ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ 159ನೇ ಅಧಿವೇಶನವು 2026 ನೇ ಆಗಸ್ಟ್ 13 ರಿಂದ 27 ರವರೆಗೆ ಒಟ್ಟು 10 ದಿನಗಳ ಕಾಲ ನಡೆಯಲಿದೆ ಎಂದು ಮಾನ್ಯ ಹಂಗಾಮಿ ಸಭಾಪತಿಗಳಾದ ಪುಟ್ಟಣ್ಣ ತಿಳಿಸಿದರು.
ಅಧಿವೇಶನ ಆರಂಭದ ಹಿನ್ನಲೆಯಲ್ಲಿ ಇಂದು ವಿಧಾನಸೌಧದಲ್ಲಿನ ವಿಧಾನ ಪರಿಷತ್ತಿನ ಸಭಾಂಗಣ ಪರಿಶೀಲನೆ ಮಾಡಿ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿವೇಶನವು ಒಟ್ಟು 10 ದಿನಗಳ ಕಾಲ ಸದನದ ಅಧಿಕೃತ ಕಲಾಪಗಳು ನಡೆಯಲಿವೆ ಎಂದು ತಿಳಿಸಿದರು.
ಅಧಿವೇಶನದ ಮೊದಲದಿನ ಕಳೆದ ಅಧಿವೇಶನದ ನಂತರ ಅಗಲಿದ ಗಣ್ಯ ವ್ಯಕ್ತಿಗಳಿಗೆ ಸಂತಾಪ ಸೂಚಿಸಲಾಗುವುದು. ನಂತರದ ದಿನಗಳಲ್ಲಿ, ಕಳೆದ ಅಧಿವೇಶನದ ನಂತರ ಘನತೆವೆತ್ತ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಂದ ಅಂಗೀಕಾರಗೊಂಡ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಯವರು ಸದನದ ಮುಂದಿಡಲಿದ್ದಾರೆ.
ಪ್ರಸಕ್ತ ಅಧಿವೇಶನಕ್ಕೆ ಈವರೆಗೆ ಒಟ್ಟು 481 ಪ್ರಶ್ನೆಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 286 ಚುಕ್ಕೆ ಗುರುತಿನ ಹಾಗೂ 195 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ನಿಯಮ 72ರ ಅಡಿಯಲ್ಲಿ 31 ಸೂಚನೆಗಳು ಹಾಗೂ ನಿಯಮ 330ರ ಅಡಿಯಲ್ಲಿ 23 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ಹೊಸ ವಿಧೇಯಕಗಳ ಮಂಡನೆ, ಪರ್ಯಾಲೋಚನೆ, ಅಂಗೀಕಾರ, ಅಧ್ಯಾದೇಶಗಳ ಬದಲೀ ವಿಧೇಯಕಗಳ ಮಂಡನೆ, ಅಧಿಕೃತ ನಿರ್ಣಯಗಳು ಹಾಗೂ ಸದಸ್ಯರ ಖಾಸಗಿ ಕಾರ್ಯಕಲಾಪಗಳು ಜರುಗಲಿವೆ. ಅಲ್ಲದೆ, ಕಾರ್ಯಕಲಾಪಗಳ ಸಲಹಾ ಸಮಿತಿಯ ತೀರ್ಮಾನದಂತೆ ಪ್ರಮುಖ ಸಾರ್ವಜನಿಕ ವಿಷಯಗಳ ಮೇಲಿನ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.
