ಸಮಗ್ರ ಸುದ್ದಿ

ನಿಮ್ಮ ನಿವೇಶನ ನೀವೇ ಸ್ವತಃ ಸ್ವಚ್ಛಗೊಳಿಸಿ, ಹೆಚ್ಚಿನ ವೆಚ್ಚದಿಂದ ತಪ್ಪಿಸಿಕೊಳ್ಳಿ: ಕೃಷ್ಣ ಬೈರೇಗೌಡ |ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸಾಂಕೇತಿಕ ಚಾಲನೆ

Share

ಬೆಂಗಳೂರು: ನಗರದಲ್ಲಿರುವ ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವತಃ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಪಾಲಿಕೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲು ವಿಧಿಸಲಾಗುವ ಹೆಚ್ಚಿನ ವೆಚ್ಚದಿಂದ ತಪ್ಪಿಸಿಕೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ನಿವೇಶನ ಮಾಲೀಕರಲ್ಲಿ ಮನವಿ ಮಾಡಿದರು.

ನಗರದಾದ್ಯಂತ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆಸ್ತಿ ಮಾಲೀಕರಿಗೆ ನೀಡಲಾಗಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಪಾಲಿಕೆಯಿಂದ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ಜುಲೈ 15ರಿಂದ ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿರುವ ಸಿ&ಡಿ ತ್ಯಾಜ್ಯ ಹಾಗೂ ಗಿಡ-ಗಂಟಿಗಳನ್ನು ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಖಾಸಗಿ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿತ್ತು. ಬಳಿಕ ಮತ್ತೊಂದು ವಾರ, ಅಂದರೆ ಆಗಸ್ಟ್ 22ರವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಸುಮಾರು ಶೇ.30ರಷ್ಟು ನಿವೇಶನ ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಂಡಿದ್ದಾರೆ ಎಂದರು.

ನಗರದಲ್ಲಿ ಶೇ.70ರಷ್ಟು ಖಾಲಿ ನಿವೇಶನಗಳ ಮಾಲೀಕರು ಇದುವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಹೀಗಾಗಿ, ಇಂದಿನಿಂದ ಅಂತಹ ಖಾಲಿ ನಿವೇಶನಗಳನ್ನು ಪಾಲಿಕೆಯಿಂದಲೇ ಸ್ವಚ್ಛಗೊಳಿಸಲಾಗುವುದು. ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ಮಾಲೀಕರಿಂದ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.

ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರ ಕರ್ತವ್ಯ:

ತಮ್ಮ ಖಾಲಿ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಧನ್ಯವಾದ ತಿಳಿಸಿದ ಸಚಿವರು, “ಸುಮಾರು ಒಂದೂವರೆ ತಿಂಗಳಿನಿಂದ ಮನವಿ ಮಾಡಲಾಗಿದ್ದರೂ ಇನ್ನೂ ಹಲವರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಲ್ಲ. ಖಾಲಿ ನಿವೇಶನಗಳಲ್ಲಿ ಕಳೆ ಹಾಗೂ ಗಿಡ-ಗಂಟಿಗಳು ಬೆಳೆದು, ನೊಣ, ಸೊಳ್ಳೆ, ಹಾವು, ಇಲಿ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಇದರಿಂದ ನಗರದ ನೈರ್ಮಲ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಬೆಂಗಳೂರಿನ ಸ್ವಚ್ಛತೆ ಹಾಗೂ ಸುಧಾರಣೆಯ ದೃಷ್ಟಿಯಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ” ಎಂದರು.

ನೀವೇ ಸ್ವಚ್ಛಗೊಳಿಸಿಕೊಂಡರೆ ಕಡಿಮೆ ವೆಚ್ಚ:

ಆಸ್ತಿ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಿಕೊಳ್ಳುವ ಬದಲು ಸ್ವತಃ ಸ್ವಚ್ಛಗೊಳಿಸಿಕೊಳ್ಳುವುದು ಸೂಕ್ತ. ಪಾಲಿಕೆಯಿಂದ ಸ್ವಚ್ಛಗೊಳಿಸುವುದಕ್ಕಿಂತ ನೀವೇ ಸ್ವತಃ ಸ್ವಚ್ಛಗೊಳಿಸಿಕೊಂಡರೆ ಕಡಿಮೆ ವೆಚ್ಚದಲ್ಲಿ ಕಾರ್ಯ ಪೂರ್ಣಗೊಳಿಸಬಹುದು. ನಿಮ್ಮ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಂಡು ಬೆಂಗಳೂರಿನ ಸುಧಾರಣೆಗೆ ಸಹಕರಿಸಿ. ಸ್ವತಃ ನಿವೇಶನವನ್ನು ಸ್ವಚ್ಛಗೊಳಿಸಿಕೊಂಡಿರುವ ಮಾಲೀಕರಿಗೆ ನಾನೇ ಧನ್ಯವಾದ ಪತ್ರವನ್ನು ಕಳುಹಿಸುತ್ತೇನೆ ಎಂದು ಹೇಳಿದರು.

