ಸಮಗ್ರ ಸುದ್ದಿ

ಆಸ್ತಿ ತೆರಿಗೆ ಬಾಕಿ ವಸೂಲಿಗೆ ತಂತ್ರಜ್ಞಾನದ ಹೊಸ ಹೆಜ್ಜೆ

Share

ಬೆಂಗಳೂರು:ಬೆಂಗಳೂರು ಪಶ್ಚಿಮ ನಗರ ಪಾಲಿಕೆಯು, ಆಸ್ತಿ ತೆರಿಗೆ ಪಾವತಿ ಮಾಡಬೇಕಾದ ಬಗ್ಗೆ ಮಾಹಿತಿ ಇಲ್ಲದ, ಪಾವತಿಸಲು ಮರೆತಿರುವ ಅಥವಾ ವರ್ಷಗಳಿಂದ ಪಾವತಿ ಬಾಕಿ ಉಳಿಸಿಕೊಂಡಿರುವವರಿಂದ ಪಾವತಿ ಮಾಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ವಿನೂತನ ಪರಿಹಾರ ಕಂಡುಕೊಂಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಆಸ್ತಿ ಮಾಲೀಕರಿಗೆ ತಾವು ಪಾಲಿಕೆಗೆ ಪಾವತಿಸಲು ಬಾಕಿ ಇರಿಸಿಕೊಂಡಿರುವ ನಿಖರವಾದ ಒಟ್ಟು ತೆರಿಗೆ ಮೊತ್ತ ಎಷ್ಟು? ಎಂದಿನಿಂದ ಬಾಕಿ ಇದೆ? ಬಾಕಿ ತೆರಿಗೆಯನ್ನು ಹೇಗೆ ಆನ್‌ಲೈನ್‌ನಲ್ಲಿ ಸರಳವಾಗಿ ಪಾವತಿಸಬಹುದು? ಎಂಬುದರ ಬಗ್ಗೆ ತಿಳಿಯದೆ ತೆರಿಗೆ ಪಾವತಿಸುವಲ್ಲಿ ದೀರ್ಘಾವಧಿ ವಿಳಂಬವಾಗಿರುವುದು ಇತ್ಯಾದಿ ಅಂಶಗಳನ್ನು ಮನಗಂಡ ಪಾಲಿಕೆಯು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಎಲ್ಲ ಸುಸ್ತಿದಾರರನ್ನು ಪ್ರತಿ ದಿನ 2 ಬಾರಿ ಕರೆ ಮೂಲಕ ತಲುಪಿದ್ದು, ಪಾವತಿ ಸಂಬಂಧಿಸಿದಂತೆ ವಿಷಯ ಮನದಟ್ಟು ಮಾಡಿಸಿದೆ.

ಮಾರ್ಚ್ ಮತ್ತು ಜೂನ್ ನಡುವಿನ ಅವಧಿಯಲ್ಲಿ, AI ಧ್ವನಿ ಏಜೆಂಟ್ ಮೂಲಕ 64 (ಹಳೆಯ 198 ವಾರ್ಡ್‌ ಪೈಕಿ) ವಾರ್ಡ್‌ಗಳಲ್ಲಿ ಬರೋಬ್ಬರಿ 4,54,908 ಕರೆಗಳನ್ನು ಮಾಡಲಾಗಿದ್ದು, ಒಟ್ಟು 59,604 ಆಸ್ತಿ ಮಾಲೀಕರನ್ನು ಅವರ ಮಾತೃಭಾಷೆಯಲ್ಲೇ (ಕನ್ನಡ) ತಲುಪುವಲ್ಲಿ ಪಶ್ಚಿಮ ಪಾಲಿಕೆ ಯಶಸ್ವಿಯಾಗಿದೆ.

ಸ್ವಯಂಚಾಲಿತ AI ಕರೆ

ಈ ಸ್ವಯಂಚಾಲಿತ AI ಕರೆಯು ನಾಗರಿಕರಿಗೆ ಅವರ ಬಾಕಿ ಇರುವ ಮೊತ್ತ ಎಷ್ಟು, ಯಾವ ವರ್ಷದಿಂದ ಬಾಕಿ ಇದೆ ಮತ್ತು ಅದನ್ನು ಆನ್‌ಲೈನ್‌ನಲ್ಲಿ ಹೇಗೆ ಪಾವತಿಸಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿದೆ.

