ಬೆಂಗಳೂರು:ಯುವ ಹಾಗೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಜೊತೆಗೆ ಕಲಾಪ್ರೇಮಿಗಳನ್ನು ಬೆಸೆಯುವ ಉದ್ದೇಶದಿಂದ ‘ಪರಮ್ ಕಲ್ಚರ್’ ಸಂಸ್ಥೆಯು ಪ್ರತಿ ತಿಂಗಳ ನಾಲ್ಕನೇ ಭಾನುವಾರ ಆಯೋಜಿಸುತ್ತಿರುವ ‘ಪರಮ್ ವಿಹಾರ’ ಮಾಸಿಕ ಸರಣಿಯ 15ನೇ ಆವೃತ್ತಿಯು ಆಗಸ್ಟ್ 23ರಂದು ಸಂಜೆ 6ರಿಂದ ರಾತ್ರಿ 8 ಗಂಟೆವರೆಗೆ ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಅಕಾಡೆಮಿಯಲ್ಲಿ ಜರುಗಲಿದೆ.
ಈ ಸಾಂಸ್ಕೃತಿಕ ಸಂಜೆಯಲ್ಲಿ ವಿದುಷಿ ಮಾಲಾ ವೆಂಕಟೇಶ್ ಅವರ ಶಿಷ್ಯೆಯರಾದ ಕುಮಾರಿ ಲಹರಿ ಭಟ್ ಮತ್ತು ಕುಮಾರಿ ಸುನಿಧಿ ಅರಕೆರೆ ಅವರ ಸರಸ್ವತಿ ವೀಣಾ ಜುಗಲ್‌ಬಂದಿ ಹಾಗೂ ಭಾವನಾ ಉದಯ ಕಾಂತಿ ಅವರ ಸಮನ್ವಯ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ವೈಭವಂ’ ಭರತನಾಟ್ಯ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಪ್ರತಿಭಾನ್ವಿತ ವೀಣಾ ವಾದಕಿಯರು:
ಕಳೆದ 10 ವರ್ಷಗಳಿಂದ ವಿದುಷಿ ಮಾಲಾ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ವೀಣಾಭ್ಯಾಸ ಮಾಡುತ್ತಿರುವ ಲಹರಿ ಭಟ್ ಮತ್ತು ಸುನಿಧಿ ಅರಕೆರೆ ಈಗಾಗಲೇ ಹಲವು ವೇದಿಕೆಗಳಲ್ಲಿ ಗಮನ ಸೆಳೆದಿದ್ದಾರೆ. ಸುನಿಧಿ ಅವರು ತಮ್ಮ ಗುರುವಿನೊಂದಿಗೆ ಬೋಧನೆಯಲ್ಲೂ ತೊಡಗಿಸಿಕೊಂಡಿದ್ದರೆ, ಲಹರಿ ಅವರು ಬೆಂಗಳೂರಿನ ಹಲವು ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಇವರಿಬ್ಬರೂ ಉಡುಪಿಯ ಶ್ರೀಕೃಷ್ಣ ಮಠ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ, ಬೆಂಗಳೂರಿನ ಕೆಎಸ್‌ಆರ್‌ಟಿಸಿ ಲೇಔಟ್ ಹಾಗೂ ಎಚ್‌ಎಸ್‌ಆರ್ ಲೇಔಟ್‌ನ ಶ್ರೀ ಸಿದ್ಧಿವಿನಾಯಕ ದೇವಾಲಯಗಳು ಸೇರಿದಂತೆ ಹಲವು ಪ್ರಸಿದ್ಧ ವೇದಿಕೆಗಳಲ್ಲಿ ಯಶಸ್ವಿ ಕಚೇರಿಗಳನ್ನು ನೀಡಿದ್ದಾರೆ.
‘ಶ್ರೀಕೃಷ್ಣ ವೈಭವಂ’ ನೃತ್ಯ ವೈಭವ:
ಖ್ಯಾತ ನೃತ್ಯ ಕಲಾವಿದೆ ಭಾವನಾ ಉದಯ ಕಾಂತಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಸಮನ್ವಯ ಡ್ಯಾನ್ಸ್ ಅಕಾಡೆಮಿಯು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಾಕ್ಷೇತ್ರ ಶೈಲಿಯ ಭರತನಾಟ್ಯ ತರಬೇತಿ ನೀಡುತ್ತಿದ್ದು, ರಾಜ್ಯ ಮತ್ತು ಹೊರರಾಜ್ಯಗಳಲ್ಲಿ 500ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದೆ. ಡಾ.ಪ್ರಮೋದ್ ದಾಸ್ ಅವರಿಂದ ಭರತನಾಟ್ಯ, ಕಲಾಮಂಡಲಂ ಕವಿತಾ ಕೃಷ್ಣಕುಮಾರ್ ಅವರಿಂದ ಮೋಹಿನಿಯಾಟ್ಟಂ ಹಾಗೂ ಡಾ.ಜಾಯ್ ಕೃಷ್ಣನ್ ಅವರಿಂದ ನಟ್ಟುವಾಂಗಂ ಅಭ್ಯಾಸ ಮಾಡಿರುವ ಭಾವನಾ ಅವರು, ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಪ್ರದರ್ಶನ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ದಕ್ಷಿಣ ಭಾರತದಾದ್ಯಂತ 1500ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿರುವ ಇವರು ‘ಸಂಚಾರಿ ಕಲಾಶ್ರೀ’, ‘ನಾಟ್ಯಮಯೂರಿ’, ‘ಆವಿಷ್ಕಾರ ಚಿಲಂಬೋಲಿ’, ‘ಗುರು ಶ್ರೇಷ್ಠ’, ‘ಸತ್ಯಭಾಮಾ ಪುರಸ್ಕಾರ’, ‘ರವೀಂದ್ರ ರತ್ನ ಪುರಸ್ಕಾರ’, ‘ಕಲಾಮಂಟಪ ಪುರಸ್ಕಾರ’ ಹಾಗೂ ‘ನಟ್ಟುವಾಂಗ ಕಲೈಮಾಮಣಿ’ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
