ಬೆಂಗಳೂರು: ಕಸ್ತೂರಿನಗರ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಬೆಂಗಳೂರು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಕೇಂದ್ರ ಹಾಗೂ ಪೂರ್ವ ನಗರ ಪಾಲಿಕೆಗಳ ವ್ಯಾಪ್ತಿಗೆ ಬರುವ ಕಸ್ತೂರಿನಗರ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಸ್ತೂರಿನಗರದ ರಸ್ತೆಗಳು, ಪಾದಚಾರಿ ಮಾರ್ಗಗಳು, ಉದ್ಯಾನಗಳು ಸೇರಿದಂತೆ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕೆಂದು ಹೇಳಿದರು.
ಮೇಲ್ಸೇತುವೆ ಕೆಳಭಾಗದಲ್ಲಿರುವ ಕಸ ವರ್ಗಾವಣೆ ಘಟಕ ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಘಟಕದ ಅಶುಚಿತ್ವ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ಈ ಕುರಿತು ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಸ್ವಚ್ಛತೆ ಕೈಗೊಳ್ಳುವಂತೆ ಹಾಗೂ ನಿರಂತರವಾಗಿ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು.
ಮೇಲ್ಸೇತುವೆ ಕೆಳಭಾಗದಲ್ಲಿ ಕಟ್ಟಡ ಅವಶೇಷಗಳು ಮತ್ತು ಬಳಕೆಯಲ್ಲಿಲ್ಲದ ಸೋಫಾಗಳು ಸೇರಿದಂತೆ ಹಲವಾರು ತ್ಯಾಜ್ಯಗಳನ್ನು ಹಾಕಿರುವುದನ್ನು ಕಂಡು ಅವನ್ನು ತಕ್ಷಣ ತೆರವುಗೊಳಿಸಲು ಮತ್ತು ಆ ಸ್ಥಳವನ್ನು ನಾಗರಿಕರ ಬಳಕೆಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸೂಚಿಸಿದರು.
ಬೆನ್ನಿಗಾನಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿ ಹೂಳು ತುಂಬಿ ನೀರು ಹರಿವುದು ಅಡ್ಡಿಯಾಗಿರುವುದನ್ನು ಗಮನಿಸಿ, ತುರ್ತುಗಿ ಹೂಳೆತ್ತುವ ಕೆಲಸ ಕೈಗೊಂಡು ಸರಾಗವಾಗಿ ನೀರು ಹರಿವು ವ್ಯವಸ್ಥೆ ಮಾಡಬೇಕೆಂದರು. ಮೇಲ್ಸೇತುವೆ ಸರ್ವಿಸ್ ರಸ್ತೆ ಬದಿಯ ರಾಜಕಾಲುವೆಗೆ ಆರ್‌ಸಿಸಿ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಿದರು.
ಸಿ.ಸಿ ಕ್ಯಾಮೆರಾ ಅಳವಡಿಸಿ:
ಮೇಲ್ಸೇತುವೆ ಕೆಳಭಾಗದಲ್ಲಿ ಕಸ ಎಸೆಯುವುದನ್ನು ತಡೆಯಲು ಬೆಂಗಳೂರು ಘನ ತ್ಯಾಜ್ಯ ನಿಯಮಿತದ ವತಿಯಿಂದ ಸಿ.ಸಿ ಕ್ಯಾಮೆರಾ ಅಳವಡಿಸಿ ಮೇಲ್ವಿಚಾರಣೆ ಹೆಚ್ಚಿಸಲು ಸೂಚಿಸಿದರು. ಕಸ ಸುರಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಡಿಎ ಜಾಗ ಹಸ್ತಾಂತರಕ್ಕೆ ಕ್ರಮ:
ಬಿಡಿಎಗೆ ಸೇರಿದ ಜಾಗದಲ್ಲಿ ಸಫಲ್ ಡೈಲಿ ಫ್ರೆಶ್ ಕೇಂದ್ರವಿದ್ದು, ಅದು ಸದ್ಯ ಬಳಕೆಯಿಲ್ಲದ ಹಿನ್ನೆಲೆಯಲ್ಲಿ, ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡುವ ಕುರಿತು ಬಿಡಿಎಗೆ ಪತ್ರ ಬರೆಯಲು ಸೂಚಿಸಿದರು. ಜೊತೆಗೆ ಪಕ್ಕದಲ್ಲಿರುವ ಖಾಸಗಿ ಜಾಗವನ್ನು ಟಿಡಿಆರ್ ಮೂಲಕ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ರೈಲ್ವೆ ಇಲಾಖೆ ಕೆಲಸ ತ್ವರಿತಗೊಳಿಸಿ:
ಬೆನ್ನಿಗಾನಹಳ್ಳಿ ಕೆರೆ ಪ್ರದೇಶದಲ್ಲಿ ರೈಲ್ವೆ ಇಲಾಖೆ ಕೈಗೊಂಡಿರುವ ಹಳಿ ಮತ್ತು ಇತರೆ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕೆರೆಗೆ ಯಾವುದೇ ರೀತಿಯ ಹಾನಿ ಆಗದಂತೆ ಹಾಗೂ ನೀರು ಹರಿಸಲು ಕಲ್ವರ್ಟ್ ಅನ್ನು ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಲು ಸೂಚಿಸಿದರು.