ಈ ಅಭಿಯಾನದ ಫಲವಾಗಿ 26,962 ಆಸ್ತಿ ಮಾಲೀಕರು ತೆರಿಗೆ ಪಾವತಿಸುವುದಾಗಿ ಒಪ್ಪಿಕೊಂಡಿದ್ದು, ಇದರಿಂದ 35.11 ಕೋಟಿ ರೂ. ಮೌಲ್ಯದ ಬಾಕಿ ಸಂಗ್ರಹಣೆಗೆ ದಾರಿ ಮಾಡಿಕೊಟ್ಟಿದೆ. ಇವರಲ್ಲಿ 10,303 ಜನರು ಪಾವತಿಗೆ ನಿರ್ದಿಷ್ಟ ದಿನಾಂಕವನ್ನು ತಿಳಿಸಿದ್ದರೆ, 5,747 ಜನರು ಶೀಘ್ರದಲ್ಲಿ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ.

ಅಧಿಕಾರಿಗಳ ಮೇಲಿನ ಹೊರೆ ಇಳಿಕೆ

ತೆರಿಗೆ ಸುಸ್ತಿದಾರರನ್ನು ಗುರುತಿಸುವುದಕ್ಕಿಂತಲೂ ಅವರನ್ನು ತಲುಪುವುದು ಪಾಲಿಕೆಗೆ ಸವಾಲಿನ ಕೆಲಸವಾಗಿತ್ತು. ಒಂದು ಟ್ಯಾಕ್ಸ್‌ ಸೈಕಲ್ (tax cycle)ನಲ್ಲಿ ಲಕ್ಷಾಂತರ ಫೋನ್ ಕರೆಗಳನ್ನು ಮಾಡಲು ಒಂದು ಇಡೀ ಟ್ಯಾಕ್ಸ್‌ ಎಸ್ಟಾಬ್ಲಿಷ್‌ಮೆಂಟ್‌ಗಿಂತಲೂ ದೊಡ್ಡದಾದ ಬೃಹತ್ ಕಾಲ್ ಸೆಂಟರ್‌ ಅಗತ್ಯ ಬೀಳುತ್ತಿತ್ತು ಮತ್ತು ಇದರಿಂದಾಗಿ ಸಹಾಯಕ ಕಂದಾಯ ಅಧಿಕಾರಿಗಳ (ARO) ಸರ್ವೇ ಮತ್ತು ಫೀಲ್ಡ್‌ ರಿಕವರಿ ಕೆಲಸಗಳಿಗೆ ಅಡಚಣೆಯುಂಟಾಗಬಹುದಿತ್ತು. ಆದರೆ AI ಮೊದಲ ಹಂತದ ಕರೆಗಳನ್ನು ನಿರ್ವಹಿಸಿದ್ದರಿಂದ, ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕಾದ ಪ್ರಮುಖ ಪ್ರಕರಣಗಳ ಮೇಲೆ ಮಾತ್ರ ಗಮನಹರಿಸಲು ಅನುಕೂಲವಾಯಿತು.

ಅಲ್ಲದೆ, ಈ ಉಪಕ್ರಮದಿಂದಾಗಿ, ಹಲವು ವರ್ಷಗಳಿಂದ ತಪ್ಪಾಗಿ ಉಳಿದಿದ್ದ ದಾಖಲೆಗಳು ಸರಿಪಡಿಸಲ್ಪಟ್ಟಿವೆ. 17,314 ನಿಷ್ಕ್ರಿಯ ಫೋನ್ ಸಂಖ್ಯೆಗಳು ಹಾಗೂ 6,315 ಬೇರೆಯವರ ಸಂಖ್ಯೆಗಳು (ಆಸ್ತಿ ಹಳೆ ಮಾಲೀಕರಿಗೆ ಸೇರಿದ್ದ ಫೋನ್‌ ನಂಬರ್) ಪತ್ತೆಯಾಗಿ ಪಟ್ಟಿ ಪರಿಷ್ಕರಿಸಲ್ಪಟ್ಟಿದೆ. ಜತೆಗೆ 4,577 ಆಸ್ತಿಗಳಲ್ಲಿ ಯಾವುದೇ ಬಾಕಿ ಇಲ್ಲದಿರುವುದು ದೃಢಪಟ್ಟು, ಆ ನಾಗರಿಕರಿಗೆ ಅನಗತ್ಯ ನೋಟಿಸುಗಳು ತಪ್ಪಿವೆ.

