ಚಿತ್ರದುರ್ಗ : ಉಪ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಇಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಷಯಗಳ ಕುರಿತು ಪರಿಶೀಲನಾ ಸಭೆಯನ್ನು ನಡೆಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲನೆಯದಾಗಿ ನಮ್ಮಲ್ಲಿ ಲಕ್ಷಾಂತರ ಜಾನುವಾರುಗಳಿವೆ. ಇವುಗಳನ್ನು ಹೇಗೆ ನಿಭಾಯಿಸುತ್ತೀರಿ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಮೇವಿನ ಬೀಜದ ಕಿಟ್‌ಗಳನ್ನು ನೀಡಬೇಕು. 48,000 ಸಾವಿರ ಮೇವಿನ ಬೀಜದ ಕಿಟ್‌ಗಳಿಗೆ ಬೇಡಿಕೆ ಇದೆ. ಯಾವುದಕ್ಕೂ ಕಾಯುವುದು ಬೇಡ. ಬೋರ್‌ವೆಲ್ ಇರುವವರಿಗೆ ಬೀಜ ಕೊಟ್ಟರೆ ಮೇವು ಬೆಳೆದು ಕೊಡುತ್ತಾರೆ. ಆದಷ್ಟು ಬೇಗ ಕಿಟ್ ತರಿಸಿಕೊಂಡು, ನೀರಿನ ಲಭ್ಯ ಇರುವಲ್ಲಿ ನೀಡಿ. ಮೇವಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ವಾಣಿವಿಲಾಸ ಜಲಾಶಯದಿಂದ ನೀರು ತರಲು ಪರಿಶೀಲನೆ ನಡೆಸಿ, ಎಷ್ಟು ಹಳ್ಳಿಗೆ ತರಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಳ್ಳಿ. ತುಂಗಾಭದ್ರ ಜಲಾಶಯದಿಂದ ಕುಡಿಯಲು ನೀರು ತಂದರೆ, ಐದು ತಾಲ್ಲೂಕುಗಳಿಗೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಂರಕ್ಷಣೆಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಬೇಡಿ ಎಂದು ಬೆಳಗಾವಿಯಲ್ಲಿ ಸೂಚನೆ ನೀಡಿರುವ ಕುರಿತು ಪ್ರಸ್ತಾವನೆ ಮಾಡಿ, ಕೆರೆಗಳಲ್ಲಿ ನೀರು ಇದ್ದರೆ, ಉಳಿಸಿಕೊಳ್ಳಬೇಕು. ಬೆಳೆಗಳಿಗೆ ಬಳಸಬಾರದು ಎಂದು ತಿಳಿಸಿದರು.
ಬೆಳೆ ವಿಮೆ ಸರ್ಕಾರ ತುಂಬಬಹುದು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಸಹಕಾರ ನೀಡಬೇಕು. ಎಲ್ಲವನ್ನು ರಾಜ್ಯ ಸರ್ಕಾರ ಮಾಡಲು ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎನ್‌ಡಿಆರ್‌ಎಫ್ ಹಣವನ್ನು ಶೀಘ್ರ ಬಿಡುಗಡೆ ಮಾಡಿಸಲು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಸಹಕರಿಸಬೇಕು ಚಿತ್ರದುರ್ಗ ಸಂಸದರಾದ ಗೋವಿಂದ ಕಾರಜೋಳ ಅವರನ್ನು ಒತ್ತಾಯಿಸಿದರು.
