ಸಮಗ್ರ ಸುದ್ದಿ

72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸಿದ್ಧತೆ – ಡಿಸಿಎಂ ಡಾ.ಜಿ.ಪರಮೇಶ್ವರ

Share

ಬೆಂಗಳೂರು:ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಹಂತದಲ್ಲಿ ಚರ್ಚೆ‌ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿಗಳು, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಇಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಬೆಂಗಳೂರು ಅರಮನೆ ಮೈದಾನದ ಶೃಂಗಾರ್ ಪ್ಯಾಲೆಸ್‌ನಲ್ಲಿ ಆಯೋಜಿಸಿದ್ದ 6ನೇ ‘ರಾಜ್ಯಮಟ್ಟದ ಐಕ್ಯತಾ ಸಮಾವೇಶ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಹಿಂದೆ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹೋರಾಟ ಮಾಡಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈಗ ಡಿ‌.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲಾಗುವುದು ಎಂದು ಹೇಳಿದರು.

*ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಗೆ ಜಾಗ ಗುರುತಿಸಿದರೆ ಮಂಜೂರು:

ಸಮನ್ವಯ ಸಮಿತಿಗೆ ಜಾಗ ನೀಡುವಂತೆ ಮನವಿ‌ ಮಾಡಲಾಗಿದೆ. ಜಾಗ ಗುರುತಿಸಿದರೆ ಸಚಿವರಾದ ಕೆ‌.ಹೆಚ್.ಮುನಿಯಪ್ಪ ಅವರು ಮತ್ತು ನಾನು ಮಂಜೂರು ಮಾಡಿಸುತ್ತೇವೆ. ಒಪಿಎಸ್ ಜಾರಿಗೊಳಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರು ತಾತ್ವಿಕವಾಗಿ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಮಾವೇಶದಲ್ಲಿ ನಿಮಗೆ ಪ್ರಾಶಸ್ತ್ಯ ನೀಡಬೇಕಾಗಿತ್ತು. ಎಸ್‌ಸಿ, ಎಸ್‌ಟಿ‌ ಸಮುದಾಯದಲ್ಲಿ ಲಕ್ಷಕ್ಕೂ ಹೆಚ್ಚು ನೌಕರರಿದ್ದರು, ನಿಮ್ಮ ಸಮಸ್ಯೆಗಳನ್ನು ಬೇಡಿಕೆಯಾಗಿ ಮುಖ್ಯಮಂತ್ರಿಗಳಿಗೆ ನೀಡಲಿಲ್ಲ. ನಿಮ್ಮ ಶಕ್ತಿ ಪ್ರದರ್ಶನ ಸಾಲುವುದಿಲ್ಲ. ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘಟನೆ ಮತ್ತಷ್ಟು ಗಟ್ಟಿಯಾಗಬೇಕು. ತೀರ್ಮಾನಗಳನ್ನು ತೆಗೆದುಕೊಳ್ಳುವವರಿಗೆ ತಲುಪಬೇಕು. ಅದಕ್ಕೆ ನಿಮ್ಮ ಶಕ್ತಿಯ ಪ್ರದರ್ಶನ ಆಗಬೇಕು. ಎಲ್ಲರೂ ಒಟ್ಟಾಗಿ ಸಮಾವೇಶ ಮಾಡಿದರೆ ನಿಜವಾದ ಅರ್ಥ ಬರುತ್ತದೆ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಶಕ್ತಿ ನಿಮಗೆ ಅರ್ಥವಾಗಿಲ್ಲ. ಮೀಸಲಾತಿಯಿಂದ ನೌಕರಿ ಸಿಕ್ಕಿದೆ. ಸಂಬಳ ಬರುತ್ತದೆ. ಹೆಂಡತಿ ಮಕ್ಕಳನ್ನು ಸಾಕುತ್ತೇವೆ ಎಂದರೆ ಸಾಲುವುದಿಲ್ಲ. ಈ ಸಮುದಾಯ ಇಂದಿನವರೆಗೂ ಶೋಷಿತ ಸಮುದಾಯವಾಗಿ ಉಳಿದಿರುವ ಬಗ್ಗೆ ಚಿಂತಿಸಬೇಕಿದೆ. ಸಾವಿರ ವರ್ಷಗಳಾದರು ಜಾತಿ ವ್ಯವಸ್ಥೆ ಮುಂದುವರೆಯುತ್ತಿದೆ. ಯಾರು ಬೇಕಾದರು ಒಪ್ಪಲಿ, ಬಿಡಲಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಗವಹಿಸಿದ ವೇದಿಕೆಯನ್ನು ಶುದ್ಧೀಕರಣ ಮಾಡಿದರು. ಮಾಜಿ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಮದನ‌್ ಮೋಹನ್ ಮಾಳವೀಯ ಅವರ ಪ್ರತಿಮೆ ಉದ್ಘಾಟಿಸಿದ ಬಳಿಕ ಜಾಗವನ್ನು ಶುದ್ಧೀಕರಣ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರೆದು, ಹಳ್ಳಿಗಾಡಿನಲ್ಲಿ ಕೂಲಿ ಮಾಡುವ ಜನ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲು ಮಾಡಲು ಇನ್ನೂ ಸಾಧ್ಯವಾಗಿಲ್ಲ. ಶಾಶ್ವತ ವಿಳಾಸ ಕಲ್ಪಿಸಲು ಆಗಿಲ್ಲ. ಪ್ರತಿಯೊಬ್ಬರು, ‘ನಾವೆಲ್ಲ ನಾಲ್ಕು ಜನರನ್ನು ಪರಿವರ್ತಿಸಿ, ವಿದ್ಯಾವಂತರನ್ನಾಗಿ ಮಾಡುತ್ತೇನೆ’ ಎಂಬ ಸಂಕಲ್ಪ ಮಾಡಬೇಕು. ಆಗ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು.