‘ವೋಕಲ್‌ಲ್ಯಾಬ್ಸ್’ನಿಂದ ತಂತ್ರಜ್ಞಾನ ಅಭಿವೃದ್ಧಿ
ಈ ತಂತ್ರಜ್ಞಾನವನ್ನು ಬೆಂಗಳೂರಿನ ಯುವ ಸ್ಟಾರ್ಟ್‌ಅಪ್ ‘ವೋಕಲ್‌ಲ್ಯಾಬ್ಸ್’ (VocalLabs) ಸಂಸ್ಥೆಯ ಮೂವರು ಸಂಸ್ಥಾಪಕರಾದ (ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿಗಳು) ನೀಲೇಶ್ ಕುಮಾರ್, ಮೃತ್ಯುಂಜಯ್ ದಾಸ್ ಮತ್ತು ರಾಗ್ ಸನಿಲ್ ಅವರು ಅಭಿವೃದ್ಧಿಪಡಿಸಿದ್ದಾರೆ. ಪೌರಾಡಳಿತದ ಆದಾಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ತ್ವರಿತವಾಗಿ ಅರ್ಥಮಾಡಿಕೊಂಡು ಅವರು, ಸ್ಥಳೀಯ ಭಾಷೆ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ತ್ವರಿತವಾಗಿ ಪರಿಹಾರವನ್ನು ರೂಪಿಸಿದ್ದಾರೆ.

“ನಮಗೆ ಸುಸ್ತಿದಾರರು ಯಾರೆಂದು ತಿಳಿದಿದ್ದರೂ ಒಂದು ತೆರಿಗೆ ಚಕ್ರದೊಳಗೆ (tax cycle) ಅವರೊಂದಿಗೆ ಪ್ರತ್ಯೇಕವಾಗಿ, ಮನವರಿಕೆಯಾಗುವಂತೆ ಮತ್ತು ಅವರ ಸ್ವಂತ ಭಾಷೆಯಲ್ಲಿ ಮಾತನಾಡಲು ನಮಗೆ ತಂತ್ರಜ್ಞಾನದ ನೆರವು ಬೇಕಿತ್ತು. ಅದು ಈಗ ಸಾಧ್ಯವಾಗಿದೆ” ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ.ಅವರು ತಿಳಿಸಿದ್ದಾರೆ.

ಒಂದು ಡಿಮ್ಯಾಂಡ್ ನೋಟಿಸ್ ಓರ್ವ ನಾಗರಿಕರಿಗೆ ಕೇವಲ ಮಾಹಿತಿ ನೀಡುತ್ತದೆ. ಆದರೆ ಸಂಭಾಷಣೆ ಮನವೊಲಿಸುತ್ತದೆ. ಅನೇಕ ಆಸ್ತಿ ಮಾಲೀಕರಿಂದ ನಮಗೆ ತಿಳಿದ ಮಹತ್ವದ ವಿಷಯವೇನೆಂದರೆ, ಬಹುತೇಕ ಸುಸ್ತಿದಾರರಿಗೆ ಎಷ್ಟು ತೆರಿಗೆ ಬಾಕಿ ಇದೆ ಅಥವಾ ಈಗ ಆನ್‌ಲೈನ್‌ನಲ್ಲಿ ಅದನ್ನು ಎಷ್ಟು ಸರಳವಾಗಿ ಪಾವತಿಸಬಹುದು ಎಂಬ ಬಗ್ಗೆ ತಿಳಿದಿರಲಿಲ್ಲ. ಈಗ ನಮ್ಮ ನೂತನ ವ್ಯವಸ್ಥೆಯ ಮೂಲಕ ಅಂತಹ ತೆರಿಗೆದಾರರಿಗೆ ಅನುಕೂಲವಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಪಾಲಿಕೆ ಸೂಚನೆ