ವಿವೇಕಾನಂದ ಉದ್ಯಾನವನವನ್ನು ಪುನರ್ ವಿನ್ಯಾಸಗೊಳಿಸಿ ವಾಹನಗಳ ಸುಗಮ ಸಂಚಾರಕ್ಕಾಗಿ ಜಂಕ್ಷನ್ ಅಭಿವೃದ್ಧಿಪಡಿಸಬೇಕು. ರೈಲ್ವೆ ಇಲಾಖೆ ಕೈಗೊಂಡಿರುವ ಕೆಳಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಬೆನ್ನಿಗಾನಹಳ್ಳಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಂಡು ಆಕ್ರಮಿತ ಪ್ರದೇಶ ತೆರವುಗೊಳಿಸುವುದು, ಕಸ್ತೂರಿನಗರ 1ನೇ ಮುಖ್ಯ ರಸ್ತೆಯ ಪಾದಚಾರಿ ಮಾರ್ಗದ ಮೇಲಿನ ಅನಧಿಕೃತ ನಿರ್ಮಾಣ ತೆರವುಗೊಳಿಸಬೇಕು.
ಕಸ್ತೂರಿನಗರದ ಒಣ ತ್ಯಾಜ್ಯ ಸಂಗ್ರಹ ಘಟಕವನ್ನು ವಾರ್ಡ್ ಕಛೇರಿಗೆ ಬಳಸಿಕೊಳ್ಳುವಂತೆ ಸೂಚಿಸಿದರು.3ನೇ ಅಡ್ಡರಸ್ತೆ ಬಳಿಯ ಕಸ ವರ್ಗಾವಣೆ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸುವುದು. 2ನೇ ಹೆಚ್ ಮುಖ್ಯ ರಸ್ತೆಯ ರಾಜಕಾಲುವೆಯಲ್ಲಿ ಹೂಳೆತ್ತಿ ಆರ್.ಸಿ.ಸಿ ತಡೆಗೋಡೆ ನಿರ್ಮಿಸಬೇಕು ಎಂದರು.
ಬೆನ್ನಿಗಾನಹಳ್ಳಿ ಕೆರೆ ಹತ್ತಿರ ಖಾಲಿ ಜಾಗದಲ್ಲಿ ತ್ಯಾಜ್ಯ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸುವುದು. ಪುರವಂಕರ ಅಪಾರ್ಟ್‌ಮೆಂಟ್ ಹತ್ತಿರ ರೈಲ್ವೆ ಕೆಳಸೇತುವೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮವಹಿಸಬೇಕು ಎಂದರು.
ರೈಲ್ವೆ ಹಳಿ ದಾಟುವಲ್ಲಿ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಪಾದಚಾರಿ ಮಾರ್ಗಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಅಭಿವೃದ್ಧಿ ಅಪರ ಆಯುಕ್ತರುಗಳಾದ ಲೋಖಂಡೆ ಸ್ನೇಹಲ್ ಸುಧಾಕರ್, ದಲ್ಜಿತ್ ಕುಮಾರ್, ಅಪರ ಆಯುಕ್ತ (ಕಂದಾಯ) ಪ್ರಜ್ಞಾ ಅಮ್ಮೆಂಬಾಳ, ಜಂಟಿ ಆಯುಕ್ತ ಸುಧಾ, ಬೆ.ಘ.ತ್ಯಾ.ನಿ. ನಿಯಮಿತದ ಸಿಓಓ ರಮಾಮಣಿ, ಮುಖ್ಯ ಅಭಿಯಂತರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
