ಸಮಗ್ರ ಸುದ್ದಿ

ಕೇಂದ್ರ ಸರ್ಕಾರದಿಂದ ಸೋಯಾಬಿನ್‌, ಹೆಸರಕಾಳು, ಸೂರ್ಯಕಾಂತಿಗೆ ಬೆಂಬಲ ಬೆಲೆ

Share

ನವದೆಹಲಿ: ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರ ಇದೀಗ ಸಿಹಿ ಸುದ್ದಿ ನೀಡಿದ್ದು, ಪ್ರಸಕ್ತ ಮುಂಗಾರು ಋತುವಿನಲ್ಲಿ ಬೆಳೆದ ಮೂರು ಪ್ರಮುಖ ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಅನುಮೋದನೆ ನೀಡಿದೆ.

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕರ್ನಾಟಕದಲ್ಲಿ ಸೂರ್ಯಕಾಂತಿ, ಹೆಸರುಕಾಳು ಮತ್ತು ಸೋಯಾಬಿನ್‌ ಅನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಅಸ್ತು ಎಂದಿದ್ದಾರೆ.

ಯಾವತ್ತೂ ಕರ್ನಾಟಕದ ರೈತರ ಹಿತ ಕಾಯಲು ಬದ್ಧವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ರಾಜ್ಯದ ಈ ಪ್ರಮುಖ ಬೆಳೆಗಾರರ ನೆರವಿಗೆ ಬಂದಿದ್ದು, ಈ ಮೂರು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ನಿರ್ಣಯ ಪ್ರಕಟಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಯಾವ ಬೆಳೆ ಎಷ್ಟೆಷ್ಟು ಖರೀದಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಿಂದ 2026-27ರ ಮುಂಗಾರು ಋತುವಿನಲ್ಲಿ 1,15,500 ಮೆಟ್ರಿಕ್ ಟನ್ ಸೋಯಾಬೀನ್, 13,413 ಮೆಟ್ರಿಕ್ ಟನ್ ಸೂರ್ಯಕಾಂತಿ ಮತ್ತು 38,250 ಮೆಟ್ರಿಕ್ ಟನ್ ಹೆಸರುಕಾಳು ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಜೋಶಿ ಮನವಿಗೆ ಸ್ಪಂದನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದ ರೈತರ ಪರವಾಗಿ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಕನಿಷ್ಠ ಬೆಂಬಲ ಬೆಲೆಯಲ್ಲಿ ಧಾನ್ಯಗಳ ಖರೀದಿಗೆ ಮನವಿ ಮಾಡಿದ್ದರು. ಕೇಂದ್ರ ಕೃಷಿ ಸಚಿವರು ಇದಕ್ಕೆ ತ್ವರಿತ ಸ್ಪಂದನೆ ನೀಡಿದ್ದು, ಸೂರ್ಯಕಾಂತಿ, ಹೆಸರುಕಾಳು ಮತ್ತು ಸೋಯಾಬಿನ್‌ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ಸಮ್ಮತಿ ಸೂಚಿಸಿದ್ದಾರೆ.

ಕರ್ನಾಟಕದ ರೈತರ ಹಿತಾಸಕ್ತಿಗೆ ಕೇಂದ್ರ ಬದ್ಧ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಲೇ ಇದ್ದಾರೆ. ಅಂತೆಯೇ ಇದೀಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಅನುಮೋದಿಸುವ ಮೂಲಕ ರೈತರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ಅವರಿಗೆ ಮತ್ತು ಕೃಷಿ ಸಚಿವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ ಸಚಿವ ಪ್ರಲ್ಹಾದ ಜೋಶಿ.


Share

You cannot copy content of this page