ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ಕನ್ನಡ ಭಾಷಾಧ್ಯಯನಕ್ಕೆ ಕಡ್ಡಾಯವಾಗಿ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿರುವ ಬಿಳಿಮಲೆ, ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ವ್ಯಕ್ತಿಯ ಚಿಂತನೆಯನ್ನು ವಿವರಿಸುವ ಮತ್ತು ರೂಪಿಸುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಭಾಷೆಯು ತನ್ನದೆಯಾದ ಒಂದು ಲೋಕದೃಷ್ಟಿಯನ್ನು ಒಳಗೊಂಡಿದ್ದು, ಸಾಮಾಜಿಕ ಮೌಲ್ಯಗಳು ಮತ್ತು ಚಿಂತನೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ವದ ಮಾಧ್ಯಮವಾಗಿದೆ. ಹಾಗಾಗಿ ಉನ್ನತ ಶಿಕ್ಷಣದಲ್ಲಿ ಭಾಷಾ ಬೋಧನೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡುವ ಅವಶ್ಯಕತೆ ಇದೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಕೇಂದ್ರೀತವಾದ ಜಾಗತಿಕರಣವು ತನಗೆ ಬೇಕಾದ ಜಾಹಿರಾತು ಮಾದರಿಯ ಭಾಷೆಯನ್ನು ಸೃಷ್ಟಿಸಿಕೊಂಡಿದ್ದು, ಅದು ದೈನಂದಿನ ವ್ಯವಹಾರಗಳಿಗೆ ಸಾಕಾದರೂ ವ್ಯಕ್ತಿತ್ವ ವಿಕಸನಕ್ಕೆ ಯಾವ ಪ್ರಯೋಜನವನ್ನು ನೀಡುವುದಿಲ್ಲ ಎಂದಿರುವ ಬಿಳಿಮಲೆ, ಇದರ ಪರಿಣಾಮವಾಗಿ ವಿಶ್ವದ ಕುರಿತಾದ ತಾತ್ವಿಕ ಚಿಂತನೆಗಳು ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುವ ಪರಿಸ್ಥಿತಿ ಉದ್ಭವಿಸಿರುವುದು ಕಳವಳಕಾರಿ ಎಂದಿದ್ದಾರೆ.
ವಸಾಹತು ಕಾಲಘಟ್ಟದಲ್ಲಿ ಭಾರತೀಯ ಪರಂಪರೆಯನ್ನು ಪರಿಷ್ಕರಿಸಿ ಒಪ್ಪಿಕೊಳ್ಳಲು ಹೇಳಿದ ರಾಜರಾಮ ಮೋಹನ್ ರಾಯ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು ರಂತಹ ಮಹಾನ್ ಚಿಂತಕರು ಭಾಷಾ ಸಾಹಿತ್ಯ ಮತ್ತು ಚಿಂತನೆಯ ಮೂಲಕ ಭಾರತದ ನವೋದಯವನ್ನು ಕಟ್ಟಿದರು ಎಂಬ ಅಂಶವನ್ನು ಸ್ಮರಿಸಿರುವ ಬಿಳಿಮಲೆ, ವಿಶ್ವದ ಮಹತ್ವದ ಪರಂಪರೆಗಳು ಭಾಷೆ ಮತ್ತು ಅಧ್ಯಯನಗಳ ಮೂಲಕವೇ ರೂಪುಗೊಂಡಿದೆ ಎಂದಿದ್ದಾರೆ.
