ಸಮಗ್ರ ಸುದ್ದಿ

ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಬೆಂಗಳೂರು ವಿಭಾಗದ ಆರ್.ಪಿ.ಎಫ್, ನಿಂದ ಡ್ರೋನ್ ಕಣ್ಗಾವಲು ವ್ಯವಸ್ಥೆಯ ಆರಂಭ

Share

ಬೆಂಗಳೂರು: ಪ್ರಯಾಣಿಕರು ಮತ್ತು ರೈಲ್ವೆ ಆಸ್ತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಭಾರತೀಯ ರೈಲ್ವೆ ನಿರಂತರವಾಗಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಭದ್ರತಾ ಕ್ರಮಗಳನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಬೆಂಗಳೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯು ಡ್ರೋನ್ ಕ್ಯಾಮೆರಾಗಳನ್ನು ಖರೀದಿಸಿದ್ದು ಇದರಿಂದ ಜನಸಂದಣಿಯ ನಿರ್ವಹಣೆ, ರೈಲ್ವೆ ಆಸ್ತಿ ರಕ್ಷಣೆ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ನಿರಂತರ ನಿಗಾ ವಹಿಸಲು ಅನುಕೂಲವಾಗುತ್ತದೆ.

ಡ್ರೋನ್‌ಗಳ ನಿರ್ವಹಣೆಗೆ ಆಯ್ಕೆಯಾದ ಆರ್‌ಪಿಎಫ್ ಸಿಬ್ಬಂದಿಗಳು ಕರ್ನಾಟಕ ರಾಜ್ಯ ಪೊಲೀಸ್ ರಿಮೋಟ್ ಪೈಲಟ್ ತರಬೇತಿ ಸಂಸ್ಥೆಯಲ್ಲಿ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದು ಅವರಿಗೆ ಡ್ರೋನ್ ಆಪರೇಟರ್‌ ಪ್ರಮಾಣಪತ್ರ ಲಭಿಸಿದೆ.

ಇಂದು, ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಆಶುತೋಷ್ ಕುಮಾರ್ ಸಿಂಗ್ ಅವರು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಡ್ರೋನ್ ಕಣ್ಗಾವಲು ವ್ಯವಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಡ್ರೋನ್ ಕ್ಯಾಮೆರಾದ ದೃಶ್ಯಗಳ ಗುಣಮಟ್ಟ, ಕಾರ್ಯಾಚರಣೆಯ ವ್ಯಾಪ್ತಿ, ಅದರ ಕಣ್ಗಾವಲು ವೈಶಿಷ್ಟ್ಯತೆ ಸೇರಿದಂತೆ ಡ್ರೋನ್‌ ನ ಸಾಮರ್ಥ್ಯವನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರಾದ ಶ್ರೇಯಾನ್ಸ್ ಚಿಂಚವಾಡೆ ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು.

ಹೊಸದಾಗಿ ಸೇರ್ಪಡೆಗೊಂಡ ಡ್ರೋನ್ ಕ್ಯಾಮೆರಾಗಳನ್ನು ಬೆಂಗಳೂರು ವಿಭಾಗದಾದ್ಯಂತ ಪ್ರಮುಖ ರೈಲು ನಿಲ್ದಾಣಗಳು ಮತ್ತು ಇತರೆ ಅವಶ್ಯಕ ಸ್ಥಳಗಳಲ್ಲಿ ನಿಯೋಜಿಸಲಾಗುವುದು.

ಈ ಡ್ರೋನ್ ಕಣ್ಗಾವಲು ವ್ಯವಸ್ಥೆಯು ಜನಸಂದಣಿಯ ನಿರ್ವಹಣೆ, ರೈಲ್ವೆ ಆವರಣದ ಕಣ್ಗಾವಲು ಮತ್ತು ನೈಜ-ಸಮಯದಲ್ಲಿ ನಿಗಾ ವ್ಯವಸ್ಥೆಗೆ ಅನುವು ಮಾಡಿಕೊಡುವ ಮೂಲಕ ರೈಲ್ವೆ ಆಸ್ತಿ ರಕ್ಷಣೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುತ್ತವೆ.

ರೈಲ್ವೆ ಜಾಲದಾದ್ಯಂತ ಸುರಕ್ಷಿತ, ಸುಭದ್ರ ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣವನ್ನು ಒದಗಿಸಲು ಬೆಂಗಳೂರು ವಿಭಾಗದ ರೈಲ್ವೇ ರಕ್ಷಾಣಾ ದಳವು ಆಧುನಿಕ ತಂತ್ರಜ್ಞಾನ ಮತ್ತು ನವೀನ ಭದ್ರತಾ ಪರಿಹಾರಗಳನ್ನು ಬಳಸಿಕೊಳ್ಳಲು ಬದ್ಧವಾಗಿದೆ.


Share

You cannot copy content of this page