ಸಮಾವೇಶವನ್ನು ನೋಡಿದರೆ ಸಮಾಜದ ಬದಲಾವಣೆ ಬಗ್ಗೆ ನಿಮ್ಮ ಧ್ವನಿ ಎಲ್ಲಿದೆ‌? ಕಳಕಳಿ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ಲಕ್ಷಾಂತರ ಜನ ಇರುವ ಎಸ್‌ಸಿ, ಎಸ್‌ಟಿ ನೌಕರರು ಧ್ವನಿ ಎತ್ತಬೇಕು. ಕೆಲವು ಬೇಡಿಕೆಗಳನ್ನು ಈಡೇರಿಸಲು‌ ಮನವಿ ಮಾಡಿದ್ದೀರಿ. ನಿಮ್ಮ ಸಮಿತಿಗೆ ಸರ್ಕಾರದಿಂದ ಮಾನ್ಯತೆ ಸಿಗುವಂತೆ ಶಕ್ತಿ ಪ್ರದರ್ಶಿಸಬೇಕು ಎಂದರು.

ನಾನು ಮತ್ತು ಸಚಿವ ಕೆ.ಹೆಚ್.ಮುನಿಯಪ್ಪ ಅವರು ನಿಮ್ಮ ಪರವಾಗಿ ಬಿಟ್ಟರೆ ಇನ್ಯಾರ ಪರವಾಗಿ ಧ್ವನಿ ಎತ್ತಬೇಕು. ನಾವು ನಿಮ್ಮ ಪರವಾಗಿ ಹೋರಾಟ ಮಾಡುವಂತವರು. ಸಿಎಂ ಅವರಿಗೆ ತಿಳಿಸಿ ಸರ್ಕಾರಿ ನೌಕರರ ಸಮಿತಿಗೆ ಮಾನ್ಯತೆ ನೀಡುವಂತೆ ತಿಳಿಸಲಾಗುವುದು ಎಂದರು‌.

ಶೋಷಿತ ಸಮುದಾಯದ ಮಕ್ಕಳು ವಿದ್ಯಾವಂತರಾಗಬೇಕು

ನಿಮ್ಮ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ಸಮಾಜಕ್ಕೆ ನೀವು ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ. ಬಡವರ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಇದು ಮಾಡಿದರೆ ನನ್ನ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಮಕ್ಕಳೊಂದಿಗೆ ಬಡವರ ಮಕ್ಕಳನ್ನು ಇಂಜಿನಿಯರ್, ವೈದ್ಯರನ್ನಾಗಿ ಮಾಡಿಸಿ. ಶೋಷಿತ ಸಮುದಾಯದ ಬಹುತೇಕ ಮಕ್ಕಳು ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆಯುತ್ತಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ, ಉತ್ತೇಜನ ನೀಡಿದರೆ ಸಾಮಾನ್ಯ ವರ್ಗದಲ್ಲಿ ನೌಕರಿ ಪಡೆದು, ಸಮಾಜದಲ್ಲಿ ಮುಂದೆ ಬರುತ್ತಾರೆ ಎಂದು ತಿಳಿಸಿದರು.

ಈ ಸಮಾವೇಶಕ್ಕೆ ಸಮುದಾಯದ ಎಲ್ಲ ಸಚಿವರು, ಶಾಸಕರು ಬಂದಿದ್ರೆ, ಸಮಾವೇಶಕ್ಕೆ ಬಲ ಬರುತ್ತಿತ್ತು. 1.20 ಲಕ್ಷ ಎಸ್‌ಸಿ, ಎಸ್‌ಟಿ ನೌಕರರಿದ್ದಾರೆ. ಸಮಾವೇಶದಲ್ಲಿ ಎಲ್ಲರು ಪಾಲ್ಗೊಳ್ಳಬೇಕು. ನಮಗೆ ಕಷ್ಟ ಇದೆ. ನಾವು ಒಗ್ಗಟ್ಟಾಗಬೇಕು ಎಂಬ ಮನೋಭಾವ ಇಲ್ಲದೆ ಹೋದರೆ ಹೇಗೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲದ ಚೇತವನ ವಿಹಾರದ ಬೌದ್ಧಬಿಕ್ಕು ಪೂಜ್ಯ ಮನೋರಕ್ಕಿತ ಬಂತೇಜಿ, ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್.ಮುನಿಯಪ್ಪ‌, ಕೊಳ್ಳೇಗಾಲ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪ,‌ ಮಾಜಿ ಸಚಿವರಾದ ಹೆಚ್.ಆಂಜನೇಯ, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿ.ನರೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಿ.ಶಿವಶಂಕರ್ ಅವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Share

You cannot copy content of this page