ಬೆಂಗಳೂರು:ಜಿಬಿಎ ವ್ಯಾಪ್ತಿಯ ಪೇಟೆ ಪ್ರದೇಶ ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳಲ್ಲಿರುವ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳೊಂದಿಗೆ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಪೇಟೆ ಪ್ರದೇಶ ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಕಡ್ಡಾಯವಾಗಿ ಫೈರ್ ಸೇಫ್ಟಿ ಆಡಿಟ್ ನಡೆಸಬೇಕು. ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಹೊಸದಾಗಿ ನಿರ್ಮಿಸುವ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ನೀರಿನ ಲಭ್ಯತೆಗಾಗಿ ಅಗ್ನಿಶಾಮಕ ಹೈಡ್ರೆಂಟ್‌ಗಳನ್ನು ಅಳವಡಿಸಬೇಕು. ಅಳವಡಿಸಲಾದ ಹೈಡ್ರೆಂಟ್‌ಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಹಾಗೂ ಪ್ರತಿ ತಿಂಗಳಿಗೊಮ್ಮೆ ಅವುಗಳನ್ನು ಪರಿಶೀಲಿಸಬೇಕು. ಯಾವುದೇ ದೋಷ ಕಂಡುಬಂದಲ್ಲಿ ಕೂಡಲೇ ದುರಸ್ತಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಡ್ಡಾಯವಾಗಿ ನಾಮಫಲಕ ಅಳವಡಿಸಿ:
ನಗರದಲ್ಲಿ ಜಲಮಂಡಳಿ ವತಿಯಿಂದ ಕೈಗೆತ್ತಿಕೊಳ್ಳುವ ಕಾಮಗಾರಿಗಳು ಹಾಗೂ ರಸ್ತೆ ಪುನಶ್ಚೇತನ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಜಲಮಂಡಳಿ ಕೈಗೆತ್ತಿಕೊಳ್ಳುವ ಪ್ರತಿಯೊಂದು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಿ ಕಾಮಗಾರಿ ನಡೆಸಬೇಕು. ಜೊತೆಗೆ ರಸ್ತೆ ಕತ್ತರಿಸಲು ಅನುಮತಿ ಪಡೆದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಗುಣಮಟ್ಟವನ್ನು ಕಾಪಾಡಿಕೊಂಡು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನೋಟಿಸ್ ಅವಧಿ ಮುಗಿದ ವಾಹನಗಳನ್ನು ಟೋ ಮಾಡಿ:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಜುಲೈ 10ರಿಂದ ಬೀದಿಗಳಲ್ಲಿ ನಿಲ್ಲಿಸಿರುವ ಬಿಡಾಡಿ ವಾಹನಗಳನ್ನು ತೆರವುಗೊಳಿಸುವ ಉದ್ದೇಶದಿಂದ ಸ್ಟಿಕ್ಕರ್ ಮಾದರಿಯ ನೋಟಿಸ್‌ಗಳನ್ನು ಅಂಟಿಸಲಾಗುತ್ತಿದೆ. ಈ ನೋಟಿಸ್‌ಗೆ ಏಳು ದಿನಗಳ ಅವಧಿ ನೀಡಲಾಗಿದ್ದು, ಆ ಅವಧಿಯೊಳಗೆ ವಾಹನಗಳ ಮಾಲೀಕರು ದಂಡ ಪಾವತಿಸಿ ವಾಹನಗಳನ್ನು ತೆರವುಗೊಳಿಸದಿದ್ದರೆ ಅಂತಹ ವಾಹನಗಳನ್ನು ಕೂಡಲೇ ಟೋಯಿಂಗ್ ಮಾಡುವಂತೆ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮನ್ವಯದೊಂದಿಗೆ ಡಾಂಬರೀಕರಣ ಕಾರ್ಯ ಕೈಗೊಳ್ಳಿ:
ನಗರದ ಪ್ರಮುಖ ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ಎಸ್.ಐ.ಪಿ. ಅನುದಾನದಡಿ ಪ್ರಗತಿಯಲ್ಲಿರುವ ಸಿವಿಲ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಡಾಂಬರೀಕರಣ ಕಾರ್ಯವನ್ನು ಕೈಗೊಳ್ಳಬೇಕು. ಕಾಮಗಾರಿ ವೇಳೆ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಗುಣಮಟ್ಟವನ್ನು ಕಾಪಾಡಿಕೊಂಡು ಡಾಂಬರೀಕರಣ ಕಾರ್ಯ ನಡೆಸುವಂತೆ ನಿರ್ದೇಶನ ನೀಡಿದರು.
“ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನಕ್ಕೆ ಸಿದ್ಧತೆ ಮಾಡಿಕೊಳ್ಳಿ:
ಆಗಸ್ಟ್ ತಿಂಗಳ ಪೂರ್ತಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನವನ್ನು ನಡೆಸಲಾಗುತ್ತಿದೆ. ನಗರ ಪಾಲಿಕೆಗಳು, ಕೆ-ರೈಡ್, ರೈಲ್ವೆ ಹಾಗೂ ಮೆಟ್ರೋ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಟ್ಟಡ ತ್ಯಾಜ್ಯ, ಮಣ್ಣಿನ ರಾಶಿಗಳು, ಗಿಡಗಂಟಿಗಳು ಸೇರಿದಂತೆ ಇತರೆ ತ್ಯಾಜ್ಯ ಇರುವ ಸ್ಥಳಗಳನ್ನು ಗುರುತಿಸಬೇಕು.
ಅಭಿಯಾನ ಯಶಸ್ವಿಯಾಗಲು ಬಳಕೆಯಲ್ಲಿಲ್ಲದ ಕ್ವಾರಿಗಳ ಮಾಹಿತಿ, ನೋಂದಾಯಿತ ಹಾಗೂ ಬಳಕೆಯಲ್ಲಿರುವ ವಾಹನಗಳ ವಿವರ, ಅಗತ್ಯ ಸಿಬ್ಬಂದಿ ಸೇರಿದಂತೆ ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪಿಗೆಹಳ್ಳಿ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ಕೆ ವೇಗ ನೀಡಲು ಸೂಚಿಸಿದರು.
ನಗರದಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಿ, ಬೀದಿಬದಿ ವ್ಯಾಪಾರಿಗಳಿಗೆ ಹೊಸ ಗುರುತಿನ ಚೀಟಿಗಳನ್ನು ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುವಂತೆ ಸೂಚಿಸಿದರು.
ಕೆ.ಆರ್. ಮಾರುಕಟ್ಟೆಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಲು ಹಾಗೂ ಸೊಪ್ಪು ಮಾರಾಟ ನಡೆಯುವ ಸ್ಥಳದಲ್ಲಿ ಕಾಂಕ್ರೀಟ್ ನೆಲಹಾಸು ನಿರ್ಮಿಸಲು ಸೂಚಿಸಿದರು.
ಸ್ಕೈವಾಕ್‌ಗಳಲ್ಲಿ ಬಳಕೆಯಲ್ಲಿಲ್ಲದ ಲಿಫ್ಟ್‌ಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲು ಸೂಚಿಸಿದರು.
ಸಭೆಯಲ್ಲಿ ಬಿಡಿಎ ಆಯುಕ್ತರಾದ ಮಣಿವಣ್ಣನ್, ವಿಶೇಷ ಆಯುಕ್ತರಾದ ನಿತೀಶ್, ಬೆಂ.ಘ.ತ್ಯಾ.ನಿ.ನಿ. ಸಿಇಒ ಕರೀಗೌಡ, ಲೋಖಂಡೆ ಸ್ನೇಹಲ್ ಸುಧಾಕರ್, ವೆಂಕಟ ಚಲಪತಿ, ಮುಖ್ಯ ಅಭಿಯಂತರರು, ಕೆ-ರೈಡ್, ಜಲಮಂಡಳಿ, ಬೆಸ್ಕಾಂ, ಸಂಚಾರಿ ಪೊಲೀಸ್ ವಿಭಾಗ, ಕೆ.ಪಿ.ಟಿ.ಸಿ.ಎಲ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
