ಸಮಗ್ರ ಸುದ್ದಿ

ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

Share

​ಬೆಂಗಳೂರು: ನಮ್ಮ ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಐಟಿ ಹಬ್ ವೈಟ್‌ಫೀಲ್ಡ್‌ನಲ್ಲಿ ಒಂದು ಅಪೂರ್ವ ಪ್ರಯೋಗ ಯಶಸ್ವಿಯಾಗಿದೆ. ವೈಟ್‌ಫೀಲ್ಡ್‌ನ ಪಾರ್ಸೆಕ್‌ (ParSEC) ಕೇಂದ್ರದಲ್ಲಿ ‘ಟ್ರಾಫಿಕ್ ಸೇಫ್ಟಿ ಎಕ್ಸ್‌ಪೀರಿಯನ್ಸ್ ಗ್ಯಾಲರಿ’ (ಸಂಚಾರ ಸುರಕ್ಷತಾ ಅನುಭವ ಗ್ಯಾಲರಿ) ಆರಂಭಗೊಂಡಿದ್ದು, “ಸಂಚಾರಿ ನಿಯಮ”ದ ಪೂರ್ಣಪಾಠ ಇಲ್ಲಿ ಸಿಗಲಿದೆ.

​ವೋಲ್ವೋ ಗ್ರೂಪ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಕಮಲ್ ಬಾಲಿ ಅವರು ಈ ವಿನೂತನ ಗ್ಯಾಲರಿಯನ್ನು ಈಚೆಗೆ ಲೋಕಾರ್ಪಣೆ ಮಾಡಿದ್ದಾರೆ. ಈ ಗ್ಯಾಲರಿಯ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಈಗ ಅತ್ಯಂತ ಕುತೂಹಲಕಾರಿ ಹಂತವನ್ನು ತಲುಪಿದೆ.

ಟ್ರಾಫಿಕ್ ನಿರ್ಧಾರಗಳ ಲೈವ್ ಅನುಭವ:

ಇದೊಂದು ಸಂಪೂರ್ಣ ಪ್ರಾಯೋಗಿಕ ಗ್ಯಾಲರಿ ಆಗಿದ್ದು, ಇಲ್ಲಿಗೆ ಭೇಟಿ ನೀಡುವ ನಾಗರಿಕರಿಗೆ ರಸ್ತೆಯ ಮೇಲಿನ ನೈಜ ಟ್ರಾಫಿಕ್ ಪರಿಸ್ಥಿತಿಗಳನ್ನು ಕಣ್ಣಮುಂದೆ ತಂದು ನಿಲ್ಲಿಸಲಾಗುತ್ತದೆ. ದಿನನಿತ್ಯದ ಸಂಚಾರದಲ್ಲಿ ನಾವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಎಂತಹ ಅಪಾಯವನ್ನು ತಂದೊಡ್ಡಬಹುದು ಎಂಬುದನ್ನು ಸುರಕ್ಷಿತ ವಾತಾವರಣದಲ್ಲೇ ಪ್ರಾಯೋಗಿಕವಾಗಿ ಅನುಭವಿಸಿ ತಿಳಿಯಬಹುದು. ಪ್ರತಿಯೊಬ್ಬ ವಾಹನ ಸವಾರನೂ ಜವಾಬ್ದಾರಿಯುತವಾಗಿ ನಡೆದುಕೊಂಡು ‘ಸುರಕ್ಷಿತ ಸಂಚಾರ’ಕ್ಕೆ ಕೈಜೋಡಿಸುವಂತೆ ಮಾಡುವುದು ಈ ಗ್ಯಾಲರಿಯ ಮೂಲ ಉದ್ದೇಶವಾಗಿದೆ.

ಮುಕ್ತಾಯಗೊಂಡ ಸಬ್ಮಿಷನ್; ಅಂತಿಮ ಹಂತದಲ್ಲಿ ಐಡಿಯಾಗಳು:

ನಗರದ ಸಂಚಾರದ ಸಮಸ್ಯೆಗಳಿಗೆ ಸಾರ್ವಜನಿಕರಿಂದ ಪ್ರಾಯೋಗಿಕ ಪರಿಹಾರಗಳನ್ನು ಆಹ್ವಾನಿಸಿದ್ದ ‘ಟ್ರಾಫಿಕ್ ಡಿಸೈನ್ ಚಾಲೆಂಜ್’ಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, ಈಗಾಗಲೇ ಸಬ್ಮಿಷನ್‌ಗಳ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬಂದಿರುವ ನೂರಾರು ಐಡಿಯಾಗಳಲ್ಲಿ ಅತ್ಯುತ್ತಮವಾದ ಆಲೋಚನೆಗಳನ್ನು ಶಾರ್ಟ್‌ ಲಿಸ್ಟ್ ಮಾಡಿ, ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲಾಗಿದೆ.

ಕಲ್ಪನೆಗೆ ಸಿಗಲಿದೆ ಜೀವಂತ ರೂಪ:

ಪ್ರಸ್ತುತ ಆಯ್ಕೆಯಾಗಿರುವ ಫೈನಲಿಸ್ಟ್‌ಗಳು ತಾವಿತ್ತ ಐಡಿಯಾಗಳಿಗೆ ಜೀವಂತ ರೂಪ ನೀಡಲು ಮುಂದಾಗಿದ್ದಾರೆ. ಹೊಸ ಆಲೋಚನೆಗಳಿಗೆ ಪ್ರಾಯೋಗಿಕ ರೂಪ ಕೊಡುವ ಪಾರ್ಸೆಕ್‌ ಕೇಂದ್ರದ ‘ಪಾರ್ಸೆಕ್‌ ಮೇಕರ್ಸ್‌ಅಡ್ಡಾ’ (ParSEC MakersAdda) ಮೂಲಕ ಇವರು ತಮ್ಮ ಆಲೋಚನೆಗಳ ‘ವರ್ಕಿಂಗ್ ಪ್ರೊಟೊಟೈಪ್’ (ಕಾರ್ಯನಿರ್ವಹಿಸುವ ಮಾದರಿ)ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಫೈನಲಿಸ್ಟ್‌ಗಳಿಂದ ಈಗಾಗಲೇ ನೈಜ ಮಾದರಿಗಳನ್ನು (Submissions) ಸ್ವೀಕರಿಸಲಾಗಿದ್ದು, ಶೀಘ್ರದಲ್ಲೇ ಇವುಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು.

ಪರಮ್‌ ಲಿವಿಂಗ್‌ ಲ್ಯಾಬ್‌ನ ಪರಿಕಲ್ಪನೆ:

ಇದರ ಕಲ್ಪನೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ‘ಪರಮ್ ಲಿವಿಂಗ್ ಲ್ಯಾಬ್’ ಮಾಡಿದ್ದರೆ, ಇಡೀ ಯೋಜನೆಗೆ ಆರ್ಥಿಕ ಪ್ರಾಯೋಜಕತ್ವವನ್ನು ‘ವೋಲ್ವೋ ಗ್ರೂಪ್ ಟ್ರಸ್ಟ್’ ನೀಡಿದೆ. ಇನ್ನು ತಾಂತ್ರಿಕ ಸಲಹೆಗಾರರಾಗಿ ‘ಬೆಂಗಳೂರು ಟ್ರಾಫಿಕ್ ಪೊಲೀಸ್’ ಇಲಾಖೆಯು ಕೈಜೋಡಿಸಿದೆ.


Share

You cannot copy content of this page