ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಎಂಟೂ ತಾಲೂಕುಗಳಲ್ಲಿ ತೀವ್ರ ಬರ|ಸಮರೋಪಾದಿಯಲ್ಲಿ ಪರಿಹಾರ ಕ್ರಮಕ್ಕೆ ಸಚಿವ ಬೈರತಿ ಸುರೇಶ್ ಸೂಚನೆ

Share

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಎಂಟೂ ತಾಲೂಕುಗಳಲ್ಲಿ ತೀವ್ರ ಬರ ಆವರಿಸಿದ್ದು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್ ಜಿಲ್ಲೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪ್ರಕೃತಿ ವಿಕೋಪ ಮತ್ತು ಬರ ಪರಿಸ್ಥಿತಿಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯ ಎಂಟೂ ತಾಲೂಕುಗಳಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಕಳೆದ ಮಾರ್ಚ್ ನಿಂದ ಇಲ್ಲಿವರೆಗೆ 86 ಮಿಲಿಮೀಟರ್ ಮಳೆ ಬರಬೇಕಿತ್ತು. ಆದರೆ, ಈ ತಾಲೂಕುಗಳಲ್ಲಿ ಕೇವಲ ಶೇಕಡ 4.5 ರಷ್ಟು ಮಳೆಯಾಗುವುದು ಆತಂಕದ ವಿಷಯವಾಗಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ಆದ್ಯತೆಯಲ್ಲಿ ಕುಡಿಯುವ ನೀರು ಹಾಗೂ ಮೇವು ಪೂರೈಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಟ್ಯಾಂಕರ್ ನಲ್ಲಿ ಕುಡಿಯುವ ನೀರು

ಇದುವರೆಗೆ 1.25 ಲಕ್ಷ ರೈತರಿಗೆ ಬೆಳೆ ವಿಮೆಗೆ ನೋಂದಣಿ ಮಾಡಲಾಗಿದೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಕೊರತೆ ಆಗಬಾರದು. ಅಗತ್ಯ ಬಿದ್ದರೆ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಸಚಿವರು ತಿಳಿಸಿದರು.
ಪ್ರತಿ ತಾಲೂಕಿಗೆ ಕುಡಿಯುವ ನೀರಿಗಾಗಿ ತಲಾ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಈ ಹಣ ಬಳಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬಿತ್ತನೆಯಲ್ಲಿ ಭಾರೀ ಕುಸಿತ

ಸಾಮಾನ್ಯವಾಗಿ ಈ ವೇಳೆಗೆ 1.26 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ, ಮಳೆ ಇಲ್ಲದ ಕಾರಣ ಕೇವಲ 5650 ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಅವರು ಅಂಕಿಅಂಶ ನೀಡಿದರು.

ಸರ್ಕಾರಕ್ಕೆ ವರದಿ

ಈ ಹಿನ್ನೆಲೆಯಲ್ಲಿ ಈ ತಾಲೂಕುಗಳನ್ನು ಮಳೆ ಕೊರತೆ ಪ್ರದೇಶಗಳೆಂದು ಪರಿಗಣಿಸಲಾಗಿದೆ. ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

7 ಗಂಟೆ ವಿದ್ಯುತ್

ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ ನಾಲ್ಕು ಗಂಟೆ ಮತ್ತು ರಾತ್ರಿ ವೇಳೆ ಮೂರು ಗಂಟೆ ವಿದ್ಯುತ್ ಪೂರೈಸುವಂತೆ ಸಚಿವರು ಕಟ್ಟಪ್ಪಣೆ ಮಾಡಿದರು.

ಭಾರತ್ ಜೋಡೋ ಯುವಕರ ಸಂಘ ಸ್ಥಾಪನೆಗೆ ಆದ್ಯತೆ ನೀಡಬೇಕು. ಪ್ರತಿ ಗ್ರಾಮ ಪಂಚಾಯತಿಗೆ ಒಂದು ಸಂಘ ರಚಿಸುವಂತೆ ಸೂಚಿಸಿದ ಅವರು, ಪ್ರತಿ ಸಂಘಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದರು.

ಸೋಮಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಸ್ನೇಹಿ ಆಡಳಿತ ನೀಡಬೇಕು. ವಿಶೇಷವಾಗಿ ರೈತರನ್ನು ಯಾವುದೇ ಕಾರಣಕ್ಕೂ ಸತಾಯಿಸದೇ ಅವರಿಗೆ ನಿಯಮಬದ್ಧ ಕೆಲಸ ಮಾಡಿಕೊಡಬೇಕು ಎಂದು ಸಚಿವರು ಆದೇಶ ನೀಡಿದರು.
ರೈತರನ್ನು ಸತಾಯಿಸುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರಣ್ಯಕ್ಕೆ ಸೇರಿದ ಜಾಗ ಎಂಬ ನೆಪ ಹೇಳಿ ರೈತರಿಗೆ ಕಿರುಕುಳ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಡಳಿತಕ್ಕೆ ಮೆಚ್ಚುಗೆ

ಬರ ಪರಿಹಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳ ಜಾರಿಯಲ್ಲಿ ಉತ್ತಮ ಕೆಲಸವನ್ನು ಮಾಡಲಾಗುತ್ತಿದೆ ಜಿಲ್ಲಾಡಳಿತ ಮತ್ತು ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಕ್ಷವನ್ನು ಮರೆಯಬಾರದು

ಸಚಿವ ಸ್ಥಾನ ಸಿಗದಿರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಬೈರತಿ ಸುರೇಶ್ ಅವರು, ಯಾರನ್ನು ಸಚಿವರನ್ನಾಗಿ ಮಾಡಬೇಕೆಂಬುದರ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಆ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.

ರಾಜಕೀಯದಲ್ಲಿ ಪಕ್ಷ ಮತ್ತು ಪಕ್ಷದ ಚಿಹ್ನೆ ಮುಖ್ಯವಾಗಿರುತ್ತದೆ. ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅಧಿಕಾರ ನೀಡಲಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಕ್ಷವನ್ನು ಮರೆಯಬಾರದು ಎಂದು ಹೇಳಿದರು.


Share

You cannot copy content of this page