ಸಮಗ್ರ ಸುದ್ದಿ

600 ಕೋಟಿ ರೂ. ವೆಚ್ಚದ ಡಿಎನ್ ಸೊಲ್ಯೂಷನ್ಸ್‌ ತಯಾರಿಕೆ, ಆರ್‌ & ಡಿ ಘಟಕಕ್ಕೆ ಸಚಿವ ಎಂ ಬಿ ಪಾಟೀಲ ಚಾಲನೆ | 350 ಜನರಿಗೆ ಉದ್ಯೋಗಾವಕಾಶ

Share

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಕುಂದಾಣ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ ದಕ್ಷಿಣ ಕೊರಿಯಾ ಮೂಲದ ಡಿ.ಎನ್.ಸೊಲ್ಯೂಷನ್ಸ್‌ ಕಂಪನಿಯು ₹600 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ತಯಾರಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ & ಡಿ) ಘಟಕವನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ʻಮಶೀನ್‌ ಟೂಲ್‌ ತಯಾರಿಕೆಗೆ ಹೆಸರಾಗಿರುವ ಡಿ.ಎನ್.ಸೊಲ್ಯೂಷನ್ಸ್‌ ಕಂಪನಿಯೊಂದಿಗೆ ಎರಡು ವರ್ಷಗಳ ಹಿಂದೆ ನಾನು ಕೊರಿಯಾ ಪ್ರವಾಸ ಕೈಗೊಂಡಿದ್ದಾಗ ಈ ಒಡಂಬಡಿಕೆ ಆಗಿತ್ತು. ಇಷ್ಟು ಕ್ಷಿಪ್ರ ಅವಧಿಯಲ್ಲಿ ತಯಾರಿಕೆ ಮತ್ತು ಆರ್‌ & ಡಿ ಘಟಕಗಳು ಸಿದ್ಧವಾಗಿರುವುದು ದೊಡ್ಡ ದಾಖಲೆಯಾಗಿದೆ. ಹೀಗೆ ಎರಡೂ ಸ್ಥಾವರಗಳು ಒಂದೆಡೆ ಸಾಕಾರಗೊಂಡಿರುವುದು ವಿಶಿಷ್ಟ ಸಂಗತಿಯಾಗಿದೆʼ ಎಂದಿದ್ದಾರೆ.

ರಾಜ್ಯವು ಸೇವಾಧಾರಿತ ಆರ್ಥಿಕತೆಯಿಂದ ಉತ್ಪಾದನೆ ಆಧರಿತ ಆರ್ಥಿಕತೆಯಾಗಿ ರೂಪಾಂತರಗೊಳ್ಳುತ್ತಿರುವ ಸಂಕ್ರಮಣಾವಸ್ಥೆಯಲ್ಲಿದೆ. ತಯಾರಿಕೆ ವಲಯದಲ್ಲಿ ಬರುವ ಆಟೋಮೊಬೈಲ್‌, ಹೆವಿ ಎಂಜಿನಿಯರಿಂಗ್‌, ಏರೋಸ್ಪೇಸ್‌, ರಕ್ಷಣೋದ್ಯಮ, ಪ್ರಿಸಿಷನ್‌ ತಯಾರಿಕೆ ಹೀಗೆ ಪ್ರತಿಯೊಂದರಲ್ಲೂಮಶೀನ್‌ ಟೂಲ್ಸ್‌ ನಿರ್ಣಾಯಕ ಪಾತ್ರ ವಹಿಸುತ್ತದೆ. ನಾವು ಹೆಚ್ಚಾಗಿ ಈ ಸ್ವರೂಪದ ಬಂಡವಾಳ ಹೂಡಿಕೆಗೇ ಆದ್ಯತೆ ಕೊಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದೇಶದ ಒಟ್ಟಾರೆ ಮಶೀನ್‌ ಟೂಲ್ಸ್‌ ತಯಾರಿಕೆ ವಲಯಕ್ಕೆ ರಾಜ್ಯವು ಶೇ.52ರಷ್ಟು ಕೊಡುಗೆ ನೀಡುತ್ತಿದೆ. ಡಿ.ಎನ್.ಸೊಲ್ಯೂಷನ್ಸ್‌ ತನ್ನ ಹೂಡಿಕೆಗೆ ನಮ್ಮಲ್ಲಿಗೆ ಬರಲು ಇದು ಪ್ರಮುಖ ಕಾರಣವಾಗಿದೆ. ಇಲ್ಲಿ ಈಗಾಗಲೇ 350 ಮಂದಿ ಉದ್ಯೋಗನಿರತರಾಗಿರುವುದು ಸಂತಸದ ಸಂಗತಿಯಾಗಿದೆ. ಕಂಪನಿಯು ಇಲ್ಲಿಂದಲೇ ತನ್ನ ಜಾಗತಿಕ ಮಟ್ಟದ ಪೂರೈಕೆಯನ್ನು ನಿರ್ವಹಿಸಬೇಕು. ಜತೆಗೆ ನಮ್ಮಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಪ್ರಶಿಕ್ಷಣ, ತರಬೇತಿ ಮತ್ತು ಉದ್ಯಮಸಂಬಂಧಿ ಕಾರ್ಯಕ್ರಮಗಳಲ್ಲಿ ಕಂಪನಿಯು ಸಕ್ರಿಯ ಭಾಗವಾಗಬೇಕು ಎಂದು ಅವರು ನುಡಿದಿದ್ದಾರೆ.