ಪಾಲಿಕೆಯಿಂದ ಎಂದಿಗೂ ಕರೆ ಮಾಡಿ ಫೋನ್‌ ಮೂಲಕ ಪಾವತಿ ಮಾಡುವಂತೆ ಕೇಳುವುದಿಲ್ಲ ಹಾಗೂ ಒಟಿಪಿಗಳು, ಕಾರ್ಡ್ ಸಂಖ್ಯೆಗಳು, ಯುಪಿಐ ಪಿನ್‌ಗಳು ಅಥವಾ ಬ್ಯಾಂಕ್ ವಿವರಗಳನ್ನು ಎಂದಿಗೂ ಕೇಳುವುದಿಲ್ಲ. ಇಂತಹ ವಂಚಕರ ಕರೆಗಳ ಬಗ್ಗೆ ಎಚ್ಚರವಹಿಸುವಂತೆ ನಾಗರಿಕರಲ್ಲಿ ಪಾಲಿಕೆ ಮನವಿ ಮಾಡಿದೆ. ಒಂದು ವೇಳೆ ಆ ರೀತಿ ಕರೆ ಬಂದಲ್ಲಿ ಅದು ಪಾಲಿಕೆಯದ್ದಾಗಿರುವುದಿಲ್ಲ. ಈ ರೀತಿ ಘಟನೆಗಳು ನಡೆದಲ್ಲಿ ಕರೆ ಮಾಡಿದವರಿಗೆ ಮಾಹಿತಿ ನೀಡದೆ ಸಂಬಂಧಪಟ್ಟವರಿಗೆ ದೂರು ನೀಡುವಂತೆ ಕೋರಲಾಗಿದೆ ಹಾಗೂ ಸುಸ್ತಿದಾರರಿಗೆ ಅಥವಾ ತೆರಿಗೆ ಪಾವತಿದಾರರಿಗೆ ಕಡ್ಡಾಯವಾಗಿ online portal https://bbmptax.karnataka.gov.in ನಲ್ಲಿ ಪಾವತಿಸಲು ಅಥವಾ ತಮ್ಮ ವ್ಯಾಪ್ತಿಯ ವಾರ್ಡ್/‌ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ಬಾಕಿಗಳನ್ನು ಪಾವತಿಸುವಂತೆ ಮನವಿ ಮಾಡಿದೆ.

ಅಂಕಿ-ಅಂಶ

  • ಒಟ್ಟು ಕರೆಗಳು: 4,54,908
  • ತಲುಪಲಾದ ಒಟ್ಟು ಆಸ್ತಿ ಮಾಲೀಕರ ಸಂಖ್ಯೆ: 59,604 (ಒಟ್ಟು 64 ವಾರ್ಡ್‌ಗಳಲ್ಲಿ)
  • ತೆರಿಗೆ ಪಾವತಿಸುವುದಾಗಿ ಒಪ್ಪಿಕೊಂಡಿರುವ ಆಸ್ತಿ ಮಾಲೀಕರ ಸಂಖ್ಯೆ: 26,962
  • ಇದರಿಂದ ಸಂಗ್ರಹವಾಗಲಿರುವ ಒಟ್ಟು ಬಾಕಿ: 35.11 ಕೋಟಿ ರೂ.
  • ಪಾವತಿಗೆ ನಿರ್ದಿಷ್ಟ ದಿನಾಂಕ ತಿಳಿಸಿರುವ ಆಸ್ತಿ ಮಾಲೀಕರ ಸಂಖ್ಯೆ: 10,303
  • ಶೀಘ್ರದಲ್ಲಿ ಪಾವತಿಸುವುದಾಗಿ ಭರವಸೆ ನೀಡಿರುವ ಆಸ್ತಿ ಮಾಲೀಕರ ಸಂಖ್ಯೆ: 5,747

Share

You cannot copy content of this page