುವ ಕಠಿಣ ಎಚ್ಚರಿಕೆಯನ್ನು ಸಿಎಂ ನೀಡಿದ್ದಾರೆ.”
ಒಟ್ಟಾರೆಯಾಗಿ, ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿಯಾಗಿ ಕಳೆದ 30 ದಿನಗಳ ಆಡಳಿತವು “ವೇಗ, ಪಾರದರ್ಶಕತೆ ಮತ್ತು ಅಭಿವೃದ್ಧಿ” ಎಂಬ ಸೂತ್ರದಡಿ ಸಾಗುತ್ತಿದ್ದು, ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