ಎಸ್‌ಆರ್ ದರದ ಪ್ರಕಾರ ಸ್ವಚ್ಛತಾ ಕಾರ್ಯ:

ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು ಹೆಚ್ಚಾಗಿ ಬೆಳೆದಿರುವುದರಿಂದ ಜೆಸಿಬಿ ಮೂಲಕ ಸ್ವಚ್ಛಗೊಳಿಸಲು ಕನಿಷ್ಠ ಮೂರು ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಟಿಪ್ಪರ್‌ಗಳ ಸಂಚಾರಕ್ಕೆ ಇರುವ ನಿರ್ಬಂಧದ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ದಿನಕ್ಕೆ ಒಂದು ಬಾರಿ ಮಾತ್ರ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ನಿವೇಶನದ ಅಳತೆಯನ್ನು ಆಧರಿಸಿ ಎಸ್‌ಆರ್ ದರದ ಪ್ರಕಾರ ಸ್ವಚ್ಛತಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಮೊದಲ ಬಾರಿ ಸ್ವಚ್ಛತೆಗೆ ದಂಡವಿಲ್ಲ:

ಗೋಡೆ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡರೆ ನಿಗದಿಪಡಿಸಿರುವ ದರವನ್ನೇ ವಿಧಿಸಲಾಗುವುದು. ಗೇಟ್ ವ್ಯವಸ್ಥೆ ಇರುವ ನಿವೇಶನಗಳಿಗೆ ಹೆಚ್ಚುವರಿ ದರ ವಿಧಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. “ಮೊದಲ ಬಾರಿಗೆ ಖಾಲಿ ನಿವೇಶನವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಇದೇ ರೀತಿಯ ನಿರ್ಲಕ್ಷ್ಯ ಪುನರಾವರ್ತನೆಯಾದಲ್ಲಿ ಮಾತ್ರ ನಿಯಮಾನುಸಾರ ದಂಡ ವಿಧಿಸಲಾಗುವುದು” ಎಂದು ಸಚಿವರು ಸ್ಪಷ್ಟಪಡಿಸಿದರು.

ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆಸ್ತಿ ಮಾಲೀಕರ ಆದ್ಯ ಕರ್ತವ್ಯ:

ಜಿಬಿಎ ಕಾಯ್ದೆಯ ಪ್ರಕಾರ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆಸ್ತಿ ಮಾಲೀಕರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ, ಆಸ್ತಿ ಮಾಲೀಕರು ಕೂಡಲೇ ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳುವಂತೆ ಸಚಿವರು ಮನವಿ ಮಾಡಿದರು.

1.22 ಲಕ್ಷ ಮೆಟ್ರಿಕ್ ಟನ್‌ ಸಿ&ಡಿ ತ್ಯಾಜ್ಯ ತೆರವು:

“ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನದಡಿ ನಗರದಾದ್ಯಂತ ಜಿಬಿಎ ವತಿಯಿಂದ 67,152 ಮೆಟ್ರಿಕ್ ಟನ್ ಸಿ&ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಬಿಡಿಎ ವತಿಯಿಂದ 51,323 ಮೆಟ್ರಿಕ್ ಟನ್, ಜಲಮಂಡಳಿಯಿಂದ 728 ಮೆಟ್ರಿಕ್ ಟನ್, ಕೆಐಎಡಿಬಿಯಿಂದ 2,800 ಮೆಟ್ರಿಕ್ ಟನ್, ಕೆ-ರೈಡ್‌ನಿಂದ 560 ಮೆಟ್ರಿಕ್ ಟನ್ ಹಾಗೂ ಎನ್‌ಹೆಚ್‌ಎಐ ವತಿಯಿಂದ 169 ಮೆಟ್ರಿಕ್ ಟನ್ ಸಿ&ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.

ಇದರೊಂದಿಗೆ, ಬೆಸ್ಕಾಂ ವತಿಯಿಂದ 6,173 ಪೋಲ್ಸ್/ರಾಡ್ಸ್‌ಗಳನ್ನು ತೆರವುಗೊಳಿಸುವ/ಎತ್ತರಿಸುವ ಕಾರ್ಯ ಹಾಗೂ ಮೆಟ್ರೋ ವತಿಯಿಂದ 2,143 ಕ್ಯು.ಮೀ. ತ್ಯಾಜ್ಯ ತೆರವು ಕಾರ್ಯ ಕೈಗೊಳ್ಳಲಾಗಿದೆ. ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಇದುವರೆಗೆ ಒಟ್ಟು 1,22,732 ಮೆಟ್ರಿಕ್ ಟನ್ ಸಿ&ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.

189 ಖಾಲಿ ನಿವೇಶನಗಳಿಗೆ ನೋಟಿಸ್:

ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲೀಕರಿಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಸಂಬಂಧ ನಗರ ಪಾಲಿಕೆವಾರು ಒಟ್ಟು 189 ಖಾಲಿ ನಿವೇಶನಗಳಿಗೆ ನೋಟಿಸ್ ಅಂಟಿಸಲಾಗಿದ್ದು, ಇಂದಿನಿಂದ 5 ನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ.

  • ಕೇಂದ್ರ ನಗರ ಪಾಲಿಕೆ: 53
  • ಉತ್ತರ ನಗರ ಪಾಲಿಕೆ: 37
  • ಪಶ್ಚಿಮ ನಗರ ಪಾಲಿಕೆ: 41
  • ಪೂರ್ವ ನಗರ ಪಾಲಿಕೆ: 28
  • ದಕ್ಷಿಣ ನಗರ ಪಾಲಿಕೆ: 30
  • ಒಟ್ಟು: 189

ಈ ವೇಳೆ ಬಿಡಿಎ ಅಧ್ಯಕ್ಷರು ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎ. ಹ್ಯಾರಿಸ್, ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಜಿ., ಅಪರ ಆಯುಕ್ತರಾದ ವೆಂಕಟಾಚಲಪತಿ, ಮುಖ್ಯ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page