ಸಮಗ್ರ ಸುದ್ದಿ

ವಾರ್ತಾ ಇಲಾಖೆಗೆ ನವ ತಂತ್ರಜ್ಞಾನ ಅಳವಡಿಸುವ ಚಿಂತನೆ:ಆಯುಕ್ತ ಎಂ.ಎನ್. ಅನುಚೇತ್

Share

ಬೆಂಗಳೂರು:ಸರಕಾರದ ಯೋಜನೆಗಳನ್ನು ಜನ-ಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ನವ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ನವ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಕ್ರಮವಹಿಸಲಾಗುವುದು ಎಂದು ನೂತನ ಆಯುಕ್ತರಾದ ಎಂ.ಎನ್. ಅನುಚೇತ್ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ನೂತನವಾಗಿ ವಾರ್ತಾ ಇಲಾಖೆಯ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ನಂತರ ಇಂದು ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಜಿಲ್ಲಾ ವಾರ್ತಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಂಪ್ರದಾಯಿಕ ಮಾಧ್ಯಮಗಳ ಜತೆಗೆ ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳನ್ನು ಕೂಡ ಬಳಸಿಕೊಂಡು ಸರಕಾರದ ಧ್ಯೇಯೋದ್ದೇಶಗಳನ್ನು ಪ್ರಚುರ ಪಡಿಸುವ  ಕೆಲಸವನ್ನು ಇಲಾಖೆ ಮಾಡಬೇಕಿದೆ ಎಂದು ಹೇಳಿದರು.

ಆಧುನಿಕ ಕಾಲದಲ್ಲಿ ಸಾಮಾಜಿಕ ಜಾಲತಾಣಗಳನ್ನು ಯುವಜನತೆ ಹೆಚ್ಚು ಬಳಸುತ್ತಾರೆ. ಸರ್ಕಾರದ ಧ್ಯೇಯೋದ್ದೇಶಗಳನ್ನು ಅವರಿಗೆ ಹೇಗೆ ತಲುಪಿಸಬಹುದು ಎಂದು ರೂಪುರೇಷೆಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸಬೇಕಿದೆ.

ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿಗಳು ಪತ್ರಿಕೋದ್ಯಮದ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ತಮ್ಮೊಳಗಿನ ಬರಹಗಾರನನ್ನು ಜೀವಂತವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ನೂತನ ಆಯುಕ್ತರು ಸಲಹೆ ನೀಡಿದರು.
 
ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಇಲಾಖೆಗೆ ಒಳ್ಳೆಯ ಹೆಸರು ತರಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಕಳೆದ ಮೂರು ವರ್ಷಗಳ ಕಾಲ ವಾರ್ತಾ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಹೇಮಂತ್ ಎಂ ನಿಂಬಾಳ್ಕರ್ ಅವರು ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಂಡು ಇಲಾಖೆಯ ಕಾರ್ಯವೈಖರಿಯನ್ನು ಉತ್ತಮಗೊಳಿಸಲು ಶ್ರಮಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇಲಾಖೆಯು ಅವರ ನೇತೃತ್ವದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ನಮ್ಮ ಆದ್ಯತೆಯಾಗಿದೆ. ಮುಂದೆ ನಿಂಬಾಳ್ಕರ್ ಅವರು ಇನ್ನು ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಆಶಿಸುತ್ತಾ, ಇಲಾಖೆಯ ಪರವಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ನಿರ್ಗಮಿತ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ಇಲಾಖೆ ವತಿಯಿಂದ ನೀಡಿದ ಬೀಳ್ಕೊಡುಗೆ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ವಾರ್ತಾಧಿಕಾರಿಗಳು ಬಹಳ ಸೃಜನಶೀಲರಾಗಿದ್ದು, ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು, ಅಧಿಕಾರಿಗಳು ಹೆಚ್ಚು ಹೆಚ್ಚಾಗಿ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಲಾಖೆಯಿಂದ ಪ್ರಕಟಗೊಳ್ಳುತ್ತಿರುವ ‘ವಾರ್ತಾ ಜನಪದ’ ಮಾಸಿಕವನ್ನು ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳು ಅತಿ ಹೆಚ್ಚು ಬಳಕೆ ಮಾಡುತ್ತಾರೆ. ಜನಪದಕ್ಕೆ ಬಹಳಷ್ಟು ಓದುಗರಿದ್ದಾರೆ, ರಾಜ್ಯದ  ಬೇರೆ ಯಾವುದೇ ಖಾಸಗಿ ಮಾಸಿಕಗಳಿಗೆ ಸಹ ನಮ್ಮ ವಾರ್ತಾ ಜನಪದ ಮಾಸಪತ್ರಿಕೆಗೆ ಇರುವಷ್ಟು ಪ್ರಸಾರವಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಅಧಿಕಾರಿಗಳು ಬರವಣಿಗೆಯನ್ನು ಹೆಚ್ಚಿಸಿಕೊಳ್ಳಬೇಕು. ಸೃಜನಶೀಲತೆ ಉಳಿಸಿಕೊಳ್ಳುವ ಬಗ್ಗೆ ವಿಚಾರ ಮಾಡಬೇಕು. ಜಾಹೀರಾತುಗಳು ಜನರ ಮನಸ್ಸಿನಲ್ಲಿ ಹೇಗೆ  ಉಳಿಯುವಂತೆ ಮಾಡಬೇಕು, ರಾಜ್ಯದ ಬಹುತೇಕ ಜನ ಓದುವ ಪತ್ರಿಕೆಗಳಲ್ಲಿ ಏನನ್ನು ಕೊಡಬೇಕು ಎನ್ನುವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್, ಸಿ.ಆರ್. ನವೀನ್, ಪಲ್ಲವಿ ಹೊನ್ನಾಪುರ, ಜಿ.ಬಿ ಸಿದ್ದೇಶ್ವರಪ್ಪ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page