ಸಮಗ್ರ ಸುದ್ದಿ

ಪರಮ್ ವಿಹಾರ-15’: ಮನಸೆಳೆದ ವೀಣಾ ನಾದ, ಕೃಷ್ಣ ವೈಭವ| ಭಕ್ತಿ, ವೀರ, ಶೃಂಗಾರ ರಸಗಳ ಅದ್ಭುತ ಪ್ರದರ್ಶನ

Share

ಬೆಂಗಳೂರು: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಪರಮ್ ಕಲ್ಚರ್’ ಸಂಸ್ಥೆಯು ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಅಕಾಡೆಮಿಯಲ್ಲಿ ಆಯೋಜಿಸಿದ್ದ ‘ಪರಮ್ ವಿಹಾರ’ ಮಾಸಿಕ ಸರಣಿಯ 15ನೇ ಆವೃತ್ತಿಯು ಅತ್ಯಂತ ವೈಭವಯುತವಾಗಿ ಸಂಪನ್ನಗೊಂಡಿತು.

ವಿದುಷಿ ಮಾಲಾ ವೆಂಕಟೇಶ್ ಅವರ ಶಿಷ್ಯೆಯರಾದ ಕುಮಾರಿ ಲಹರಿ ಭಟ್ ಹಾಗೂ ಕುಮಾರಿ ಸುನಿಧಿ ಅರಕೆರೆ ಅವರ ಸರಸ್ವತಿ ವೀಣಾ ಜುಗಲ್‌ಬಂದಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಮುತ್ತುಸ್ವಾಮಿ ದೀಕ್ಷಿತರ ನಾಟೈ ರಾಗದ ‘ಮಹಾಗಣಪತಿಂ’ ಕೃತಿಯೊಂದಿಗೆ ಆರಂಭವಾದ ಕಚೇರಿಯಲ್ಲಿ, ಅನ್ನಮಾಚಾರ್ಯರ ಸುಪ್ರಸಿದ್ಧ ‘ಬ್ರಹ್ಮಕಡಗಿ’ ಭಕ್ತಿಗೀತೆ ಮೊಳಗಿತು. ಬಳಿಕ ಹಿಂದೋಳಂ ರಾಗದ ‘ಸಾಮಜವರ ಗಮನ’ ಕೃತಿಯನ್ನು ಕಲ್ಪನಾ ಸ್ವರಗಳೊಂದಿಗೆ ಅತ್ಯಂತ ನಿಖರವಾಗಿ ನುಡಿಸಿದರು. ಇದೇ ವೇಳೆ ಮೃದಂಗ ವಾದಕರ ತನಿ ಆವರ್ತನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಡಾ. ಎಂ. ಬಾಲಮುರಳಿಕೃಷ್ಣ ಅವರ ‘ಬೃಂದಾವನಿ ತಿಲ್ಲಾನ’ದೊಂದಿಗೆ ವೀಣಾ ವಾದನ ಸಂಪನ್ನಗೊಂಡಿತು.

​‘ಶ್ರೀಕೃಷ್ಣ ವೈಭವಂ’ ನೃತ್ಯ ರೂಪಕ:

ವಿದುಷಿ ಭಾವನಾ ಉದಯ ಕಾಂತಿ ಅವರ ಮಾರ್ಗದರ್ಶನದಲ್ಲಿ ಸಮನ್ವಯ ಡ್ಯಾನ್ಸ್ ಅಕಾಡೆಮಿಯ ಕಲಾವಿದರು ಪ್ರಸ್ತುತಪಡಿಸಿದ ‘ಶ್ರೀಕೃಷ್ಣ ವೈಭವಂ’ ಭರತನಾಟ್ಯ ನೃತ್ಯ ರೂಪಕವು ಕಣ್ಣಿಗೆ ಹಬ್ಬ ತಂದಿತು.

​ಗರುಡ ಕವಿತಂ: ಭಕ್ತಿ ರಸವನ್ನು ಬಿಂಬಿಸುವ ‘ಗರುಡ ಕವಿತಂ’ ಮೂಲಕ ಪ್ರದರ್ಶನ ಆರಂಭವಾಯಿತು.

​ವಾರಣಂ ಆಯಿರಂ: ಆಂಡಾಳ್ ಹಾಗೂ ರಂಗನಾಥ ಸ್ವಾಮಿಯ ದಿವ್ಯ ವಿವಾಹವನ್ನು ವರ್ಣಿಸುವ 6ನೇ ತಿರುಮೊಳಿಯ ‘ವಾರಣಂ ಆಯಿರಂ’ ಪ್ರೇಕ್ಷಕರ ಮನಸೂರೆಗೊಂಡಿತು.

​ಕಾಳಿಂಗ ನರ್ತನ: ಕೃಷ್ಣನು ಕಾಳಿಂಗ ಸರ್ಪವನ್ನು ಮರ್ದಿಸುವ ಸನ್ನಿವೇಶದಲ್ಲಿ ಕಲಾವಿದರು ಪ್ರದರ್ಶಿಸಿದ ವೀರ ರಸ ಗಮನ ಸೆಳೆಯಿತು.

​ಗೋಪಿಕಾ ಆನಂದ: ಶ್ರೀಕೃಷ್ಣನ ದರ್ಶನ ಪಡೆದ ಗೋಪಿಕೆಯರ ಅಪಾರ ಆನಂದ, ಸಂಭ್ರಮವನ್ನು ಅಭಿವ್ಯಕ್ತಿಸುವ ನೃತ್ಯದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

​ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಕಲಾಪ್ರೇಮಿಗಳು ಉದಯೋನ್ಮುಖ ಕಲಾವಿದರ ನಾದ ಹಾಗೂ ನೃತ್ಯ ವೈಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


Share

You cannot copy content of this page