ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನದೊಳಗೆ ರಾಜ್ಯದ ಎಲ್ಲಾ 5927 ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಾ ಗಾಂಧೀ ಪಂಚಾಯತಿ ಎಂದು ನಾಮಕರಣ ಮಾಡಲು ಗಡುವು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಇಲಾಖೆಯ ಆಯುಕ್ತಾಲಯದಲ್ಲಿಂದು ಪಿಡಿಓ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆ ಕೌನ್ಸಲಿಂಗ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀ ಹೆಸರನ್ನು ಚಿರಸ್ಥಾಯಿಗೊಳಿಸಲು 2026-27ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 279ರಲ್ಲಿ ಘೋಷಣೆ ಮಾಡಿರುವಂತೆ ಎಲ್ಲ ಪಂಚಾಯ್ತಿಗಳ ಹೆಸರು ಬದಲಾವಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.
ಯುಪಿಎ ಕಾರ್ಯಕಾಲದಲ್ಲಿ ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ರಾಷ್ಟ್ರಪಿತ ಗಾಂಧೀ ಗೌರವಾರ್ಥ ಮಹಾತ್ಮಾಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ -ಮನ್ರೇಗಾ ಎಂದು ಹೆಸರಿಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಜುಲೈ 1ರಿಂದ ಜಾರಿಗೆ ತಂದಿರುವ ವಿ ಬಿ ಜಿ ರಾಮ್ ಜಿಯಲ್ಲಿ ಮಹಾತ್ಮಾ ಗಾಂಧೀ ಹೆಸರನ್ನೇ ತೆಗೆದು ಹಾಕಿದೆ. ಹೀಗಾಗಿ ರಾಜ್ಯ ಸರ್ಕಾರ ಎಲ್ಲ ಪಂಚಾಯತಿಗಳಿಗೆ ಗಾಂಧೀ ಹೆಸರಿಡಲು ತೀರ್ಮಾನಿಸಿದೆ ಎಂದರು.
ತಾವು ಕಳೆದ ತಿಂಗಳು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಸಮಾವೇಶದಲ್ಲಿ ದೇಶದಲ್ಲಿರುವ ಎಲ್ಲ 2.68 ಕೋಟಿ ಗ್ರಾಮ ಪಂಚಾಯತಿಗಳಿಗೂ ಮಹಾತ್ಮಾ ಗಾಂಧೀ ಹೆಸರಿಡುವಂತೆ ಆಗ್ರಹಿಸಿದ್ದಾಗಿ ತಿಳಿಸಿದರು.
ಅದೇ ರೀತಿ ವಿ ಬಿ ಜಿ ರಾಮ್ ಜಿ ಹೆಸರಿನ ಮುಂದೆ ಗಾಂಧೀ ಹೆಸರಿಟ್ಟು ಮಹಾತ್ಮಾ ಗಾಂಧೀ ವಿಬಿಜಿ ರಾಮ್ ಜಿ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದಾಗಿಯೂ ಈಶ್ವರ ಖಂಡ್ರೆ ತಿಳಿಸಿದರು.
