ಸಮಗ್ರ ಸುದ್ದಿ

ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ವಿನ್ಯಾಸ ಅಂತಿಮಗೊಳಿಸಲಾಗುವುದು: ಕೃಷ್ಣ ಬೈರೇಗೌಡ

Share

ಬೆಂಗಳೂರು:ಹೊರ ವರ್ತುಲ ರಸ್ತೆ(ORR) ಸಮಗ್ರ ಅಭಿವೃದ್ಧಿ ಯೋಜನೆಯ ವಿನ್ಯಾಸವನ್ನು ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುವುದೆಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ರಸ್ತೆ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂಬಂಧ, ಇಂದು ಲೋರಿ ಜಂಕ್ಷನ್‌ನಿಂದ ಇಬ್ಲೂರು ಜಂಕ್ಷನ್‌ವರೆಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೊರ ವರ್ತುಲ ರಸ್ತೆ ನಗರದ ಅತ್ಯಂತ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಒಂದಾಗಿದ್ದು, ಈ ರಸ್ತೆಯನ್ನು ಸುಮಾರು ₹400–450 ಕೋಟಿ ವೆಚ್ಚದಲ್ಲಿ ಪುನರ್‌ನಿರ್ಮಿಸಿ ಅಭಿವೃದ್ಧಿಪಡಿಸಲು ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಉದ್ದೇಶಿಸಿದ್ದಾರೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೊದಲು ಸಂಚಾರ ದಟ್ಟಣೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವುದು ಅಗತ್ಯವೆಂದು ಹೇಳಿದರು.

ಹೊರ ವರ್ತುಲ ರಸ್ತೆಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳು, ಕಂಪನಿಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಇರುವುದರಿಂದ ಸ್ಥಳೀಯ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ರಸ್ತೆ ವಿನ್ಯಾಸ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿನ್ಯಾಸ ಸಿದ್ಧಪಡಿಸಿದ ನಂತರ ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ವಿನ್ಯಾಸವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಇಂದಿನ ಪರಿಶೀಲನೆಯಿಂದ ರಸ್ತೆಯ ಸಂಪೂರ್ಣ ಸ್ಥಿತಿಗತಿಗಳ ಕುರಿತು ಸ್ಪಷ್ಟ ಚಿತ್ರಣ ದೊರೆತಿದ್ದು, ಅದಕ್ಕೆ ಅನುಗುಣವಾಗಿ ರಸ್ತೆ ವಿನ್ಯಾಸವನ್ನು ಅಂತಿಮಗೊಳಿಸಿ, ಅಗತ್ಯ ಅನುಮೋದನೆಗಳ ನಂತರ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಜಲಮಂಡಳಿ ಅಧ್ಯಕ್ಷರಾದ ಮಂಜುಳಾ, ವಿಶೇಷ ಆಯುಕ್ತರಾದ ನಿತೀಶ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್. ಹಾಗೂ ರಮೇಶ್ ಕೆ.ಎನ್., ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಡಾ. ಬಿ.ಎಸ್. ಪ್ರಹ್ಲಾದ್, ವಿವಿಧ ಹಿತಾಸಕ್ತಿದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page