ಬೆಂಗಳೂರು: ಕಸ್ತೂರಿರಂಗನ್ ವರದಿ ಸಂಬಂಧ ಕೇರಳದ ಮಾದರಿಯಲ್ಲಿ ಕರ್ನಾಟಕದಲ್ಲಿ ಭೂಸರ್ವೇಗೆ ಸಂಬಂಧಿಸಿ ತಜ್ಞರ ಆಯೋಗ ರಚಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆಯೋಗವು ಆರು ತಿಂಗಳಿನಿಂದ ಒಂದು ವರ್ಷ ಅವಧಿ ತೆಗೆದುಕೊಂಡು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕು. ಕಾಡು- ನಾಡನ್ನು ವಿಂಗಡಿಸಿ ರೈತಾಪಿ ವರ್ಗಕ್ಕೆ ಆಗುವ ತೊಂದರೆಯನ್ನು ನಿವಾರಿಸುವ ವರದಿಯನ್ನು ಕಳಿಸಿಕೊಡಿ. ನಾವು ರಾಜ್ಯ ಸರಕಾರದ ಜೊತೆ ರಾಜ್ಯದ ಜನರ ಪರವಾಗಿ ನಿಲ್ಲುವುದಾಗಿ ಹೇಳಿದ್ದೇವೆ. ಕಸ್ತೂರಿರಂಗನ್ ವರದಿ, ಮಾಧವ ಗಾಡ್ಗೀಳ್ ವರದಿಯಲ್ಲಿ ಲೋಪದೋಪಗಳಿದ್ದರೆ ಆಗಿನ ಕೇಂದ್ರ ಸರಕಾರದ ನಿರ್ಧಾರವೂ ಕಾರಣ ಎಂಬುದನ್ನು ಉಲ್ಲೇಖಿಸಬೇಕು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಮತ್ತು ಹಸಿರುಪೀಠದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ಆಯೋಗ ರಚಿಸುವಂತೆ ಹಿಂದಿನ- ಈಗಿನ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ ಎಂದು ವಿವರಿಸಿದರು. ಕಸ್ತೂರಿರಂಗನ್ ವರದಿಯಲ್ಲಿ ರಾಜಕಾರಣ ಬೇಡ; ಗೊಂದಲ ನಿರ್ಮಿಸಬೇಡಿ. ರೈತರ ಹಿತರಕ್ಷಿಸುವ ನಿಲುವು ಸರಕಾರದ್ದಾದರೆ ನಾವು ಅದನ್ನು ಪೂರ್ಣವಾಗಿ ಬೆಂಬಲಿಸಲಿದ್ದೇವೆ ಎಂದು ಹೇಳಿದರು.
ಬರದ ವಿಚಾರದಲ್ಲಿ ರಾಜಕಾರಣ ಮಾಡದಿರಿ
ಪ್ರಶ್ನೆಗೆ ಉತ್ತರ ನೀಡಿದ ಅವರು, ಬರದ ವಿಚಾರದಲ್ಲಿ ರಾಜಕಾರಣ ಮಾಡದಿರಿ; ಎಲ್ಲ ರೈತರು, ಎಲ್ಲ ಕ್ಷೇತ್ರಗಳನ್ನು ಸಮನಾಗಿ ಇಟ್ಟುಕೊಂಡು ಗೋರಕ್ಷಣೆ, ಗುಳೆ ಹೋಗುವ ಜನರಿಗೆ ಸಹಾಯ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನೂ ಇದರಲ್ಲಿ ಅಳವಡಿಸಿಕೊಳ್ಳಲಿ ಎಂದು ತಿಳಿಸಿದರು. ಜನರ ಸಮಸ್ಯೆ ಪರಿಹರಿಸಲು ಬಿಜೆಪಿ ಸಹಕರಿಸಲಿದೆ ಎಂದು ಹೇಳಿದರು.
ವಂದೇ ಮಾತರಂ ಗೌರವಿಸಿ
ಕೇವಲ ರಾಜಕಾರಣ ಮತ್ತು ಮತಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ಮತ್ತು ಅವರ ಇಡೀ ಸರಕಾರ ವಂದೇ ಮಾತರಂ ವಿರುದ್ಧ ಮುಗಿಬಿದ್ದಿದೆ. ಇದು ಯಾರಿಗೂ ಗೌರವ ತರುವಂಥದ್ದಲ್ಲ. ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆಯುವುದನ್ನು ಬಿಟ್ಟು ವಂದೇ ಮಾತರಂ ಗೌರವಿಸುವುದನ್ನು ನೀವು ಸಮರ್ಪಕಗೊಳಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಕೇಂದ್ರ ಚುನಾವಣಾ ಆಯುಕ್ತರು, ಸಹ ಆಯುಕ್ತರು ಸ್ಪಷ್ಟನೆ ಕೊಟ್ಟು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದ್ದಾರೆ. ಇದರಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಗರಬಡಿದು ನಿಲ್ಲುವ ವಾತಾವರಣ ಸೃಷ್ಟಿಯಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ಸಿನವರು ಆಪಾದನೆ, ಆರೋಪ ಮಾಡುವಾಗ ವಾಸ್ತವಿಕ ವಿಚಾರಗಳನ್ನು ಗಮನಕ್ಕೆ ಇಟ್ಟುಕೊಳ್ಳದೇ ವಿನಾಕಾರಣ ದಬ್ಬಾಳಿಕೆ ಮಾದರಿಯಲ್ಲಿ ಮಾತನಾಡಿದರೆ ಕೊನೆಯ ಹಂತದಲ್ಲಿ ಏನಾಗುತ್ತದೆ ಎಂಬುದಕ್ಕೆ ಈ ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟನೆ ಒಂದು ಉದಾಹರಣೆ ಎಂದು ವಿಶ್ಲೇಷಿಸಿದರು.
ಕರ್ನಾಟಕ, ಕೇರಳದಲ್ಲಿ ಗೆದ್ದಾಗ ಇವಿಎಂ ಸರಿ ಇದೆ ಎನ್ನುತ್ತಾರೆ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಗೆದ್ದರೆ ಇವಿಎಂ ಸರಿ ಇಲ್ಲ ಎನ್ನುತ್ತಾರೆ ಎಂದು ಟೀಕಿಸಿದರು. ಇವರ ಆರೋಪ, ಮಾತು, ದೂರುಗಳಿಗೆ ಸಾರ್ವತ್ರಿಕ ಹೇಳಿಕೆಗೆ ಯಾವುದೇ ಮೌಲ್ಯ ಇಲ್ಲ ಎಂದು ಅನಿಸುತ್ತದೆ ಎಂದು ತಿಳಿಸಿದರು.