ನಮ್ಮಲ್ಲಿ ಇರುವ ಹಣವನ್ನು ಸಂಪೂರ್ಣವಾಗಿ ಬರ ಪರಿಸ್ಥಿತಿ ಎದುರಿಸಲು ಬಳಸುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಪ್ರಶ್ನೆ ಬರುವುದಿಲ್ಲ. ಅಲ್ಲದೇ ಜನ, ಜಾನುವಾರುಗಳನ್ನು ಉಳಿಸಬೇಕಿದೆ. ಟಾಸ್ಕ್‌ಫೋರ್ಸ್ ಸಭೆಯನ್ನು ಪ್ರತಿ ವಾರ ಕರೆದು, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಡಿಸಿ, ಸಿಇಒಗಳಿಗೆ ತಿಳಿಸಬೇಕು. ಎಲ್ಲರೂ ಕಡ್ಡಾಯವಾಗಿ ಸಭೆ ನಡೆಸುವಂತೆ ಟಾಸ್ಕ್‌ಫೋರ್ಸ್‌ನ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗದಲ್ಲಿ ಒಟ್ಟು 201 ಮಳೆ ಮಾಪನ ಕೇಂದ್ರಗಳಿವೆ. ಅದರಲ್ಲಿ 109 ಮಳೆ ಮಾಪನಗಳು ಕೆಲಸ ಮಾಡುತ್ತಿವೆ. ಕೆಟ್ಟಿರುವ ಕೇಂದ್ರಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸಿ ಎಲ್ಲ ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಣೆಯಲ್ಲಿರುವಂತೆ ನೋಡಿಕೊಳ್ಳಲು ಸೂಚಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಬಾಧಿತ ಪ್ರದೇಶ ಪರಿಸರ ಪುನಶ್ಚೇತನದ ಅನುದಾನದಡಿ ₹531 ಕೋಟಿ ಲಭ್ಯವಿದೆ. ರಾಜ್ಯದಲ್ಲಿ ₹32 ಸಾವಿರ ಕೋಟಿ ಇದೆ. ಚಿತ್ರದುರ್ಗ ಜಿಲ್ಲೆಯನ್ನು ಯೂನಿಟ್ ಎಂದು ಪರಿಗಣಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಅನುದಾನವನ್ನು ಬಳಸಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು. ಈ ಬಗ್ಗೆ ಗಣಿಬಾಧಿತ ಪ್ರದೇಶ ಪರಿಸರ ಪುನಶ್ಚೇತನದ ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಬೋರ್‌ವೆಲ್ ಕೊರೆಯುತ್ತಾರೆ, ಪಂಪ್‌ಸೆಟ್ ಕೊಡುವುದಿಲ್ಲ. ಪಂಪ್‌ಸೆಟ್ ನೀಡಿದರೂ ವಿದ್ಯುತ್ ಪೂರೈಕೆ ನೀಡುವುದಿಲ್ಲ. ಇದು ನಡೆಯಬಾರದು. ಇನ್ನು ಮುಂದೆ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸಿದರೆ, 15 ದಿನದ ಒಳಗಾಗಿ ವಿದ್ಯುತ್ ಪೂರೈಕೆ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸೂಚನೆ ನೀಡಿ, ನಿರ್ಲಕ್ಷ್ಯ ವಹಿಸುವ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಅಗತ್ಯ ಬೇಕಿರುವ ಗೊಬ್ಬರವನ್ನು ತರಿಸಿಕೊಳ್ಳಬೇಕು. ಮಳೆ ಬಿದ್ದರೆ, ಏಕಾಏಕಿ ಗೊಬ್ಬರಕ್ಕೆ ಬೇಡಿಕೆ ಬರುತ್ತದೆ. ಈಗಲೇ ಲಭ್ಯತೆ ಇಟ್ಟುಕೊಳ್ಳಬೇಕು. ಗೊಬ್ಬರ ಮಾರಾಟ ಮಾಡಿಕೊಳ್ಳಲು ತೆಗೆದುಕೊಳ್ಳುತ್ತಾರೆ. ಅಂತಹದ್ದು ಆಗಬಾರದು. ಕಲುಷಿತ ನೀರು ಸರಬರಾಜು ಮಾಡುವುದರಿಂದ ಜನರಿಗೆ ಆರೋಗ್ಯ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಜಿಲ್ಲೆಯಲ್ಲಿ ಅಂತಹ ಸಮಸ್ಯೆ ಬರಬಾರದು. ಮುಂಜಾಗ್ರತಾ ಕ್ರಮವಾಗಿ ಪರಿಶೀಲಿಸಬೇಕು. ಜನರಿಗೆ ತೊಂದರೆಯಾದರೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಶೀಘ್ರವೇ ಎನ್‌ಡಿಆರ್‌ಎಫ್ ಹಣ ಬಿಡುಗಡೆ ಮಾಡಿಸಬೇಕು. ಎನ್‌ಡಿಆರ್‌ಎಫ್ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸುವವರೆಗೂ ಕಾಯುವುದು ಬೇಡ. ಬರ ಪರಿಸ್ಥಿತಿಯನ್ನು ಎದುರಿಸುವ ವಿಚಾರದಲ್ಲಿ ಡಿಸಿ, ಸಿಇಗಳಿಗೆ, ನೋಡಲ್ ಅಧಿಕಾರಿಗಳು ಸಹಕಾರ ನೀಡಬೇಕು. ಎಲ್ಲರೂ ಸಮನ್ವಯದಿಂದ ಬರ ಪರಿಸ್ಥಿತಿಯನ್ನು ಎದುರಿಸಬೇಕು. ನಮಗೂ ಮೇಲಾಧಿಕಾರಿಗಳಿಗೂ ಸಂಬಂಧವಿಲ್ಲ ಎಂಬುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ನೀವೆಲ್ಲ ಜವಾಬ್ದಾರಿಯುತ ಅಧಿಕಾರಿಗಳು. ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕಿದೆ. ಇಲ್ಲವಾದರೆ ನೀವೆ ಜವಾಬ್ದಾರರಾಗುತ್ತೀರಿ. ಹಿರಿಯೂರಿನಲ್ಲಿ ಬಿಸಿ ಊಟಕ್ಕೆ ನೀರಿಲ್ಲ ಎನ್ನಲಾಗುತ್ತಿದೆ. ನೀರು ಪೂರೈಕೆ ಮಾಡುವ ಕನಿಷ್ಟ ಪ್ರಜ್ಞೆ ಇರಬೇಕು. ಇದು ಸರಿಯಲ್ಲ ಎಂದು ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.
ಸೂಪರ್ ಎಲ್ ನಿನೋ ಪರಿಣಾಮದಿಂದ ಬರಗಾಲ ಎದುರಾಗಿದೆ. ನಮ್ಮ ಕಾಲಘಟ್ಟದಲ್ಲಿ ಇದು ಆಗಬಾರದಿತ್ತು. ಅಧಿಕಾರಿಗಳು ಮೊದಲಿನಂತೆ ಇರಬಾರದು. ಸೂಪರ್ ಅ್ಯಕ್ಟಿವ್ ಆಗಿ ಹೆಚ್ಚಿನ ಜವಾಬ್ದಾರಿ ಮತ್ತು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಪ್ರತಿ ತಾಲ್ಲೂಕಿಗೂ ನೋಡಲ್ ಅಧಿಕಾರಿ ಇದ್ದಾರೆ. ಯಾವ ಹಳ್ಳಿಯಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆಯಾಗಿದೆ ಎಂಬುದನ್ನು ಪ್ರತಿದಿನ ವರದಿ ನೀಡಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ಜನರ ಸಮಸ್ಯೆಗಳಿಗೆ ಶೀಘ್ರ ಲಭ್ಯವಿರಬೇಕು ಎಂದು ಸೂಚಿಸಿದರು.
ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ಶಾಸಕರಾದ ಗೋವಿಂದಪ್ಪ, ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಡಾ. ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದಿತ್ಯ ಆಮ್ಲ ಬಿಸ್ವಾಸ್, ಕೆಎಸ್‌ಡಿಎಂಎ ಆಯುಕ್ತರಾದ ಹೊನ್ನಾಂಬ, ಜಿಲ್ಲಾಧಿಕಾರಿ ವೆಂಕಟೇಶ್ ಟಿ, ಜಿಲ್ಲಾ ಪಂಚಾಯತ್ ಸಿಇಒ ಡಾ. ಎಸ್.ಆಕಾಶ್ ಅವರು ಉಪಸ್ಥಿತರಿದ್ದರು.