ಸರಕಾರವು ಕೈಗಾರಿಕಾಸ್ನೇಹಿ ನೀತಿಗಳಲ್ಲಿ ಮುಂಚೂಣಿಯಲ್ಲಿದೆ. ಏಕಗವಾಕ್ಷಿ ವ್ಯವಸ್ಥೆ ಮತ್ತು ತಿದ್ದುಪಡಿಯ ಮೂಲಕ ರೂಪಿಸಿರುವ ಕೈಗಾರಿಕಾ ಸೌಲಭ್ಯ ವಿಧೇಯಕಗಳು ಹೂಡಿಕೆದಾರರಿಗೆ ಬೆರಳತುದಿಯಲ್ಲಿ ಸೇವೆ ಒದಗಿಸುತ್ತಿವೆ. ಇದು ನಮ್ಮ ಸುಗಮ ವಾಣಿಜ್ಯ ಸಂಸ್ಕೃತಿಯ ಭಾಗವಾಗಿದ್ದು, ಅಗತ್ಯ ಪ್ರಕ್ರಿಯೆಗಳನ್ನೆಲ್ಲ ತುಂಬಾ ಸರಳಗೊಳಿಸಲಾಗಿದೆ ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಡಿ ಎನ್ ಸಲ್ಯೂಷನ್ಸ್ ಕಂಪನಿಯ ಅಧ್ಯಕ್ಷ ವೊನ್‌ ಜಾಂಗ್‌ ಕಿಮ್‌ ಅವರು ಸಂಸ್ಥೆ ನಡೆದು ಬಂದ ಹಾದಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಮಿಷಿನ್ ಟೂಲ್ ಉತ್ಪಾದನೆಯಲ್ಲಿ 2035ರ ವೇಳೆಗೆ ದೇಶದಲ್ಲೇ ಮೊದಲ ಸ್ಥಾನಕ್ಕೇರುವ ವಿಶ್ವಾಸ ಇದ್ದು, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಲಿವೆ ಎಂದು ಜಾಂಗ್ ಹೇಳಿದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್‌, ಕ್ರಾಫ್ಟ್ಸ್ ಮ್ಯಾನ್ ಅಟೊಮೇಷನ್ ಅಧ್ಯಕ್ಷ ಶ್ರೀನಿವಾಸನ್ ರವಿ, ಸಫರನ್ ಏರ್ ಕ್ರಾಫ್ಟ್ ಎಂಜಿನ್ಸ್ ವ್ಯವಸ್ಥಾಪಕ ನಿರ್ದೇಶಕ ಅಶುತೋಷ್ ಕುಮಾರ್, ಫಾನುಕ್ ಕಾರ್ಪೊರೇಷನ್ ಅಧ್ಯಕ್ಷ ಕುಂಜ್ ಯಮಗುಜಿ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಉಪಸ್ಥಿತರಿದ್ದರು.

ಕೋರಿಯಾ ಕೈಗಾರಿಕಾ ಪಾರ್ಕ್ ಸ್ಥಾಪನೆ:

ಜಪಾನ್ ಟೂಲ್ಸ್ ಪಾರ್ಕ್ ಮಾದರಿಯಲ್ಲೇ ಕೋರಿಯಾ ದೇಶದ ಕಂಪನಿಗಳ ಸಲುವಾಗಿ ರಾಜ್ಯದಲ್ಲಿ ಪ್ರತ್ಯೇಕ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತುಮಕೂರು ಸಮೀಪ ಸ್ಥಾಪಿಸಿರುವ ಜಪಾನ್ ಟೂಲ್ಸ್ ಕೈಗಾರಿಕಾ ಪಾರ್ಕ್ ಈಗ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಕೋರಿಯಾ ಪಾರ್ಕ್ ಕೂಡ ಅಭಿವೃದ್ಧಿ ಪಡಿಸಲಾಗುವುದು. ಎಲ್ಲಿ ಮಾಡಬೇಕು ಎಂಬುದನ್ನು ನಂತರದ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.


Share

You cannot copy content of this page