ಸಮಗ್ರ ಸುದ್ದಿ

ಭೂ-ಪರಿವರ್ತನೆ, ಕಟ್ಟಡ ನಿರ್ಮಾಣಕ್ಕೆ ಯಾವುದೇ ತೊಂದರೆಯಿಲ್ಲ: ಸಚಿವ ರಹಿಂ ಖಾನ್

Share

ಬೆಳಗಾವಿ ಸುವರ್ಣಸೌಧ : ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ವಿನ್ಯಾಸಗಳ, ಗ್ರಾಮಠಾಣಾ, ವಿವಿಧ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗುತ್ತಿದ್ದು, ಇದರಿಂದಾಗಿ ಭೂ-ಪರಿವರ್ತನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ತಿಳಿಸಿದರು.

ವಿಧಾ‌ನ ಪರಿಷತ್ತಿನಲ್ಲಿಂದು ಪದವೀಧರರ ಕ್ಷೇತ್ರದ ಸದಸ್ಯರಾದ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಧಿಕೃತ ನಿವೇಶನ ಕಟ್ಟಡಗಳಿಗೆ ನಮೂನೆ -3 ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದ ಸ್ವತ್ತುಗಳಿಗೆ ನಮೂನೆ 3-ಎ ನೀಡಲಾಗುತ್ತಿದೆ.

ಕಟ್ಟಡ ಪರವಾನಿಗೆಯನ್ನು ತ್ವರಿತ ಪಾರದರ್ಶಕವಾಗಿ ನೀಡಲು ಎಸ್.ಬಿ.ಪಿ.ಎ.ಎಸ್./ ಯುಎಲ್‍ಎಮ್‍ಎಸ್ ತಂತ್ರಾಂಶವನ್ನು ಬಳಕೆ ಮಾಡಲಾಗುತ್ತಿದೆ. ಕಟ್ಟಡ ಪರವಾನಿಗೆ ಕೋರಿ ಆರ್ಕಿಟೆಕ್ಟ್ ಮುಖಾಂತರ ತಂತ್ರಾಂಶದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಕಟ್ಟಡ ಪರವಾನಿಗೆ ನೀಡಲಾಗುತ್ತಿದೆ. ತಂತ್ರಾಂಶವನ್ನು ಬಳಕೆ ಮಾಡುವಾಗ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಮೂಲಕ ಪರಿಹರಿಸಲಾಗುತ್ತಿದೆ.

ಖಾತಾ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೌರಾಡಳಿತ ನಿರ್ದೇಶನಾಲಯದಿಂದ ಪ್ರಮಾಣಿತ ಕಾರ್ಯವಿಧಾನ ಹೊರಡಿಸಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಕಾವೇರಿ 2.0 ತಂತ್ರಾಂಶ ಮತ್ತು ಇ-ಆಸ್ತಿ ತಂತ್ರಾಂಶಗಳನ್ನು ಜೋಡಣೆ ಮಾಡಲಾಗಿದೆ. ಇದರಿಂದ ಹಕ್ಕು ವರ್ಗಾವಣೆ ವಿಧಾನವನ್ನು ಸರಳಿಕರಣಗೊಳಿಸಲಾಗಿದ್ದು, ಹಕ್ಕು ವರ್ಗಾವಣೆಯಂತೆ ಗಣಕೀಕೃತ ನಮೂನೆ-3ನ್ನು ಸುಲಭವಾಗಿ ಪಡೆಯಬಹುದಾಗಿದೆ. ಕಟ್ಟಡ ಪರವಾನಿಗೆ ಹಾಗೂ ನಮೂನೆ-3ನ್ನು ನೀಡುತ್ತಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳ ಆದಾಯಕ್ಕೆ ಕೊರತೆಯಾಗಿರುವುದಿಲ್ಲ ಎಂದು ಸಚಿವರು ತಿಳಿಸಿದರು.

ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ವಿನ್ಯಾಸಗಳ, ಗ್ರಾಮಠಾಣಾ, ವಿವಿಧ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಪರವಾನಿಗೆಯನ್ನು ಈ ಹಿಂದಿನಂತೆಯೇ ಮುಂದುವರೆಸಲಾಗಿರುತ್ತದೆ. ಅನುಮೋದನೆ ಪಡೆಯದ/ಅನಧಿಕೃತ ಸ್ವತ್ತುಗಳಿಗೆ ನಮೂನೆ-3ಎ ನೀಡಿ, ತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಆಸ್ತಿಕರ ವಸೂಲಿ ಮಾಡಲಾಗುತ್ತಿದೆ. ಆದರೆ, ಕಟ್ಟಡ ಪರವಾನಿಗೆ ನೀಡಲು ಪ್ರಸ್ತುತ ಅವಕಾಶವಿರುವುದಿಲ್ಲ ಎಂದು ಸಚಿವರು ತಿಳಿಸಿದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ -3 ವಿತರಿಸಲು ಕಾವೇರಿ 2.0 ತಂತ್ರಾಂಶವನ್ನು ಬಳಕೆಮಾಡಲಾಗುತ್ತಿದ್ದು, ವಿಶ್ವಾಸ ನಕ್ಷೆ ಜಾರಿಗೆ ತಂದಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಬಿ ಖಾತಾಗೆ ಅವಕಾಶ:
ನಿವೇಶನ ಅಥವಾ ಕಟ್ಟಡಗಳಿಗೆ ಸಂಬಂಧಿಸಿದ ಕರಾರು ಹೊಂದಿದವರು ಸಹ ಬಿ ಖಾತಾ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಕಾನೂನು ಸಲಹೆ ಪಡೆದುಕೊಳ್ಳಲಾಗುತ್ತಿದೆ ಎಂದು ಇದೆ ವೇಳೆ ಸಚಿವರು ಮಾಹಿತಿ ನೀಡಿದರು.


Share

You cannot copy content of this page