ಸಮಗ್ರ ಸುದ್ದಿ

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಜಿ.ಸಿ. ಪಾಟೀಲ ಆಯ್ಕೆ

Share

ಬೆಂಗಳೂರು: ವಿಧಾನಸಭೆಯಲ್ಲಿಂದು ಜರುಗಿದ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಗುರುಪಾದಗೌಡ ಸಂಗನಗೌಡ ಪಾಟೀಲ ಅವರು ಅವಿರೋಧವಾಗಿ ಸಭಾಧ್ಯಕ್ಷರಾಗಿ ಆಯ್ಕೆಯಾದರು.

ಹಂಗಾಮಿ ಸಭಾಧ್ಯಕ್ಷರ ಸೂಚನೆ ಮೇರೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುಪಾದಗೌಡ ಸಂಗನಗೌಡ ಪಾಟೀಲ ಅವರ ಹೆಸರನ್ನು ವಿಧಾನಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ಸೂಚಿಸಿದರು. ಇದನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಅನುಮೋದಿಸಿದ ನಂತರ ಹಂಗಾಮಿ ಸಭಾಧ್ಯಕ್ಷರು ಮತವನ್ನು ದ್ವನಿ ಮತಕ್ಕೆ ಹಾಕುವ ಮೂಲಕ ಜಿ.ಎಸ್. ಪಾಟೀಲ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

18 ನೇ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಗುರುಪಾದಗೌಡ ಸಂಗನಗೌಡ ಪಾಟೀಲ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿಕುಮಾರ್ ಮತ್ತು ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಭಾಪೀಠದವರೆಗೆ ಕರೆತಂದು ಅಭಿನಂದಿಸಿದರು.

ಕಾಂಗ್ರೆಸ್ ಪಕ್ಷದ ಲೆಟರ್ ಹೆಡ್ ನಲ್ಲಿ ಸಭಾಧ್ಯಕ್ಷರ ಹೆಸರು ಪ್ರಸ್ತಾಪವಾಗಿದ್ದರಿಂದ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದ ಬಿ.ಜೆ.ಪಿ ಸದಸ್ಯರು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸದನದ ಹೊರಗಿದ್ದರು.

ಸಭಾಧ್ಯಕ್ಷರ ಚುನಾವಣೆಗೂ ಮುಂಚಿತವಾಗಿ ಸಭೆಗೆ ಮುಖ್ಯಮಂತ್ರಿ ಅವರು ತಮ್ಮ ನೂತನ ಸಚಿವ ಸಂಪುಟದ ಸಚಿವರನ್ನು ಪರಿಚಯಿಸಿದರು.


Share

You cannot copy content of this page