ಬೆಂಗಳೂರು :ರಾಜ್ಯಾದ್ಯಂತ ಕಳೆದ 30-40 ವರ್ಷಗಳಿಂದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಹಾಗೂ ಮನೆಗಳನ್ನು ಹೊಂದಿ, ‘ಬಿ-ಖಾತಾ’ದಿಂದಾಗಿ ಸಂಕಷ್ಟದಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ಕಲ್ಪಿಸಿ, ಪಕ್ಕಾ ‘ಎ-ಖಾತಾ’ ನೀಡುವ ಅತ್ಯಂತ ಮಹತ್ವದ ‘ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ-2026’ಕ್ಕೆ ವಿಧಾನ ಸಭೆ ಅಂಗೀಕಾರ ನೀಡಿದೆ.
ಶುಕ್ರವಾರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ ಪ್ರತಿಯೊಬ್ಬ ಆಸ್ತಿ ಮಾಲೀಕನಿಗೂ ಸಂಪೂರ್ಣ ಆಸ್ತಿ ಭದ್ರತೆ ನೀಡುವುದು ನಮ್ಮ ಸರ್ಕಾರದ ಹಾಗೂ ಮುಖ್ಯಮಂತ್ರಿಗಳ ‘ಭೂ ಗ್ಯಾರಂಟಿ’ ಸಂಕಲ್ಪವಾಗಿದೆ. ಅನಧಿಕೃತ ಬಡಾವಣೆಗಳ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರ ಪಾಲಿಕೆಗಳ ಕಾಯ್ದೆಯ ಸೆಕ್ಷನ್ 284ಕ್ಕೆ ತಿದ್ದುಪಡಿ ತರಲಾಗುತ್ತಿದೆ,” ಎಂದು ತಿಳಿಸಿದರು.
“ಕಳೆದ ಮೂರ್ನಾಲ್ಕು ದಶಕಗಳಿಂದ ರಾಜ್ಯಾದ್ಯಂತ ನಗರ ಭಾಗಗಳಲ್ಲಿ ಹಲವಾರು ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ. ಅಕ್ರಮ ನಡೆಯುತ್ತಿದೆ ಎಂದು ತಿಳಿದೂ ಸಹ ಈ ಹಿಂದಿನ ಸರ್ಕಾರಗಳು ಅಕ್ರಮಗಳ ತಡೆಗೆ ಮುಂದಾಗಲಿಲ್ಲ, ಕಾನೂನು ಕಡೆಗಣಿಸಿ ಬಡಾವಣೆ ನಿರ್ಮಿಸಬಾರದು ಎಂಬ ಸಾಮಾನ್ಯ ಪ್ರಜ್ಞೆ ಬಡಾವಣೆ ನಿರ್ಮಾಣದಾರರಿಗೂ ಇಲ್ಲದ ಕಾರಣ ಇಂದು ಆಸ್ತಿ ಮಾಲೀಕರಿಗೆ ಹತ್ತಾರು ತೊಂದರೆಗಳು ಎದುರಾಗಿವೆ” ಎಂದು ವಿಷಾದಿಸಿದರು.
“ಅನದೀಕೃತವಾಗಿ ನಿರ್ಮಾಣಗೊಂಡ ನಿವೇಶನಗಳಲ್ಲಿ ಅಗತ್ಯವಿದ್ದಷ್ಟು ಅಗಲ ರಸ್ತೆಗಳಿಲ್ಲ, ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ, ವಿದ್ಯುತ್ ಸೌಕರ್ಯ ಕೊಟ್ಟಿಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಮಳೆನೀರು ಹೊರಗಡೆ ಹೋಗೋದಕ್ಕೆ ದಾರಿ ಮಾಡಿಲ್ಲ, ಸರಿಯಾಗಿ ಸಂಪರ್ಕ ರಸ್ತೆಗಳೂ ಇಲ್ಲ. ಹೀಗೆ ಅವ್ಯವಸ್ಥೆಗಳ ಆಗರಗಳನ್ನ ನಿರ್ಮಾಣ ಮಾಡಿ ಆ ಮಾಲೀಕರಿಗೆ ಸರಿಯಾಗಿ ಆಸ್ತಿ ಮಾಲೀಕತ್ವವೂ ಸಿಗದಂತಾಗಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ 2024 ರಲ್ಲಿ ನಮ್ಮ ಸರ್ಕಾರ ಬಹಳ ಕಟುವಾದಂತಹ ನಿಲುವನ್ನು ತೆಗೆದುಕೊಳ್ಳಲು ಸಂಕಲ್ಪ ಮಾಡಿದ್ದು, ಇಂತಹ ಅನಧಿಕೃತ ಬಡಾವಣೆಗಳಿಗೆ ಸಂಪೂರ್ಣ ವಿರಾಮವನ್ನ ಹಾಕಿ, ಅಕ್ರಮಗಳನ್ನು ತಡೆಗಟ್ಟೋ ಕೆಲಸ ಮಾಡಿದ್ದೇವೆ. ಇದರ ಜೊತೆಗೆ ದಶಕಗಳ ಹಿಂದೆ ನಿರ್ಮಾಣವಾದ ಬಡಾವಣೆಗಳ ಆಸ್ತಿ ಮಾಲೀಕರಿಗೂ ಸೂಕ್ತ ಪರಿಹಾರ ನೀಡಲು ಮುಂದಾಗಿದ್ದೇವೆ” ಎಂದರು.
