ಸಮಗ್ರ ಸುದ್ದಿ

ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂಜೆಗೆ ಪ್ರೇರೇಪಿಸಿ: ಈಶ್ವರ ಖಂಡ್ರೆ|ಚಿಂತಾಮಣಿ ನಗರದ ಸ್ವಚ್ಛತೆ ಕಾಪಾಡಲು ಈಶ್ವರ ಖಂಡ್ರೆ ಸೂಚನೆ

Share

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪೂಜಿಸುವಂತೆ ಜನರನ್ನು ಪ್ರೇರೇಪಿಸಲು ಮತ್ತು ಪಿಓಪಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ವಿಸರ್ಜನೆಗೆ ಅವಕಾಶ ನೀಡದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಚಿಂತಾಮಣಿಯ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನವೀನ್ ಭಟ್ ವೈ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶೇ.90ರಿಂದ 95ರಷ್ಟು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಆರಾಧನೆ ನಡೆಯುತ್ತದೆ. ಜಿಲ್ಲೆಯಲ್ಲೂ ಇಂತಹ ಜಾಗೃತಿ ಮೂಡಿಸಿ ಎಂದರು.

ನೀರಲ್ಲಿ ಕರಗದ ಪಿಓಪಿ ಗಣಪತಿ ಮೂರ್ತಿಗಳಿಗೆ ಭಾರ ಲೋಹ ಮಿಶ್ರಿತ ರಾಸಾಯನಿಕ ಬಣ್ಣ ಹಚ್ಚುವ ಕಾರಣ ಚಲಚರಗಳ ಸಾವಿಗೆ ಕಾರಣವಾಗುತ್ತದೆ. ಜೊತೆಗೆ ಜಲಮೂಲಗಳು ಕಲುಷಿತವಾಗಿ ಜನ ಜಾನುವಾರುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಪರಿಸರ ಸ್ನೇಹಿ ಬಣ್ಣ ರಹಿತ ಮಣ್ಣಿನ ಗೌರಿ, ಗಣೇಶ ಮೂರ್ತಿಗಳ ಪೂಜೆಗೆ ಉತ್ತೇಜನ ನೀಡಬೇಕು ಎಂದರು.

ಚಿಂತಾಮಣಿ ನಗರದ ಸ್ವಚ್ಛತೆಯನ್ನು ಕಾಪಾಡಬೇಕು, ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ, ಸುಟ್ಟರೆ ಪರಿಸರಕ್ಕೆ ವಿಷಯುಕ್ತ ಅಂಶವನ್ನು ಸೇರಿಸುವ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ಮಾರಾಟ, ದಾಸ್ತಾನಿಗೆ ಕಡಿವಾಣ ಹಾಕಬೇಕು, ಮೂಲದಲ್ಲೇ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಬೇರ್ಪಡಿಸಿ ನಿರ್ವಹಣೆ ಮಾಡಬೇಕು ಎಂದರು.

ಸಿಎಸ್.ಆರ್. ಬಳಸಿ ಯುವಜನರಿಗೆ ಕೌಶಲ ತರಬೇತಿ ನೀಡಿ:

ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಂದ ಸಾಂಸ್ಥಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್.) ಪಡೆದು ಗ್ರಾಮೀಣ ಯುವಜನರಿಗೆ ಕೌಶಲ ತರಬೇತಿ ನೀಡಿ, ಗ್ರಾಮೀಣ ಯುವಜನರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿರುವ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಗಳನ್ನು ಒದಗಿಸಿ ಆಧುನಿಕ ತಂತ್ರಜ್ಞಾನದ ನೆರವಿನಿಂದ ಹೆಚ್ಚಿನ ಕಲಿಕೆಗೆ ಮತ್ತು ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಇಂದಿನ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದು ತಿಳಿಸಿದರು.

ಸ್ಪೋಕನ್ ಇಂಗ್ಲಿಷ್ ಕಲಿಸಿ:

ಅರಿವು ಕೇಂದ್ರಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಸಿದರೆ ಅವರ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಗದಗ್ ನಲ್ಲಿರುವ ಮಹಾತ್ಮಾ ಗಾಂಧೀ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೆರವು ಪಡೆದು ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಮತ್ತು ಹಾಲಿ ಇರುವ ವ್ಯವಸ್ಥೆ ಬಲಪಡಿಸುವಂತೆ ಈಶ್ವರ ಖಂಡ್ರೆ ಸೂಚಿಸಿದರು.


Share

You cannot copy content of this page