ಸಮಗ್ರ ಸುದ್ದಿ

ರಾಜ್ಯದ 14.21 ಲಕ್ಷ ರೈತರಿಗೆ 2249 ಕೋಟಿ ರೂ. ಪರಿಹಾರ-ಕೃಷ್ಣ ಭೈರೇಗೌಡ

Share

ಬೆಳಗಾವಿ ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಂದು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಸದನಕ್ಕೆ ಮಾಹಿತಿ ನೀಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು, ರಾಜ್ಯದಲ್ಲಿ 86.81 ಲಕ್ಷ ರೈತ ಕುಟುಂಬಗಳಿದ್ದು, 118.5 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶವಿದೆ. ಆದರೆ ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದಾಗಿ ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, 2023 ರಲ್ಲಿ ಬರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದಾಗ, ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ನಮ್ಮ ಸರ್ಕಾರ ಸುಪ್ರಿಂಕೋರ್ಟ್ ಮೊರೆಹೋಗಿ ಪರಿಹಾರ ಕೇಳುವ ಪ್ರಸಂಗ ಬರುವಂತಾಯಿತು. ಪರಿಹಾರ ಅನುದಾನಕ್ಕಾಗಿ ಸುಪ್ರಿಂಕೊರ್ಟ್ ಮೊರೆಹೋಗಿ ಅನುದಾನ ಪಡೆದದ್ದು ದೇಶದ ಇತಿಹಾಸದಲ್ಲಿ ದಾಖಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಪರಿಹಾರವನ್ನು ನಮ್ಮ ಸರ್ಕಾರ ಕೊಟ್ಟಿದೆ. 38 ಲಕ್ಷ ರೈತರಿಗೆ ಸುಮಾರು 4300 ಕೋಟಿ ರೂ. ಪರಿಹಾರವನ್ನು ನಾವು ಕೊಟ್ಟಿದ್ದೇವೆ ಎಂದರು.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ ಈಗಾಗಲೇ 2,249 ಕೋಟಿ ರೂ. ಪರಿಹಾರವನ್ನು ನೀಡಿದ್ದೇವೆ. ಸರ್ಕಾರದ ವೈಫಲ್ಯ ಇದ್ದರೆ ಟೀಕೆ ಮಾಡಲಿ, ಆದರೆ ಮಾಡಿದ ಕೆಲಸವನ್ನು ಮಾಡಿಯೇ ಇಲ್ಲ ಎಂದರೆ, ಅದನ್ನು ಕೇಳಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಮುಖ್ಯಮಂತ್ರಿಗಳು ಈಗಾಗಲೇ ಕಂದಾಯ ಸಚಿವರೊಂದಿಗೆ ದೆಹಲಿಗೆ ತೆರಳಿ, ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವರ್ಷ ರೈತರಿಗೆ ಪರಿಹಾರ ನೀಡಲು ಹಾಗೂ ಅತಿವೃಷ್ಟಿಯಿಂದ ಉಂಟಾದ ಆಸ್ತಿ ಪಾಸ್ತಿಗಳಿಗೆ ಪರಿಹಾರ ಮೊತ್ತ ಸೇರಿದಂತೆ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಅನುದಾನ ಬಿಡುಗೆ ಮಾಡಿಲ್ಲ.

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ವಿಪತ್ತು ಪರಿಹಾರದಲ್ಲಿನ ಮಾರ್ಗಸೂಚಿಗಿಂತಲೂ ಹೆಚ್ಚುವರಿಯಾಗಿ ಪರಿಹಾರ ಮೊತ್ತವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದರು.


Share

You cannot copy content of this page