“ಈ ಹಿಂದೆ ಅಂತಹ ಆಸ್ತಿ ಮಾಲೀಕರಿಗೆ ಬಿ ಖಾತಾ ನೀಡಲಾಗಿತ್ತು. ಎ ಖಾತಾ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಆದರೆ, ಎ ಖಾತಾ ಕೊಟ್ಟರೆ ಮಾತ್ರ ಅವರ ಮಾಲೀಕತ್ವದ ಗ್ಯಾರಂಟಿಗೆ ತೂಕವಿರುತ್ತದೆ ಎಂಬ ಕಾರಣಕ್ಕಾಗಿ ಇದೀಗ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ” ಎಂದು ತಿಳಿಸಿದರು.
ವಿಧೇಯಕದ ಪ್ರಮುಖ ಅಂಶಗಳು:
ಸಾರ್ವಜನಿಕ ರಸ್ತೆ ಎಂದು ಘೋಷಣೆ: ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವಾಗ ಬಿಡಲಾಗಿರುವ ರಸ್ತೆಗಳು ಈಗಲೂ ಮೂಲ ಜಮೀನು ಮಾಲೀಕರ ಹೆಸರಿನಲ್ಲೇ ಇವೆ. ಹೊಸ ತಿದ್ದುಪಡಿಯ ಪ್ರಕಾರ, ಈ ರಸ್ತೆಗಳನ್ನು ಸ್ಥಳೀಯ ನಗರಪಾಲಿಕೆ ಅಥವಾ ಮುನ್ಸಿಪಾಲಿಟಿ ದಾಖಲೆಗಳಲ್ಲಿ ‘ಸಾರ್ವಜನಿಕ ರಸ್ತೆ’ ಎಂದು ಅಧಿಕೃತವಾಗಿ ಘೋಷಿಸಲು ಕಾನೂನು ಅವಕಾಶ ಸಿಗಲಿದೆ.
ಬಿ-ಖಾತಾದಿಂದ ‘ಎ-ಖಾತಾ’ಗೆ ಬಡ್ತಿ: ರಸ್ತೆಗಳು ಅಧಿಕೃತಗೊಳ್ಳುತ್ತಿದ್ದಂತೆ, ಆ ಬಡಾವಣೆಗಳಲ್ಲಿರುವ ನಿವೇಶನ ಮತ್ತು ಮನೆಗಳಿಗೆ ನಿಯಮಾನುಸಾರ ಪಕ್ಕಾ ‘ಎ-ಖಾತಾ’ ನೀಡಲಾಗುವುದು. ಇದರಿಂದ ಆಸ್ತಿಗೆ ಶೇ.100 ರಷ್ಟು ಪರಿಪಕ್ವ ಮಾಲೀಕತ್ವ ದೊರೆಯಲಿದೆ.
ಸಾರ್ವಜನಿಕರಿಗೆ ಸಿಗುವ ಪ್ರಯೋಜನಗಳು: ಎ-ಖಾತಾ ದೊರೆಯುವುದರಿಂದ ಆಸ್ತಿ ಮಾಲೀಕರಿಗೆ ಬ್ಯಾಂಕುಗಳಿಂದ ಸುಲಭವಾಗಿ ಗೃಹ/ಆಸ್ತಿ ಸಾಲ ಸಿಗಲಿದೆ. ಜೊತೆಗೆ ಕಟ್ಟಡ ನಕ್ಷೆ ಮಂಜೂರಾತಿ (Plan Approval) ಮತ್ತು ವಾಸಯೋಗ್ಯ ಪ್ರಮಾಣಪತ್ರ (Occupancy Certificate – OC) ಪಡೆಯಲು ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ರಾಜ್ಯಾದ್ಯಂತ ವಿಸ್ತರಣೆ: ಈ ವ್ಯವಸ್ಥೆಯನ್ನು ಈಗಾಗಲೇ ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದ ಎಲ್ಲಾ ನಗರಪಾಲಿಕೆಗಳು, ಪುರಸಭೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತರಿಸಲಾಗುತ್ತಿದೆ.
ಹೊಸ ಅಕ್ರಮಗಳಿಗೆ ತಡೆ: ಹಳೆಯ ಅಕ್ರಮಗಳಿಗೆ ನಿಯಮಾನುಸಾರ ಪರಿಹಾರ ಕಲ್ಪಿಸುವ ಜೊತೆಗೆ, ಭವಿಷ್ಯದಲ್ಲಿ ಯಾವುದೇ ಹೊಸ ಅನಧಿಕೃತ ಬಡಾವಣೆಗಳು ತಲೆಎತ್ತದಂತೆ ಸರ್ಕಾರ ಸಂಪೂರ್ಣ ತಡೆ ಹಾಕಿದೆ.
ದಶಕಗಳಿಂದ ತ್ರಿಶಂಕು ಸ್ಥಿತಿಯಲ್ಲಿದ್ದ ಲಕ್ಷಾಂತರ ಆಸ್ತಿ ಮಾಲೀಕರ ಹಿತದೃಷ್ಟಿಯಿಂದ ತರಲಾದ ಈ ಐತಿಹಾಸಿಕ ತಿದ್ದುಪಡಿಗೆ ಸದನವು ಸರ್ವಾನುಮತದಿಂದ ಅನುಮೋದನೆ ನೀಡಿದೆ.