ಇಂದಿನ ಪರೀಕ್ಷಾ ವ್ಯವಸ್ಥೆಗಳು ವಿಮಾರ್ಶಾತ್ಮಕ ಆಲೋಚನೆಗಳು ಬೆಳೆಯದಂತೆ ಮಾಡಿವೆ ಎನ್ನುವುದು ವಿಷಾದನೀಯ ಸಂಗತಿಯಾಗಿದೆ ಎಂದಿರುವ ಬಿಳಿಮಲೆ, ಕೇವಲ ಮಾಹಿತಿ ಆಧಾರಿತ ಮೌಲ್ಯಮಾಪನಕ್ಕೆ ಅವಕಾಶ ನೀಡದೆ ತಾಂತ್ರಿಕ ಶಿಕ್ಷಣದ ಜೊತೆಗೆ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಅತ್ಯಂತ ಅಗತ್ಯವೆನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಇವುಗಳನ್ನು ಗಮನಿಸಿಕೊಂಡು ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಭಾಷೆ ಮತ್ತು ಸಾಹಿತ್ಯದ ಅಧ್ಯಯನಗಳು ಕಳೆಗುಂದದಂತೆ ನೋಡಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿರುವ ಬಿಳಿಮಲೆ, ಕನ್ನಡ ಅಧ್ಯಾಪಕರಿಗೆ ಗೌರವಯುತವಾದ ಸೇವಾ ಪರಿಸರವನ್ನು ಕಲ್ಪಿಸಿಕೊಡುವುದು ಮತ್ತು ಸರ್ಕಾರದ ಆಶಯವನ್ನು ಅನುಷ್ಠಾನ ಮಾಡದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದು ಸೇರಿದಂತೆ ಎಲ್ಲಾ ಅವಶ್ಯ ಕ್ರಮಗಳಿಗೆ ಸರ್ಕಾರ ಕೂಡಲೇ ಆಲೋಚಿಸಬೇಕೆಂದು ಹೇಳಿದ್ದಾರೆ.
ತಾಂತ್ರಿಕ ಶಿಕ್ಷಣ ನೇಮಕಾತಿಯಲ್ಲಿ ಕನ್ನಡ ಬೋಧಕರ ನೇಮಕಾತಿಯನ್ನೂ ಪರಿಗಣಿಸಿ: ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ದಿನಾಂಕ: 24-06-2026ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಕನ್ನಡ ಭಾಷಾ ಬೋಧಕರ ನೇಮಕಾತಿಗೆ ಅವಕಾಶ ಕಲ್ಪಿಸದೇ ಇರುವುದು ಕನ್ನಡ ವಿರೋಧಿ ಧೋರಣೆಯೆಂದು ಬಿಳಿಮಲೆ ಹೇಳಿದ್ದಾರೆ.
ಈ ಕುರಿತಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸಿನ ಅನ್ವಯ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಬೋಧನೆಗೆ ನಿರ್ದಿಷ್ಟ ಕ್ರಮಗಳನ್ನು ಸರ್ಕಾರವು ಅನುಸರಿಸಿದ್ದು, ಪ್ರಸ್ತುತ ನೇಮಕಾತಿ ಅಧಿಸೂಚನೆ ಈ ಆಶಯಕ್ಕೆ ವಿರುದ್ಧವಾಗಿದೆ ಎನ್ನುವ ಬಲವಾದ ಸಂಶಯವನ್ನು ಮೂಡಿಸುತ್ತದೆ ಎಂದಿದ್ದಾರೆ.
ಇದರಿಂದ ಕನ್ನಡ ಭಾಷೆಯ ಸಾಹಿತ್ಯಿಕ ಮೌಲ್ಯಗಳು ಮತ್ತು ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಸಾಂಸ್ಥಿಕ ಪ್ರಯತ್ನಕ್ಕೆ ಹಿನ್ನಡೆಯುಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಬಿಳಿಮಲೆ, ಕನ್ನಡ ಭಾಷಾ ಪ್ರಾಧ್ಯಾಪಕರ ನೇಮಕಾತಿಗೆ ಕ್ರಮ ವಹಿಸದಿರಲು ಕಾರಣವೇನು? ಎಷ್ಟು ಹುದ್ದೆಗಳು ಖಾಲಿ ಇವೆ? ಎಂಬ ಕುರಿತಂತೆ ತಮಗೆ ಕೂಡಲೇ ಮಾಹಿತಿಯನ್ನು ಒದಗಿಸಬೇಕೆಂದು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
